ADVERTISEMENT

ಅಸಮರ್ಪಕ ವಿದ್ಯುತ್ ಪೂರೈಕೆ: ರೈತರಿಂದ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 8:49 IST
Last Updated 7 ಏಪ್ರಿಲ್ 2018, 8:49 IST

ಮುಂಡರಗಿ: ಪಂಪ್ ಸೆಟ್‌ಗಳಿಗೆ ನಿಯಮಿತವಾಗಿ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಶುಕ್ರವಾರ ಸಂಜೆ ಹೆಸ್ಕಾಂ ಕಚೇರಿ ಮುಂದಿರುವ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ದಿಢೀರ್ ಪ್ರತಿಭಟನೆ ನಡೆಸಿದರು.ತಾಲ್ಲೂಕಿನ ಸಿಂಗಟಾಲೂರು, ಕೊರ್ಲಹಳ್ಳಿ, ಹೆಸರೂರು ಮೊದಲಾದ ಗ್ರಾಮಗಳಿಂದ ಬಂದಿದ್ದ ರೈತರು ದಿಢೀರ್ ರಸ್ತೆ ತಡೆ ನಡೆಸಿದ್ದರಿಂದ ವಾಹನ ಸವಾರರು ಹಾಗೂ ಪ್ರಯಾಣಿಕರು ಪರದಾಡುವಂತಾಯಿತು.

ತುಂಗಭದ್ರಾ ನದಿಗೆ ಇತ್ತೀಚೆಗೆ ಎರಡು ಟಿಎಂಸಿ ಅಡಿ ನೀರನ್ನು ಬಿಡಲಾಗಿದೆ. ನದಿಯಲ್ಲಿ ನೀರು ಹರಿಯುತ್ತಿದ್ದು, ಹೆಸ್ಕಾಂನವರು ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸುರುವುದರಿಂದ ರೈತರು ಜಮೀನಿಗೆ ನೀರು ಹಾಯಿಸಿಕೊಳ್ಳದಂತಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ವೀರನಗೌಡ ಪಾಟೀಲ ದೂರಿದರು.

ಹೆಸ್ಕಾಂ ಅಧಿಕಾರಿಗಳು ಕಳೆದ ನಾಲ್ಕು ದಿನಗಳಿಂದ ಸಮರ್ಪಕವಾಗಿ ವಿದ್ಯುತ್ ಪೂರೈಸದೆ ಇರುವುದರಿಂದ ಬೆಳೆಗಳೆಲ್ಲ ಒಣಗುತ್ತಲಿವೆ ಎಂದು ಆರೋಪಿಸಿದರು.ವಿದ್ಯುತ್‌ ಏರುಪೇರಿನಿಂದಾಗಿ ಪಂಪ್‌ಸೆಟ್‌ಗಳು ಸುಟ್ಟುಹೋಗಿವೆ. ಬೆಳೆ ಹಾನಿ, ಮಳೆ ಕೊರತೆ, ಅಸಮರ್ಪಕ ವಿದ್ಯುತ್ ಪೂರೈಕೆ ಮೊದಲಾದ ಕಾರಣಗಳಿಂದ ಕಂಗಾಲಾಗಿರುವ ರೈತರು ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.

ADVERTISEMENT

ಪೊಲೀಸರು ಸ್ಥಳಕ್ಕೆ ಬಂದು ರೈತ ಮನ ಒಲಿಸಿ ರಸ್ತೆ ತೆರವುಗೊಳಿಸಿದರು. ನಂತರ ರೈತರು ಹೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆಯನ್ನು ಮುಂದುವರಿಸಿದರು.

ನಂತರ ಹೆಸ್ಕಾಂ ಹಿರಿಯ ಅಧಿಕಾರಿ ಗೌರೋಜಿ ಪ್ರತಿಭಟನಾಕಾರರ ಬಳಿ ಬಂದು ರಾತ್ರಿ 10 ಗಂಟೆಯ ನಂತರ ನಿಯಮಿತವಾಗಿ ತ್ರಿಫೇಸ್‌ ವಿದ್ಯುತ್ ಪೂರೈಸಲಾಗುವುದು ಎಂದು ಭರವಸೆ ನೀಡಿದರು.

ಕೋಟೆಪ್ಪ ಕ್ಯಾತಣ್ಣವರ, ರಾಜಾಬಕ್ಷಿ ಬುಡ್ಡಣ್ಣವರ, ಭೀಮಣ್ಣ ಕ್ಯಾತಣ್ಣವರ, ಹನುಮಂತ ಗಾಜಿ, ರವಿ ಕೊಳಲ, ಈರಣ್ಣ ಬಚೇನಹಳ್ಳಿ, ರಾಯಪ್ಪ ಎಳವತ್ತಿ, ಮಳ್ಳಪ್ಪ ಕುರಬರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.