ಡಂಬಳ: ಗ್ರಾಮದ ಹೊರವಲಯದಲ್ಲಿ ರಾಶಿರಾಶಿಯಾಗಿ ಬಿದ್ದಿರುವ ಕೋಳಿ ಅಂಗಡಿ ತಾಜ್ಯ ಸಹಿಸಲಾಗದ ದುರ್ವಾಸನೆ ಬೀರುತ್ತಿದೆ. ಇದರಿಂದಾಗಿ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದ ವಿವಿಧ ಓಣಿಯ ಸ್ವಚ್ಛತೆ ಕಾಪಾಡಲು ಯತ್ನಿಸುವ ಪಂಚಾಯ್ತಿ ಅಧಿಕಾರಿಗಳಿಗೆ ಗ್ರಾಮದ ಹೊರವಲಯ ಕಾಣಿಸುತ್ತಿಲ್ಲ. ಹೀಗಾಗಿ ಹೊರವಲಯದಲ್ಲಿ ಸಂಚರಿಸುವವರಿಗೆ ದುರ್ವಾಸನೆ ಸಹಿಸಲು ಅಸಾಧ್ಯವಾಗಿದೆ.
ಗ್ರಾಮದ ಹೊರವಲಯದಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ದೊಡ್ಡಬಸವೇಶ್ವರ ದೇವಸ್ಥಾನ, ಸೋಮೆಶ್ವರ ದೇವಸ್ಥಾನ ಸೇರಿ ಹಲವು ಪ್ರೇಕ್ಷಣೀಯ ಸ್ಥಳಗಳಿವೆ. ನಿತ್ಯ ವಿವಿಧ ಭಾಗದಿಂದ ಪ್ರವಾಸಿಗರು ಬರುತ್ತಾರೆ. ಆದರೆ ಈ ಕೋಳಿ ತ್ಯಾಜ್ಯದಿಂದಾಗಿ ಪ್ರವಾಸಿಗರಲ್ಲಿ ಅಸಹ್ಯ ಸೃಷ್ಟಿಯಾಗಿದೆ. ಅಲ್ಲದೆ ವಾಯುವಿಹಾರಕ್ಕೆ ಹೋಗುವವರಿಗೆ, ವಾಹನ ಸವಾರರಿಗೆ, ರೈತರಿಗೆ, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಈ ತ್ಯಾಜ್ಯದಿಂದಾಗಿ ಕಿರಿಕಿರಿ ಉಂಟಾಗಿದೆ.
ಈ ಮಾರ್ಗದಲ್ಲಿ ಬಸ್ ಮೂಲಕ ಪ್ರಯಾಣಿಸುವವರಿಗೂ ಕೆಟ್ಟವಾಸನೆ ಬೀರುತ್ತಿದೆ. ತ್ಯಾಜ್ಯ ಬಿದ್ದಿರುವ ಸ್ಥಳ ಬಂದೊಡನೆ ಬಸ್ ಪ್ರಯಾಣಿಕರು ಮೂಗು ಮುಚ್ಚಿಕೊಳ್ಳುತ್ತಾರೆ.
‘ಕೋಳಿ ಅಂಗಡಿಗಳ ತ್ಯಾಜ್ಯದಿಂದಾಗಿ ಜನರಿಗೆ ರೋಗಭೀತಿ ಉಂಟಾಗಿದೆ. ತಕ್ಷಣ ಪಂಚಾಯ್ತಿ ಅಧಿಕಾರಿಗಳು ಕೋಳಿ ತ್ಯಾಜ್ಯ ವಿಲೇವಾರಿ ಮಾಡಲು ಕ್ರಮ ತಗೆದುಕೊಳ್ಳಬೇಕು’ ಎಂದು ಗ್ರಾಮದ ನಿಂಗಬಸಪ್ಪ ಪ್ಯಾಟಿ ಒತ್ತಾಯಿಸಿದರು.
‘ಈ ದಾರಿಯಲ್ಲಿ ಅತ್ಯಂತ ಖುಷಿಯಿಂದ ವಾಯು ವಿಹಾರಕ್ಕೆ ತೆರಳುತ್ತಿದ್ದೆವು. ಆದರೆ ಈಗ ದುರ್ವಾಸನೆಯಿಂದ ವಿಹಾರಕ್ಕೆ ಹೋಗದಂತಾಗಿದೆ. ಇಲ್ಲಿ ಕೋಳಿ ಅಂಗಡಿಗಳ ತ್ಯಾಜ್ಯ ಸುರಿಯುವುದನ್ನು ಮುಂದುವರಿಸಿದರೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ.
ಅಲ್ಲದೆ ತ್ಯಾಜ್ಯ ವಿಲೇವಾರಿ ಮಾಡದ ಕಾರಣ ನೊಣ, ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಇದರಿಂದ ಸಾಂಕ್ರಾಮಿಕ ರೋಗ ಹರಡುತ್ತವೆ’ ಗ್ರಾಮದ ವಿರೂಪಾಕ್ಷಪ್ಪ ಲಕ್ಕುಂಡಿ ಹಾಗೂ ಸಿದ್ದು ಹಡಪದ ಒತ್ತಾಯಿಸಿದರು.
-ಲಕ್ಷ್ಮಣ ದೊಡ್ಡಮನಿ
*
ಕೋಳಿ ಅಂಗಡಿ ಮಾಲೀಕರಿಗೆ ಹಲವು ಸಲ ನೋಟಿಸ್ ನೀಡಿದ್ದೇವೆ. ಆದರೂ ಅವರು ಎಚ್ಚೆತ್ತುಕೊಂಡಿಲ್ಲ. ಸ್ವಚ್ಛತೆ ದೃಷ್ಟಿಯಿಂದ ಕೂಡಲೇ ಕ್ರಮ ಕೈಗೊಳ್ಳಲಾಗುವುದು.
-ಎಸ್.ಕೆ ಕವಡೆಲೆ,
ಪಿಡಿಒ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.