ADVERTISEMENT

ಒಗ್ಗಟ್ಟಿನಿಂದ ಹೋರಾಡಲು ರೈತರಿಗೆ ಸಲಹೆ

ರೋಣ: ಉತ್ತರ ಕರ್ನಾಟಕ ರೈತ ಸಂಘದಿಂದ ಅನ್ನದಾತರ ಆಂದೋಲನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 9:14 IST
Last Updated 9 ಜನವರಿ 2017, 9:14 IST
ರೋಣ ಪಟ್ಟಣದ ಮಾರುಕಟ್ಟೆ ಮೈದಾನದಲ್ಲಿ ಅನ್ನದಾತರ ಆಂದೋಲನ ಅಂಗವಾಗಿ ನಡೆದ ಸಭೆಯಲ್ಲಿ ರೈತರಿಂದ ಅಹವಾಲು ಸ್ವೀಕರಿಸಲಾಯಿತು
ರೋಣ ಪಟ್ಟಣದ ಮಾರುಕಟ್ಟೆ ಮೈದಾನದಲ್ಲಿ ಅನ್ನದಾತರ ಆಂದೋಲನ ಅಂಗವಾಗಿ ನಡೆದ ಸಭೆಯಲ್ಲಿ ರೈತರಿಂದ ಅಹವಾಲು ಸ್ವೀಕರಿಸಲಾಯಿತು   
ರೋಣ: ‘ರೈತರ ಸಮಸ್ಯೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಆದ್ದರಿಂದ ಬೇಡಿಕೆಗಳ ಈಡೇರಿಕೆಗೆ ರೈತರು ಒಗ್ಗಟ್ಟಿನಿಂದ ಹೋರಾಡಬೇಕು’ ಎಂದು ಉತ್ತರ ಕರ್ನಾಟಕ ರೈತ ಸಂಘದ ಅಧ್ಯಕ್ಷ ಡಾ.ವಿಜಯಾನಂದ ಸ್ವಾಮಿ ಕರೆ ನೀಡಿದರು.
 
ಉತ್ತರ ಕರ್ನಾಟಕ ರೈತ ಸಂಘದ ವತಿಯಿಂದ ಇಲ್ಲಿಯ ಹಳೆ ಸಂತೆ ಮಾರುಕಟ್ಟೆ ಸಮಿಪ ಮಿನಿ ಬಸ್ ನಿಲ್ದಾಣ ಆವರಣದಲ್ಲಿ ಅನ್ನದಾತರ ಆಂದೋಲ ನದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
 
‘ಉತ್ತರ ಕರ್ನಾಟಕದ ರೈತರು ಹಲವಾರು ವರ್ಷಗಳಿಂದ ಬರಗಾ ಲದಿಂದ ತೊಂದರೆಗೀಡಾಗಿದ್ದಾರೆ. ಬೆಳೆ ಹಾನಿಯಾಗಿದ್ದು, ಬೆಳೆಗೆ ಸೂಕ್ತ ಬೆಲೆ ದೊರಕದಿರುವುದು, ವಿದ್ಯುತ್‌ ಅಭಾವ ಮುಂತಾದ ಸಮಸ್ಯೆಗಳಿಂದ ರೈತರು ಬಳಲುತ್ತಿದ್ದಾರೆ. ದೇಶಕ್ಕೇ ಅನ್ನ ನೀಡುವ ರೈತ, ಈಗ ಬೇಡಿ ಬದುಕುವ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಇದೇ 1ರಿಂದ 15ರ ವರೆಗೆ ಉತ್ತರ ಕರ್ನಾಟಕ ಮತ್ತು ಹೈದರಾಬಾದ್‌ ಕರ್ನಾಟಕ ಪ್ರದೇಶಗಳಲ್ಲಿ ರಥ ಯಾತ್ರೆ ಮೂಲಕ ಸಂಚರಿಸಿ, ರೈತರಲ್ಲಿ ಜಾಗೃತಿ  ಮೂಡಿಸಲಾಗುತ್ತಿದೆ. ಇದೇ 19ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್‌ ಸಭೆ ನಡೆಸುವ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು’ ಎಂದರು.
 
ರಾಜ್ಯ ಉಪಾಧ್ಯಕ್ಷ ತಿಮ್ಮನಗೌಡ ಕಣವಿ ತಿಮ್ಮಾಪುರ ಮಾತನಾಡಿ, ‘ಐದು ದಶಕಗಳಿಂದ ಮಹಾದಾಯಿ ಯೋಜನೆ ನನೆಗುದಿಗೆ ಬಿದ್ದಿದೆ. ವಿವಿಧ ಕಾಲುವೆಗಳು ಕಳಪೆ ಕಾಮಗಾರಿಯಿಂದ ಹೂಳು ತುಂಬಿದ್ದು, ಜಾಲಿ ಕಂಟಿಗಳು ಬೆಳೆದಿವೆ. ಹೀಗಾಗಿ ಕಾಲುವೆಗಳ ಮೂಲಕ ರೈತರಿಗೆ ನೀರು ಸಿಗದೇ ತೊಂದರೆಯಾಗಿದೆ. ಕಾರಣ ಸರ್ಕಾರ ಕೂಡಲೇ ಕಾಲುವೆಗಳ ದುರಸ್ತಿಗೆ ಮುಂದಾಗಬೇಕು’ ಎಂದು ಸ್ವಾಮಿ ಆಗ್ರಹಿಸಿದರು.
 
ರಥಯಾತ್ರೆಯ ಮೂಲಕ ಪಟ್ಟಣದ ತಹಶೀಲ್ದಾರ್‌ ಕಚೇರಿ, ಕೃಷಿ ಇಲಾಖೆ, ಬಸ್ ನಿಲ್ದಾಣ, ಮುಲ್ಲಾನಭಾವಿ ವೃತ್ತ, ಸೂಡಿ ವೃತ್ತದಲ್ಲಿ ಸಭೆ ನಡೆಸಿ ರೈತರಿಂದ ಅಹವಾಲು ಸ್ವೀಕರಿಸಲಾಯಿತು.
 
ಸಂಘದ ವಕ್ತಾರ ಮಹಮ್ಮದ್‌ ಸಿಕಂದರ್‌, ಹೊಸಪೇಟೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಪ್ಪ ಕಲ್ಬುರ್ಗಿ, ಪರ ಮೇಶಿ ಹೊಸಪೇಟಿ, ರೈತರಾದ ದೇವಪ್ಪ ಹುನಗುಂದ, ಉಮೇಶ ಗುಡಿಮನಿ, ಭರಮಪ್ಪ ಸಂಗನಾಳ, ಬಸಪ್ಪ ನಾಯ್ಕರ, ಚಂದ್ರಪ್ಪ ಗೊರವರ ಸೇರಿದಂತೆ ಕುರ ಹಟ್ಟಿ, ಹುಲ್ಲೂರ, ಜಿಗಳೂರ, ರೋಣ ಪಟ್ಟಣ, ಭಾಸಲಾಪುರ, ಕೊತಬಾಳ, ನೆಲ್ಲೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.