ADVERTISEMENT

ಕೆಲಸ ಅರಸಿ ಎಲ್ಲಿಂದಲೋ ಬಂದವರು..

ಚಿಂತೆ ಮೂಟೆ ಹೊತ್ತು ಸಾಗದ ಸಂತೃಪ್ತರು!

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 6:13 IST
Last Updated 16 ಜನವರಿ 2017, 6:13 IST
ಕಬ್ಬು ಕಟಾವು ಮಾಡುತ್ತಿರುವ ಗಜೇಂದ್ರಗಡ ಸಮೀಪದ ಸಣಾಪುರ ಗ್ರಾಮದ ಲಂಬಾಣಿ ಕುಟುಂಬ
ಕಬ್ಬು ಕಟಾವು ಮಾಡುತ್ತಿರುವ ಗಜೇಂದ್ರಗಡ ಸಮೀಪದ ಸಣಾಪುರ ಗ್ರಾಮದ ಲಂಬಾಣಿ ಕುಟುಂಬ   

ಗಜೇಂದ್ರಗಡ: ಕೆಲಸ ಇರುವವರೆಗೆ ಇಲ್ಲಿ, ಇಲ್ಲಿ ಮುಗಿದ ನಂತರ ಮತ್ತೊಂದು ಕಡೆಗೆ, ಏಕೆಂದರೆ ಬದುಕು ಕಟ್ಟಿಕೊಳ್ಳಲು ಸಂಸಾರದ ಬಂಡಿ ಎಳೆಯಲು ಅಲೆ ಮಾರಿ ಬದುಕು ಇವರ ಪಾಲಿಗೆ ಅನಿವಾರ್ಯ.

ಕೊಪ್ಪಳ ಜಿಲ್ಲೆಗೆ ಹೊಂದಿದ ಸಣಾ ಪುರ ಎಂಬ ಗ್ರಾಮದಿಂದ ಸುಮಾರು 22 ಲಂಬಾಣಿ ಕುಟುಂಬ ಕೆಲಸ ಅರಸುತ್ತಾ ಅಲೆಮಾರಿಗಳಾಗಿ ಇಲ್ಲಿನ ಪ್ರಗತಿಪರ ರೈತ ಶಿವರಾಜ ಘೋರ್ಪಡೆ ಅವರ ಜಮೀನಿ ನಲ್ಲಿ  ಕಬ್ಬು ಕಡಿಯಲು ಬಂದಿದ್ದಾರೆ. ಕೆಲವು ದಿನ ಬೀಡು ಬಿಟ್ಟು, ಈ ಕೆಲಸ ಮುಗಿದರೆ ಮತ್ತೊಂದು ಊರು ಅರಸಿ ಹೋಗುತ್ತಾರೆ.

ಅದು ಸಿಗದಿದ್ದರೆ ಅನಿವಾರ್ಯವಾಗಿ ತಮ್ಮ ಊರು ಸೇರುತ್ತಾರೆ. ವರ್ಷದಲ್ಲಿ ಸುಮಾರು 8–10 ತಿಂಗಳು ಕೂಲಿ ಅರಸಿ ಮನೆ, ಮಂದಿ ತೆರಳಿ, ಅಲ್ಲಿ ಇರುವಷ್ಟು ದಿನ ಚಳಿ ಮಳೆಗೆ ತಮ್ಮ ಬದುಕು ಒಡ್ಡಿ ಟೆಂಟ್‌ ಹಾಕಿಕೊಂಡು ಇರುತ್ತಾರೆ.

ಮಕ್ಕಳು ಇವರ ಜೊತೆಗೆ ಬರುತ್ತಾರೆ. ಅವರಿಗೆ ಶಿಕ್ಷಣ ಗಾವುದ ದೂರ,  ಕೆಲವರು ಊರಲ್ಲಿ ಯಾರದ್ದೊ ನೆರವು ಪಡೆದು ಶಾಲೆಗೆ ಹೋಗುತ್ತಾರೆ. 
‘ಕೆಲಸ ಸಿಕ್ಕರೆ ಬೇರೆಡೆಗೆ ಹೋಗ್ತೀವಿ. ಸಿಗದಿದ್ದರೆ ಊರು ಸೇರ್ತೀವಿ. ನಮ್ಮೂ ರಲ್ಲಿ ನಮಗೆ ಕೆಲಸ ಸಿಕ್ರೆ ನಮ್ಮ ಮಕ್ಕಳನ್ನು ಶಾಲಿ ಕಲ್ಸೂದ್ ಬಿಟ್ಟು ಯಾಕ್ ಬರ್ತಿದ್ವಿ. ಸರ್ಕಾರ ಸುಮ್ನ ಹೇಳತ್ತ, ಎಲ್ಲೈತ್ರಿ ಕೆಲಸ’ ಎಂದು ಮಂಜು ಪ್ರಶ್ನಿಸುತ್ತಾರೆ.

