ADVERTISEMENT

ಕ್ಷಣಾರ್ಧದಲ್ಲಿ ಭಸ್ಮವಾದ ಹುಲ್ಲುಗಾವಲು

ಜಿಲ್ಲಾಡಳಿತ ಭವನದ ಹಿಂಭಾಗದಲ್ಲಿ ಅಗ್ನಿ ಆಕಸ್ಮಿಕ; ಕೆಲವೇ ಮೀಟರ್‌ ದೂರದಲ್ಲಿ ಜಿಲ್ಲೆಯ ಶಕ್ತಿ ಕೇಂದ್ರ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 6:26 IST
Last Updated 3 ಫೆಬ್ರುವರಿ 2017, 6:26 IST
ಕ್ಷಣಾರ್ಧದಲ್ಲಿ ಭಸ್ಮವಾದ ಹುಲ್ಲುಗಾವಲು
ಕ್ಷಣಾರ್ಧದಲ್ಲಿ ಭಸ್ಮವಾದ ಹುಲ್ಲುಗಾವಲು   

ಗದಗ: ನಗರದ  ಜಿಲ್ಲಾಡಳಿತ ಭವನದ ಹಿಂಭಾಗದಲ್ಲಿ 5 ಎಕರೆ ಪ್ರದೇಶದಲ್ಲಿ ಸೊಂಪಾಗಿ ಬೆಳೆದು, ಬಿಸಿಲಿಗೆ ಒಣಗಿ ನಿಂತಿದ್ದ ಹುಲ್ಲಿನ ರಾಶಿಗೆ ಗುರುವಾರ ಮಧ್ಯಾಹ್ನ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಹುಲ್ಲುಗಾವಲು ಭಾಗಶಃ  ಸುಟ್ಟು ಭಸ್ಮವಾಗಿದೆ.

ಘಟನೆಯಲ್ಲಿ ಜಿಲ್ಲಾಧಿಕಾರಿ ಕಟ್ಟಡದ ಹಿಂಭಾಗದಲ್ಲಿ ನಿಲ್ಲಿಸಿದ್ದ, ವಾರ್ತಾ ಇಲಾಖೆಗೆ ಸೇರಿದ ಹಳೆಯ ಕ್ಷೇತ್ರ ಪ್ರಚಾರ ವಾಹನವೊಂದು ಸುಟ್ಟು ಕರಕಲಾಗಿದೆ. ಅಗ್ನಿ ಆಕಸ್ಮಿಕ ಸಂಭವಿಸಿದ ಸ್ಥಳದಿಂದ 200 ಅಡಿ ಸುತ್ತಳತೆಯಲ್ಲೇ ಜಿಲ್ಲಾಧಿಕಾರಿ ಮತ್ತು ಜಿಲ್ಲಾಡಳಿತ ಭವನದಲ್ಲಿ ಕಾರ್ಯ­ನಿರ್ವಹಿಸುವ  ಹಿರಿಯ ಅಧಿಕಾರಿಗಳ ಕ್ವಾಟರ್ಸ್‌ ಇದೆ. ಹೆಲಿಪ್ಯಾಡ್‌ ಕೂಡ ಘಟನೆ ನಡೆದ ಸ್ಥಳದಲ್ಲೇ ಇದೆ. ಈ ಹುಲ್ಲುಗಾವಲು ಪ್ರದೇಶದ ಮೇಲಿನಿಂದಲೇ ವಿದ್ಯುತ್‌ ತಂತಿ ಹಾದು ಹೋಗಿದೆ.

ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಾಣಿಸಿಕೊಂಡ ಬೆಂಕಿಯು, ಕ್ಷಣಾರ್ಧ­ದಲ್ಲಿ ಇಡೀ ಬಯಲನ್ನು ಆವರಿಸಿತು.ಇಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದರು. ಆದರೆ, ಬಿಸಿಲು ಮತ್ತು ಗಾಳಿಯ ತೀವ್ರತೆ ಹೆಚ್ಚಿದ್ದರಿಂದ ಅಗ್ನಿಶಾಮಕ ವಾಹನಗಳು ಬರುವ ವೇಳೆಗೆ ಅರ್ಧದಷ್ಟು ಪ್ರದೇಶ ಸುಟ್ಟು ಹೋಗಿತ್ತು. ಈ ಪ್ರದೇಶದಲ್ಲಿ ಬೆಳೆಸ­ಲಾಗಿದ್ದ ಬೇವು, ತೇಗದ ಸಸಿಗಳು, ಅಲಂಕಾರಿಕ ಸಸಿಗಳನ್ನು ಬೆಂಕಿಯ ಕೆನ್ನಾಲಿಗೆ ಆಹುತಿ ತೆಗೆದುಕೊಂಡಿತು. ಹುಲ್ಲಿನ ನಡುವೆ ಆಶ್ರಯ ಪಡೆದಿದ್ದ ಮೊಲಗಳು, ಸರೀಸೃಪಗಳು, ಪತಂಗ­ಗಳು, ಕೌಜುಗ ಹಕ್ಕಿಗಳು ಜೀವ ರಕ್ಷಣೆಗಾಗಿ ದಿಕ್ಕೆಟ್ಟು ಓಡುತ್ತಿದ್ದ  ದೃಶ್ಯ ಕಂಡುಬಂತು.

ಆತಂಕ: ಅಗ್ನಿ ಅವಗಡದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಟ್ಟಡದ ಹಿಂಭಾಗದಿಂದ ದಟ್ಟ ಹೊಗೆ ಎದ್ದು ಕಾರ್ಮೋಡ ಕವಿದಿತ್ತು.  ಹೀಗಾಗಿ ಕೆಲಕಾಲ ಆತಂಕ ಆವರಿಸಿತ್ತು. 4 ಅಗ್ನಿಶಾಮಕ ವಾಹನಗಳು 3 ಗಂಟೆಗೂ ಹೆಚ್ಚು ಕಾಲ ಕಾರ್ಯಾ­ಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದವು. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಿಡಿಗೇಡಿಗಳು ಯಾರಾದರೂ ಸಿಗರೇಟು ಸೇದಿ ಎಸೆದಿರಬೇಕು, ಕಟ್ಟಡದ ಹಿಂಭಾಗದಲ್ಲಿ ಒಣಹುಲ್ಲು, ಕಸ ತುಂಬಿರುವುದರಿಂದ, ಬಿಸಿಲಿಗೆ ತಕ್ಷಣ ಬೆಂಕಿ ಹೊತ್ತಿಕೊಂಡು ವ್ಯಾಪಿಸಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.