ADVERTISEMENT

ಉತ್ತಮ ವ್ಯಕ್ತಿತ್ವದಿಂದ ಆದರ್ಶ ಸಮಾಜ

ರೇಣುಕಾಚಾರ್ಯರ ಜಯಂತಿ ಸಮಾರಂಭದಲ್ಲಿ ಮಾಜಿ ಸಚಿವ ಸಿ.ಸಿ. ಪಾಟೀಲ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 6:35 IST
Last Updated 20 ಮಾರ್ಚ್ 2017, 6:35 IST

ನರಗುಂದ: ಸಮಾಜದ ಹಿತ ಬಯಸುವಲ್ಲಿ ಜಂಗಮರ ಪಾತ್ರ ಪ್ರಮುಖವಾಗಿದೆ. ಇದರ ಪ್ರವರ್ತಕರಾದ  ರೇಣುಕಾಚಾರ್ಯರ ಸಿದ್ದಾಂತಗಳು ಸಾರ್ವಕಾಲಿಕ. ಆದರಲ್ಲೂ ಪ್ರಸ್ತುತ ಸಂದರ್ಭದಲ್ಲಿ ಅವುಗಳ ಪಾಲನೆ  ಅಗತ್ಯವಾಗಿದೆ ಎಂದು  ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಸಿ. ಪಾಟೀಲ ಸಲಹೆ ಮಾಡಿದರು.

ಪಟ್ಟಣದಲ್ಲಿ ಭಾನುವಾರ ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ  ನಡೆದ ರೇಣುಕಾಚಾರ್ಯರ  ಜಯಂತಿ ಸಮಾರಂಭದಲ್ಲಿ ಮಾತನಾಡಿದರು.

ರೇಣುಕಾಚಾರ್ಯರ ಸಿದ್ಧಾಂತ ಶಿಖಾಮಣಿ ಶ್ರೇಷ್ಠ ಗ್ರಂಥವಾಗಿದೆ.  ಇದರ ಅಧ್ಯಯನ ಅಗತ್ಯವಾಗಿದೆ.  ಜೊತೆಗೆ ಪ್ರತಿಯೊಬ್ಬರ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಉತ್ತಮ ಆದರ್ಶಗಳು ಪಾಲನೆಯಾಗುತ್ತವೆ. ಇದರ ಮೂಲಕ ಶ್ರೇಷ್ಠ ಸಮಾಜ ನಿರ್ಮಿತಗೊಳ್ಳಲು ಸಾಧ್ಯ ಎಂದು ಪಾಟೀಲ ಹೇಳಿದರು.

ಸಾನ್ನಿಧ್ಯ ವಹಿಸಿದ್ದ  ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ  ಜಂಗಮರು ಮೊದಲು ಸಮಾಜದ ಏಳ್ಗೆ ಬಯಿಸಿ, ನಂತರ ತನ್ನ ಹಿತ ಬಯಸುತ್ತದೆ. ಇದು ಮಾದರಿ ಸಮಾಜವಾಗಲು ಮುಂದಾಗಬೇಕು ಎಂದು ತಿಳಿಸಿದರು.

ಜಂಗಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿ.ಕೆ.ಗುರುಮಠ ಮಾತನಾಡಿ ರೇಣುಕಾಚಾರ್ಯರ ಕುರಿತು ಹಾಗೂ ಜಂಗಮ ಸಮಾಜದ  ಸಂಘಟನೆ ಕುರಿತು ಮಾತನಾಡಿದರು.

ಇದೇ ಸಂದರ್ಭದಲ್ಲಿ ವೀರಯೋಧರ ಕುಟುಂಬದ ಸದಸ್ಯರನ್ನು, 10ನೇ ತರಗತಿ, ಪಿಯುಸಿ ಹಾಗೂ  ಕ್ರೀಡಾ ಸಾಧಕರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ವಿರಕ್ತಮಠದ ಶಿವಕುಮಾರ ದೇವರು, ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀ, ಕ್ಷೇಮಾಭಿವೃದ್ಧಿ  ಸಂಘದ ಗೌರವಾಧ್ಯಕ್ಷ ಎಸ್‌,ಆರ್‌. ಹಿರೇಮಠ, ಅಧ್ಯಕ್ಷ ಚನ್ನಯ್ಯ ಸಂಗಳಮಠ. ವಿ.ಕೆ.ಗುರುಮಠ, ಜಿಲ್ಲಾ ಪಂಚಾಯ್ತಿ ಸದಸ್ಯ ರಾಜುಗೌಡ ಕೆಂಚನಗೌಡ್ರ,  ಸುಕನ್ಯಾ ಸಾಲಿ  ಮತ್ತಿತರರು ಹಾಜರಿದ್ದರು.

ಸಂಭ್ರಮದ ಮೆರವಣಿಗೆ: ಇದಕ್ಕೂ ಮೊದಲು ನಡೆದ ರೇಣುಕಾಚಾರ್ಯರ  ಭಾವಚಿತ್ರದ  ಮೆರವಣಿಗೆಗೆ ಶಾಸಕ ಬಿ.ಆರ್‌. ಯಾವಗಲ್‌ ಚಾಲನೆ ನೀಡಿದರು. ಮೆರವಣಿಗೆಯಲ್ಲಿ 108 ಮಹಿಳೆಯರ ಕುಂಭ ಮೆಳ ಹಾಗೂ ಸಕಲವಾದ್ಯಮೇಳ, ಡೊಳ್ಳು ಕುಣಿತ ಆಕರ್ಷಕವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.