ADVERTISEMENT

ಜಾನುವಾರು ಪೋಷಣೆಗೆ ಆದ್ಯತೆ ನೀಡಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 6:13 IST
Last Updated 18 ಏಪ್ರಿಲ್ 2017, 6:13 IST

ಲಕ್ಷ್ಮೇಶ್ವರ: ಸುಡುತ್ತಿರುವ ಬಿಸಿಲಿನಿಂದ ಜಾನುವಾರುಗಳ ರಕ್ಷಣೆ ಹಾಗೂ ಅವುಗಳ ಆರೋಗ್ಯದ ಕಾಳಜಿ ಮಾಡುವುದು ಅಗತ್ಯ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟಿ ಹೇಳಿದರು. ಇಲ್ಲಿಗೆ ಸಮೀಪದ ಶೆಟ್ಟಿಕೇರಿ ಗೋ ಶಾಲೆಗೆ ಸೋಮವಾರ ಭೇಟಿ ನೀಡಿ ಅವರು ಮಾತನಾಡಿದರು.ರಾಜ್ಯದಲ್ಲಿ ಹಿಂದೆಂದೂ ಕಾಣದ ಬರಗಾಲ ಎದುರಾಗಿ ರೈತರನ್ನು ಕಂಗೆಡಿಸಿದೆ. ಬೆಳೆ ಇಲ್ಲದೆ ರೈತರು ಕಠಿಣ ಪರಿಸ್ಥಿತಿಯಲ್ಲಿ ಇದ್ದು ಅವರು ಸಾಕಿದ ಜಾನುವಾರುಗಳಿಗೆ ತಿನ್ನಲು ಮೇವಿಲ್ಲದೆ ಪರದಾಡುತ್ತಿದ್ದಾರೆ. ಆದರೆ ಸರ್ಕಾರ ರೈತರ ಅನುಕೂಲಕ್ಕಾಗಿ ರಾಜ್ಯದಲ್ಲಿ ಅನೇಕ ಗೋಶಾಲೆಗಳನ್ನು ತೆರೆದಿದೆ. ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಕೊರತೆಯಾಗದಂತೆ ನೋಡಿಕೊಳ್ಳುವ ಮೂಲಕ ರೈತರ ಹಿತ ಕಾಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮನೋಜಕುಮಾರ್ ಜೈನ್ ಮಾತನಾಡಿ ಜಾನುವಾರುಗಳು ತೀವ್ರವಾದ ಬಿಸಿಲಿನಿಂದ ಬಳಲದಂತೆ ಅವುಗಳ ಆರೈಕೆ ಮಾಡಬೇಕು. ಪಶುಗಳ ಆರೋಗ್ಯದಲ್ಲಿ ಹೆಚ್ಚು ಕಡಿಮೆಯಾದಲ್ಲಿ ವೈದ್ಯರಿಗೆ ಮಾಹಿತಿ ನೀಡಿ ಚಿಕಿತ್ಸೆ ಕೊಡಿಸುವ ಕಾರ್ಯವಾಗಬೇಕು ಎಂದರು.ಈ ಸಂದರ್ಭದಲ್ಲಿ ಜಿಲ್ಲಾಮುಖ್ಯ ಕಾರ್ಯದರ್ಶಿ ಮಂಜುನಾಥ ಚವ್ಹಾಣ, ಜಿಲ್ಲಾ ಯೋಜನಾಧಿಕಾರಿ ಟಿ.ದಿನೇಶ, ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಸರಬರಾಜು ಅಧಿಕಾರಿ ದೇವೇಂದ್ರ ನಾಯ್ಕ್, ತಹಶೀಲ್ದಾರ್‌ ಎ.ಡಿ. ಅಮರಾವದಗಿ, ಡಾ. ಎಸ್.ಎಸ್. ಪಾಟೀಲ, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಗುರಿಕಾರ, ತಾಲ್ಲೂಕಾ ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯಾಧಿಕಾರಿ ಷಣ್ಮುಖ ಬುಗಟಿ, ಕಂದಾಯ ನಿರೀಕ್ಷಕ ಎಸ್.ಎಸ್. ಪಾಟೀಲ ಇದ್ದರು.

ಅಧಿಕಾರಿಗಳು ಸ್ಥಳದಿಂದ ನಿರ್ಗಮಿಸಿದ ನಂತರ ಜಾನುವಾರುಗಳ ಮಾಲೀಕರು ಸುದ್ದಿಗಾರರೊಂದಿಗೆ ಮಾತನಾಡಿ ಗೋ ಶಾಲೆಗೆ ಬಳ್ಳಾರಿ, ರಾಯಚೂರು, ಬೀದರ್ ಜಿಲ್ಲೆಯಿಂದ ಹೈಬ್ರೀಡ್ ಜೋಳದ ಸೊಪ್ಪಿ ತರುತ್ತಿದ್ದಾರೆ. ಆದರೆ ದನ ಕರುಗಳು ಹೆಚ್ಚಾಗಿ ಈ ಸೊಪ್ಪಿಯನ್ನು ತಿನ್ನುವುದಿಲ್ಲ. ಕಾರಣ ಹೈಬ್ರೀಡ್ ಜೋಳದ ಸೊಪ್ಪಿಯ ಬದಲು ಬಿಜಾಪೂರ ಜೋಳದ ಸೊಪ್ಪಿ ತರಿಸಿದರೆ ಹೆಚ್ಚಿನ ಅನುಕೂಲ ಆಗುತ್ತದೆ. ಇದರ ಜೊತೆಗೆ ಶೇಂಗಾ ಹಿಂಡಿ ಅಥವಾ ಬೇರೆ ಧಾನ್ಯಗಳ ಹಿಂಡಿಯನ್ನು ನೀಡಿದಲ್ಲಿ ಜಾನುವಾರುಗಳಿಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.