ADVERTISEMENT

ಒಗ್ಗಟ್ಟಿನ ಹೋರಾಟಕ್ಕೆ ಸಂದ ಜಯ

ಕಪ್ಪತಗುಡ್ಡ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ: ವಿಜಯೋತ್ಸವ, ತೋಂಟದ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 6:13 IST
Last Updated 14 ಏಪ್ರಿಲ್ 2017, 6:13 IST
ಗದುಗಿನ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ವಿಜಯೋತ್ಸವದಲ್ಲಿ ಹೋರಾಟಗಾರರನ್ನು ಸನ್ಮಾನಿಸಲಾಯಿತು. ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು. ಪ್ರಭು ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ಶಾಂತಲಿಂಗ ಸ್ವಾಮೀಜಿ ಇದ್ದಾರೆ
ಗದುಗಿನ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ವಿಜಯೋತ್ಸವದಲ್ಲಿ ಹೋರಾಟಗಾರರನ್ನು ಸನ್ಮಾನಿಸಲಾಯಿತು. ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು. ಪ್ರಭು ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ಶಾಂತಲಿಂಗ ಸ್ವಾಮೀಜಿ ಇದ್ದಾರೆ   

ಗದಗ: ಕಪ್ಪತಗುಡ್ಡ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವೆಂದು ಮರು ಘೋಷಣೆ ಆಗಿದ್ದು ಸಂತಸ ತಂದಿದೆ. ಕಪ್ಪತಗುಡ್ಡ ಸಂರಕ್ಷಣೆಗಾಗಿ ಶ್ರಮವಹಿಸಿದ ವಿವಿಧ ಮಠಾಧೀಶರು, ಪರಿಸರವಾದಿಗಳು, ಸಂಘ, ಸಂಸ್ಥೆಗಳಿಗೆ ಗೆಲುವಿನ ಶ್ರೇಯಸ್ಸು ಸಲ್ಲುತ್ತದೆ ಎಂದು ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಕಪ್ಪತಗುಡ್ಡ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವೆಂದು ಮರು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಇಲ್ಲಿನ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ವಿಜಯೋತ್ಸವ, ಹೋರಾಟದಲ್ಲಿ ಪಾಲ್ಗೊಂಡ ಸಂಘ, ಸಂಸ್ಥೆಗಳಿಗೆ ಅಭಿನಂದನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಹೋರಾತ್ರಿ ಉಪವಾಸ ಸತ್ಯಾಗ್ರಹ ಹಾಗೂ ಮುಖ್ಯಮಂತ್ರಿಗಳಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿಸಿದೆ ಎಂದರು.

ಪರಿಸರ ಸಂರಕ್ಷಣೆ ಮಠಾಧೀಶರ, ಪರಿಸರವಾದಿಗಳ, ವಿವಿಧ ಸಂಘಟನೆಗಳ ಕಾರ್ಯವಾಗದೇ, ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ. ಪರಿಸರದ ಬಗ್ಗೆ ಕಾಳಜಿ ವಹಿಸಿದರೆ ಮಾತ್ರ ನಮ್ಮ ಸುತ್ತಲಿನ ವಾತಾವರಣ ಹಸಿರಾಗುತ್ತದೆ. ದಿನದಿಂದ ದಿನಕ್ಕೆ ಪರಿಸರ ನಾಶವಾಗುತ್ತ ಹೊರಟಿದೆ. ಸಾರ್ವಜನಿಕರು ಜಾಗೃತರಾಗಿ ತಮ್ಮ ಮನೆ ಅಂಗಳದಲ್ಲಿ, ರಸ್ತೆ ಪಕ್ಕದಲ್ಲಿ, ಉದ್ಯಾನದಲ್ಲಿ ಗಿಡ ಬೆಳೆಸಿ ಪೋಷಿಸ ಬೇಕು ಎಂದು ಸಲಹೆ ನೀಡಿದರು.