ಇಲ್ಲಿ ಕಬ್ಬು ಕಡಿಯಲು ಬಂದ ಈ ಜನ ಜಮೀನಿನ ಪಕ್ಕದಲ್ಲಿ ಟೆಂಟ್ ಹಾಕಿ ಕೊಂಡು ಬೆಳಗಿನ ಸಮಯದಲ್ಲಿ ಮಹಿಳೆ ಯರು ಸೇರಿದಂತೆ ಎಲ್ಲರೂ ಕಬ್ಬು ಕಡಿ ಯಲು ಆರಂಭಿಸುತ್ತಾರೆ. ಹೊತ್ತು ಏರು ವವರೆಗೂ ಕೆಲಸ ಮಾಡಿ ನಂತರ ಅಡುಗೆ ಮಾಡಿಕೊಂಡು ಉಂಡು, ಸಂಜೆ ಪುನಃ ಹೊತ್ತು ಮುಳುಗುವವರೆಗೂ ದುಡಿಯು ತ್ತಾರೆ. ಹಬ್ಬ–ಹುಣ್ಣಿಮೆ ಇವರ ಪಾಲಿಗೆ ಮರೀಚಿಕೆ. ‘ಹಬ್ಬ, ಹುಣ್ಣಿಮೆ ನೋಡಿ ದರೆ ನಮ್ಮ ತುತ್ತಿನ ಚೀಲ ತುಂಬುವುದು ಹೇಗೆ, ಅದು ಬೇರೆ ಊರಲ್ಲಿದ್ದಾಗ’ ಎಂದು ಕಬ್ಬು ಕಡಿಯುವ ಮಂಜುಳಾ ಹೇಳುತ್ತಾಳೆ.

‘ಇಲ್ಲಿ ಪ್ರತಿ ಟನ್ ಕಬ್ಬು ಕಡಿಯಲು ದಿನಕ್ಕೆ ಸುಮಾರು ₹ 500 ಸಿಗುತ್ತದೆ. ದೊಡ್ಡ ಸಂಸಾರಕ್ಕೆ ಇದು ಎಲ್ಲಿ ಸಾಲುತ್ತೆ, ನಮಗೆ ಇಂತಹ ಕೆಲಸ ಕರಗತವಾದದ್ದ ರಿಂದ ಇದರಲ್ಲಿಯೇ ದುಡಿದು ಬದುಕು ತ್ತಿದ್ದೇವೆ’ ಎನ್ನುತ್ತಾರೆ ವೆಂಕಟೇಶ.

ಮೈ ಹಣ್ಣಾಗಿಸಿಕೊಂಡು ದುಡಿದು ರಾತ್ರಿ ಭೂದೇವಿಗೆ ಮೈಹಚ್ಚಿದರೆ ಸಾಕು, ಎಚ್ಚರವಾಗುವುದು, ನೇಸರ ಮೂಡಿ ದಾಗ, ಇವರ ಬದುಕೇ ಹೀಗೆ. ಇವರ ಮಕ್ಕಳು ಅಕ್ಷರವಂಚಿತರಾಗಿ ಪಾಲಕರ ದುಡಿತವನ್ನು ಮೈಗೂಡಿಸಿಕೊಂಡು ಅವರ ಹಾದಿ ಹಿಡಿಯುತ್ತಾರೆ. ಏಕೆಂದರೆ ಹಸಿವೆ ಎಂಬ ಹೆಬ್ಬಾವು ಇವರ ಹೊಟ್ಟೆ ಹೊಕ್ಕಾಗ ಅದನ್ನು ಇಳಿಸಲು ದುಡಿಕೆ ಉಸಿರಿನಷ್ಟೆ ಅನಿವಾರ್ಯ.

ಜಾತಿ, ಬಡ ತನ ಇವರ ಬದುಕಿನಲ್ಲಿ ಮುಖಾಮುಖಿ ಯಾದ ಕಾರಣ ಒಡಲ ಕಿಚ್ಚಿಗಾಗಿ ಸ್ವಾಭಿ ಮಾನದಿಂದ ಮೈಮುರಿದು ದುಡಿಯುತ್ತಿ ದ್ದಾರೆ. ಅದಕ್ಕೆ ಹೇಳುವುದು, ಹಸಿವೆ ಎಂಬುವುದು ಅನ್ವೇಷಣೆ ತಾಯಿಯಂತೆ.
-ಡಾ.ಮಲ್ಲಿಕಾರ್ಜುನ ಕುಂಬಾರ

*
ಈಗ ಊರು ಬಿಟ್ಟು ನಾಲ್ಕು ತಿಂಗಳಾಯಿತು. ದಾವಣಗೇರಿ, ಹಾವೇರಿಯಲ್ಲಿ ದುಡಿದು. ಕೈಗಳಿಗೆ ಕೆಲಸವಿಲ್ಲದೇ ಅನಿವಾರ್ಯವಾಗಿ ಇಲ್ಲಿಗೆ ಕಬ್ಬು ಕಡಿಯಲು ಬಂದಿದ್ದೇವೆ.
-ಮಂಜು,
ಸಣಾ ಪುರದ ಕಾರ್ಮಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT