ADVERTISEMENT

‘ತಾಳ್ಮೆ ಕಳೆದುಕೊಳ್ಳುವ ಮುನ್ನ ಮಹದಾಯಿ ಈಡೇರಲಿ’

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 8:44 IST
Last Updated 21 ನವೆಂಬರ್ 2017, 8:44 IST

ನರಗುಂದ: ‘ಮಹದಾಯಿ ಜೀವನ್ಮರಣದ ಹೋರಾಟವಾಗಿದೆ. ಮೂರನೇ ವರ್ಷ ಸಮೀಪಿಸುತ್ತಿದೆ. ಬೇಡಿಕೆ ಈಡೇರುತ್ತಿಲ್ಲ, ಎಲ್ಲದಕ್ಕೂ ಹೋರಾಟ ಮಾಡಬೇಕಾಗಿದೆ. ರೈತರ ತಾಳ್ಮೆ ಕಳೆದುಕೊಳ್ಳುವ ಮುನ್ನವೇ ಯೋಜನೆ ಅನುಷ್ಠಾನಗೊಳಿಸಬೇಕು’ ಎಂದು ರೈತ ಸಂಘದ ಶಹರ ಘಟಕದ ಅಧ್ಯಕ್ಷ ವಿಠ್ಠಲ ಜಾಧವ ಆಗ್ರಹಿಸಿದರು. ಪಟ್ಟಣದ ನಡೆಯುತ್ತಿರುವ ಮಹದಾಯಿ ಧರಣಿಯ 859 ದಿನವಾದ ಸೋಮವಾರ ಅವರು ಮಾತನಾಡಿದರು.

‘ಈ ಹೋರಾಟಕ್ಕೆ ನಾಡಿನ ಎಲ್ಲ ಮಠಾಧೀಶರು, ಒಂದು ಸಾವಿರಕ್ಕೂ ಹೆಚ್ಚು ಸಂಘಟನೆಗಳು, ಲಕ್ಷಾಂತರ ರೈತರು ಕೈಜೋಡಿಸಿದ್ದು, ಜನಾಂದೋಲನವಾಗಿ ಬದಲಾಗಿದೆ. ಆದರೆ, ಮಹದಾಯಿ ಜಾರಿಗಾಗಿ ಈ ಭಾಗದ ಶಾಸಕರು, ಸಂಸದರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಅವರ ಮನೆ ಮುಂದೆ ಧರಣಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ರೈತರ ಸಹನೆಯ ಕಟ್ಟೆ ಒಡೆಯುವ ಮುನ್ನವೇ ಯೋಜನೆ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರದ ಮೇಲೆ ನೆಪ ಹೇಳುತ್ತಿದ್ದಾರೆ. ಪ್ರಧಾನಿ ಮೋದಿಯವರು ಗೋವಾದ ವಿರೋಧ ಪಕ್ಷದ ನಾಯಕರನ್ನು ಒಲಿಸಿ ಎನ್ನುತ್ತಾರೆ. ನ್ಯಾಯಮಂಡಳಿಯು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿ ಎನ್ನುತ್ತಿದೆ.

ADVERTISEMENT

ಇದರಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಇದು ಖಂಡನೀಯ ಎಂದರು. ನಮ್ಮ ಹಕ್ಕಿನ ಹೋರಾಟಕ್ಕೆ ಬೆಲೆ ನೀಡಬೇಕು. ಇಲ್ಲವಾದರೆ ರೈತರಿಂದ ಮುಂದೆ ಆಗುವ ಕ್ರಾಂತಿಕಾರಕ ಹೋರಾಟ ಎದುರಿಸಲು ಸಿದ್ದರಾಗಿ’ ಎಂದು ಮಹದಾಯ ಹೋರಾಟ ಸಮಿತಿ ಸದಸ್ಯ ವಾಸು ಚವ್ಹಾಣ ಆಕ್ರೋಶ ವ್ಯಕ್ತಪಡಿಸಿದರು. ಧರಣಿಯಲ್ಲಿ ವೆಂಕಪ್ಪ ಹುಜರತ್ತಿ, ವೀರಣ್ಣ ಸೊಪ್ಪಿನ, ಸಿದ್ದಪ್ಪ ಚಂದ್ರತ್ನವರ, ಚನ್ನಪ್ಪಗೌಡ ಪಾಟೀಲ, ಕಾಡಪ್ಪ ಕಾಕನೂರ, ಚನ್ನಬಸು ಹುಲಜೋಗಿ, ಯಲ್ಲಪ್ಪ ಗುಡದೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.