ತೋಂಟದ ಶ್ರೀ ಹಾಗೂ ವಿವಿಧ ಮಠಾಧೀಶರನ್ನು ಒಳಗೊಂಡ ತಂಡ ಬೆಳಗಾವಿ ಅಧಿವೇಶನ ಅವಧಿಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಕಪ್ಪತ ಗುಡ್ಡದ ಮಹತ್ವ ತಿಳಿಸಿ, ಧರಣಿ ಸತ್ಯಾಗ್ರಹ ದಲ್ಲಿ ಪಾಲ್ಗೊಳ್ಳುವ ಮೂಲಕ ಪರಿಸರ ಕಾಳಜಿವಹಿಸಿದ್ದಾರೆ. ಕಪ್ಪತಗುಡ್ಡಕ್ಕೆ ಸಂರ ಕ್ಷಿತ ಸ್ಥಾನಮಾನ ನೀಡಿರುವುದರಿಂದ ಉತ್ತರ ಕರ್ನಾಟಕ ಭಾಗದ ಪರಿಸರ ಪ್ರೇಮಿಗಳಲ್ಲಿ ಸಂತಸ ಮೂಡಿದೆ ಎಂದು ಭೈರನಹಟ್ಟಿ ದೊರೆಸ್ವಾಮಿ ಮಠದ ಶಾಂತ ಲಿಂಗ ಸ್ವಾಮೀಜಿ ತಿಳಿಸಿದರು.

ಸರ್ಕಾರ ಕಪ್ಪತಗುಡ್ಡಕ್ಕೆ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವೆಂದು ಘೋಷಿ ಸುವಲ್ಲಿ ಮಠಾಧೀಶರು, ಪರಿಸರವಾದಿ ಗಳು, ಸಂಘ, ಸಂಸ್ಥೆಗಳು ಹಾಗೂ ಸಾರ್ವ ಜನಿಕರು ಶ್ರಮಿಸಿದ್ದಾರೆ. ಎಲ್ಲರೂ ಒಗ್ಗಟ್ಟಿ ನಿಂದ ಹೋರಾಡಿದ್ದರಿಂದ ಗೆಲುವು ಲಭಿ ಸಿದೆ ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ಹೇಳಿದರು.

ಕಪ್ಪತಗುಡ್ಡ ಹೋರಾಟದಲ್ಲಿ ಭಾಗವ ಹಿಸಿದ್ದ ಪರಿಸರವಾದಿಗಳು ಹಾಗೂ ವಿವಿಧ ಸಂಘ, ಸಂಸ್ಥೆಗಳ ಮುಖಂಡ ರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬರಿಗೂ ಸಿಹಿ ಹಂಚಲಾಯಿತು.

ಸೊಂಡೂರಿನ ವಿರಕ್ತಮಠದ ಪ್ರಭು ಸ್ವಾಮೀಜಿ, ಕಪೋತಗಿರಿ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಾಸಣ್ಣ ಕುರಡಗಿ, ನಗರಸಭೆ ಸದಸ್ಯ ಸದಾನಂದ ಪಿಳ್ಳಿ, ಕೃಷ್ಣಾ ಪರಾಪೂರ, ರವಿಕಾಂತ ಅಂಗಡಿ, ಚಂದ್ರಕಾಂತ ಚವ್ಹಾಣ, ರುದ್ರಣ್ಣ ಗುಳ ಗುಳಿ, ವಿಜಯ ಮುಳಗುಂದ, ಸೈಯ್ಯದ್‌ ಖಾಲೀದ ಕೊಪ್ಪಳ, ಜಿಲ್ಲಾ ವಾಣಿಜ್ಯೋ ದ್ಯಮ ಸಂಸ್ಥೆ ಅಧ್ಯಕ್ಷ ಎಸ್.ಪಿ.ಸಂಶಿಮಠ, ಎಸ್.ಎಸ್.ಪಟ್ಟಣಶೆಟ್ಟಿ, ಎಸ್.ಕೊಟ್ರೇಶ ಪಾಲ್ಗೊಂಡಿದ್ದರು.

*
ಕಪ್ಪತಗುಡ್ಡದ ಮುಂದುವರಿದ ಭಾಗವಾಗಿ 40 ಸಾವಿರ ಎಕರೆ ಅರಣ್ಯ ಪ್ರದೇಶ ಬೆಳೆಸಲು ಪರಿಸರ ತಜ್ಞರ ಸಮಿತಿ ರಚಿಸುವ ಬೇಡಿಕೆಗೆ ಸಿಎಂ ಸಿದ್ಧರಾಮಯ್ಯ ಸಮ್ಮತಿ ಸೂಚಿಸಿದ್ದಾರೆ.
–ಸಿದ್ಧಲಿಂಗ ಸ್ವಾಮೀಜಿ,
ತೋಂಟದಾರ್ಯ ಮಠ, ಗದಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT