ADVERTISEMENT

ಗದಗ–ಗಜೇಂದ್ರಗಡ–ವಾಡಿ ರೈಲು ಮಾರ್ಗಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 5:19 IST
Last Updated 4 ಸೆಪ್ಟೆಂಬರ್ 2017, 5:19 IST

ಗದಗ: ‘ಗದಗ, ಕೋಟುಮಚಗಿ, ನರೇ ಗಲ್, ಗಜೇಂದ್ರಗಡ ಮಾರ್ಗವಾಗಿ ವಾಡಿ ವರೆಗೆ ರೈಲು ಮಾರ್ಗ ನಿರ್ಮಾಣ ಮಾಡು ವುದು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ರೈಲ್ವೆ ನಿಲ್ದಾಣದ ಎದುರು ಭಾನುವಾರ ಪ್ರತಿಭಟನೆ ನಡೆಸಿದರು.

ಗದಗ–ಕೋಟುಮಚಗಿ–ನರೇಗಲ್–ಗಜೇಂದ್ರಗಡ ಮಾರ್ಗವಾಗಿ ಸಂಪರ್ಕ ಕಲ್ಪಿಸಬೇಕಾದ ರೈಲು ಮಾರ್ಗವನ್ನು ಕೊಪ್ಪಳ, ಬಾಣಾಪುರ, ತಳಕಲ್–ಕುಷ್ಟಗಿ ಮಾರ್ಗವಾಗಿ ಬದಲಾಯಿಸಿರುವುದು ಸರಿಯಲ್ಲ. ಬ್ರಿಟೀಷ್ ಕಾಲದಲ್ಲಿ ತಯಾರಿ ಸಲಾದ ನಕ್ಷೆ ಅನ್ವಯ ಗದಗ–ವಾಡಿ ರೈಲು ಮಾರ್ಗ ನಿರ್ಮಾಣ ಮಾಡಬೇಕು’ ಎಂದು ಆಗ್ರಹಿಸಿದರು.

ನಗರದ ಮಹಾತ್ಮ ಗಾಂಧಿ ವೃತ್ತ ದಿಂದ ಸ್ಟೇಷನ್ ರಸ್ತೆ, ಝಂಡಾ ವೃತ್ತದ ಮಾರ್ಗವಾಗಿ ರೈಲು ನಿಲ್ದಾಣದವರೆಗೆ ನೂರಾರು ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ದಾರಿಯು ದ್ದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ADVERTISEMENT

ನಂತರ ರೈಲು ತಡೆ ನಡೆಸಲು ನಿಲ್ದಾಣದೊಳಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕರರನ್ನು ಪೊಲೀಸರು ತಡೆದು ನಿಲ್ಲಿಸಿದರು. ಮತ್ತೆ ಒಳಗೆ ನುಗ್ಗಲು ಯತ್ನಿಸಿದ ಕೆಲವರನ್ನು ಬಂಧಿಸಿ, ಬಳಿಕ ಬಿಡುಗಡೆಗೊಳಿಸಿದರು.

‘ಈಗಾಗಲೇ ಘೋಷಣೆ ಮಾಡಿದ್ದ ರೈಲು ಮಾರ್ಗವನ್ನು ಬದಲಾಯಿಸಿರು ವುದು ಜಿಲ್ಲೆಯ ಜನರಿಗೆ ಅನ್ಯಾಯ ವಾಗಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ, ಸಂಸದ ಶಿವ ಕುಮಾರ ಉದಾಸಿ, ಪಿ.ಸಿ.ಗದ್ದಿಗೌಡ್ರ ಅವರು ಮಧ್ಯೆ ಪ್ರವೇಶಿಸಿ ಈ ಯೋಜನೆ ಜಿಲ್ಲೆಗೆ ಲಭಿಸುವಂತೆ ವಿಶೇಷ ಕಾಳಜಿ ವಹಿಸಬೇಕು’ ಎಂದರು.

‘ಗದಗ–ಕೊರ್ಲಹಳ್ಳಿ–ಮುಂಡರಗಿ–ಹರಪ್ಪನಹಳ್ಳಿ ರೈಲು ಮಾರ್ಗವನ್ನು ಅನು ಷ್ಠಾನಗೊಳಿಸಬೇಕು. ಗದಗ–ವಿಜಯ ಪುರ–ಸೋಲ್ಲಾಪುರಗೆ ಬೆಳಿಗ್ಗೆ 7.30ರ ನಂತರ ಮತ್ತು ಮಧ್ಯಾಹ್ನ 2.30ರ ನಡುವೆ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ರೈಲು ಆರಂಭಿಸಬೇಕು.

ಮುಂಬೈದಿಂದ ಸೋಲ್ಲಾಪುರವರೆಗೆ ಸಂಚರಿಸುವ ರೈಲನ್ನು ಗದಗವರೆಗೆ ವಿಸ್ತರಿಸಬೇಕು. ಗದಗ–ಬೆಂಗಳೂರು ಇಂಟರ್‌ಸಿಟಿ ರೈಲು ಆರಂಭಿಸಬೇಕು’ ಎಂದು ಒತ್ತಾಯಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಉತ್ತರ ಕರ್ನಾಟಕದ ಅಧ್ಯಕ್ಷ ಶರಣು ಗದ್ದುಗೆ, ಶರಣಪ್ಪ ಪೂಜಾರ, ರಫೀಕ್ ಕೆರೆಮನಿ, ದಾವಲಸಾಬ್ ಮುಳಗುಂದ, ಸಿದ್ದಪ್ಪ ಮುದ್ಲಾಪುರ, ಶ್ರೀನಿವಾಸ ಭಂಡಾರಿ, ಹನುಮಂತಪ್ಪ ಮಜ್ಜಿಗುಡ್ಡ, ಪ್ರಸಾದ್ ಸತ್ಯಪ್ಪನವರ, ಕಲಂದರ ಹರ್ಲಾಪುರ ಪ್ರತಿಭಟನೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.