ADVERTISEMENT

‘ಜನಪ್ರತಿನಿಧಿಗಳ ವಿರುದ್ಧ ರೈತರ ಆಕ್ರೋಶ’

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 6:32 IST
Last Updated 14 ನವೆಂಬರ್ 2017, 6:32 IST

ನರಗುಂದ: ‘ಮಹದಾಯಿ ಸಮಸ್ಯೆ ಇತ್ಯರ್ಥಪಡಿಸುವಲ್ಲಿ, ಬಿಜೆಪಿ ನಾಯಕರು ನುಡಿದಂತೆ ನಡೆಯುತ್ತಿಲ್ಲ. ಕಾಂಗ್ರೆಸ್‌ ನಾಯಕರು ಪ್ರಯತ್ನ ಸಹ ಮಾಡುತ್ತಿಲ್ಲ. ಜನಪ್ರತಿನಿಧಿಗಳ ಈ ದಿವ್ಯ ನಿರ್ಲಕ್ಷ್ಯವನ್ನು ರೈತರು ಸಹಿಸಲಾರರು. ಪರಿಣಾಮ ಎದುರಿಸಲು ಸಿದ್ಧರಾಗಿ’ ಎಂದು ಮಹದಾಯಿ ಹೋರಾಟಗಾರರು ಎಚ್ಚರಿಕೆ ನೀಡಿದರು.

ಸೋಮವಾರ ನರಗುಂದದಿಂದ ಹುಬ್ಬಳ್ಳಿಯಲ್ಲಿರುವ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಅವರ ಮನೆ ಮುಂದೆ ಧರಣಿ ನಡೆಸಲು ಹೊರಟ ರೈತರು, ಹೋರಾಟಕ್ಕೆ ಸ್ಪಂದಿಸದ ರಾಜಕಾರಣಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಕಳೆದು ತಿಂಗಳು ಶೆಟ್ಟರ್‌ ಅವರಿಗೆ ಮನವಿ ಮಾಡಿಕೊಂಡಿದ್ದೆವು. ನವೆಂಬರ್‌ 1ರೊಳಗೆ ಸಿಹಿ ಸುದ್ದಿ ನೀಡುತ್ತೇವೆ ಎಂದು ಅವರು ಹೇಳಿದ್ದರು, ಆದರೆ, ಈಗ ಅದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಈಗ ಬೆಳಗಾವಿ ಅಧಿವೇಶನ ನಡೆಯುತ್ತಿದೆ, ಹಿಂದೆ ಅಧಿವೇಶನ ನಡೆದಾಗಲೂ ಮಹದಾಯಿ ಬಗ್ಗೆ ಚರ್ಚೆಯಾಗಿತ್ತು.

ADVERTISEMENT

ಅಂದಿನ ನಿರ್ಣಯ ಇನ್ನೂ ಜಾರಿಗೆ ಬಂದಿಲ್ಲ. ಹೀಗೆ ರೈತರನ್ನು ಸತಾಯಿಸುತ್ತಿರುವ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸದೆ ಇದ್ದರೆ ನಮಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ’ ಎಂದು ಹೋರಾಟ ಸಮಿತ ಅಧ್ಯಕ್ಷ ವೀರಬಸಪ್ಪ ಹೂಗಾರ ಹೇಳಿದರು.

‘ಮಹದಾಯಿಗೆ ಗೋವಾದ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಲು ನಮ್ಮ ಬಿಜೆಪಿ ನಾಯಕರು ಹಾಗೂ ಕಾಂಗ್ರೆಸ್‌ ನಾಯಕರು ಮುಂದಾಗಬೇಕು. ಈ ವಿಚಾರದಲ್ಲಿ ಜಗದೀಶ ಶೆಟ್ಟರ್ ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ಹೋರಾಟ ಸಮಿತಿ ಸದಸ್ಯ ರಮೇಶ ನಾಯ್ಕರ ಆಗ್ರಹಿಸಿದರು.

ಎ.ಪಿ.ಪಾಟೀಲ, ಎಸ್‌.ಬಿ.ಜೋಗಣ್ಣವರ, ಎಲ್‌.ಬಿ.ಮುನೇನಕೊಪ್ಪ, ಯಲ್ಲಪ್ಪ ಚಲುವಣ್ಣವರ, ಅರ್ಜುನ ಮಾನೆ, ವೀರಬಸಪ್ಪ ಹೂಗಾರ, ಪರಶುರಾಮ ಜಂಬಗಿ, ವೀರಣ್ಣ ಸೊಪ್ಪಿನ, ಕಾಡಪ್ಪ ಕಾಕನೂರ, ವೆಂಕಪ್ಪ ಹುಜರತ್ತಿ ಹಾಗೂ ಚನ್ನಬಸು ಹುಲಜೋಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.