ADVERTISEMENT

ನರೇಗಾ; ಉದ್ಯೋಗ ನೀಡಲು ಆಗ್ರಹ

2016ರಲ್ಲಿ ಮಾಡಿದ ಕೆಲಸಕ್ಕೆ ಸಿಗದ ಕೂಲಿ: ಮಹಿಳಾ ಕಾರ್ಮಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 5:11 IST
Last Updated 2 ಮಾರ್ಚ್ 2017, 5:11 IST

ರೋಣ: ಜನ ಸತತ ಬರಗಾಲದಿಂದ ಬಳಲುತ್ತಿದ್ದಾರೆ. ಬಡವರಿಗೆ ಮಾಡಲು ಕೆಲಸವಿಲ್ಲದೆ, ಇರಲು ಮನೆ ಇಲ್ಲದೆ ಹಲವು ಸಮಸ್ಯೆ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಲೋಕನಗೌಡ ಗೌಡರ ಉದ್ಯೋಗ ಖಾತ್ರಿ ಯೋಜನೆಯ ತಾಲ್ಲೂಕ ಸಹಾಯಕ ನಿರ್ದೇಶಕ ಆನಂದ ಬಡಕುಂದ್ರಿ ಅವರನ್ನು ತರಾಟೆಗೆ ತೆಗೆದು ಕೊಂಡ ಘಟನೆ ಬುಧವಾರ ಪಟ್ಟಣದ ತಾಲ್ಲೂಕ ಪಂಚಾಯಿತಿ ಆವರಣದಲ್ಲಿ ನಡೆಯಿತು.

ಸತತ ನಾಲ್ಕು ವರ್ಷಗಳಿಂದ ಮಳೆ ಬಾರದೆ ಬರಗಾಲ ಪರಿಸ್ಥಿತಿ ಇದ್ದು, ಬಡ ಜನ ರು ಮಾಡಲು ಕೆಲಸವಿಲ್ಲದೆ ಇರಲು ಮನೆ ಇಲ್ಲದೆ ಪರಿತಪಿಸುತ್ತಿದ್ದಾರೆ. ಸರ್ಕಾರಗಳು ಬರಾಗಲವಿರುವುದರಿಂದ ಗ್ರಾಮೀಣ ಬಡಕುಟುಂಬಗಳಿಗೆ ನರೇಗಾ ಯೋಜನೆಯಡಿ ಕೆಲಸ ನೀಡಬೇಕು ಎಂದು ಆದೇಶ ನೀಡಿದೆ. ಆದರೆ, ಇಲ್ಲಿ ಬಡ ಕುಟುಂಬಗಳಿಗೆ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸರಿಯಾಗಿ ಉದ್ಯೋಗ ನೀಡುತ್ತಿಲ್ಲ.

ಅಲ್ಲದೆ, ಈ ಹಿಂದೆ ಉದ್ಯೋಗ ಖಾತ್ರಿ ಯೋಜನೆ ಯಲ್ಲಿ ಕೆಲಸ ಮಾಡಿದ ಫಲಾನುಭವಿ ಗಳಿಗೆ ಹಣವನ್ನು ಸಹ ನೀಡಿಲ್ಲ. ಹಿಗಾದರೆ, ಅವರ ಜೀವನದ ಗತಿ ಏನು? ಎಲ್ಲಿ ಹೋದರೂ ಅವರಿಗೆ ಕೆಲಸ ಸಿಗುತ್ತಿಲ್ಲ ಕೆಲಸವಿಲ್ಲದೆ ಜೀವನನಿರ್ವಹಣೆ ಹೇಗೆ ಮಾಡಬೇಕು? ದುಡಿಯುವ ಕಾರ್ಮಿಕರಿಗೆ ಅನ್ಯಾಯವಾದರೆ ಹೇಗೆ ? ಈ ಕುರಿತು ಸ್ಪಷ್ಟನೆ ನೀಡಲು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿ ಕಾರಿಯನ್ನು ಕರೆಯಿಸಬೇಕು ಎಂದರು.

ತಾಲ್ಲೂಕ ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಬರುವವರೆಗೂ ನಾವು ಇಲ್ಲಿಯೇ ಕಾಯುತ್ತೇವೆ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಎರಡು ಗಂಟೆಗಳ ನಂತರ ಬಂದ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ರೈತ ಮುಂಖಡರ ನಡುವೆ ತೀವ್ರ ಮಾತಿನ ಚಕಮುಕಿ ನಡೆಯಿತು. ನಾವು ಎರಡು ಗಂಟೆಗಳಿಂದ ತಮಗಾಗಿ ಇಲ್ಲಿ ಕಾಯುತ್ತಿದ್ದೆವೆ.

ಈ ರೀತಿ ಬೇಜವಾಬ್ದಾರಿ ತೋರಿದರೆ ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕಾರ್ಯನಿರ್ವಾಹಕ ಅಧಿಕಾರಿ ಎಂ.ವ್ಹಿ,ಚಳಗೇರಿ ‘ತಮಗೆ ಆಗಿರುವ ತೊಂದರೆಗೆ ಕ್ಷಮೆಯಾಚಿಸು ತ್ತೇನೆ ಅನ್ಯ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದೆ. ಬರುವುದು ತಡವಾಯಿತು’ ಎಂದರು.

ಸಂಬಂಧಪಟ್ಟ ಪಿಡಿಓ ಹಾಗೂ ನರೇಗಾ ಅಧಿಕಾರಿ ಆನಂದ ಬಲಕುಂದ್ರಿ ಅವರನ್ನು ಕರೆಯಿಸಿ ಮೂರು ದಿನಗಳ ಒಳಗೆ ಸಮಸ್ಯೆಗೆ ಸೂಕ್ತ ಪರಿಹಾರ ನೀಡಿವಂತೆ ಸೂಚಿಸಿದರು.

‘2016ರಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ಮಾಡಿ ದ್ದೇವೆ. ಆದರೆ, ನಮಗೆ ಕೆಲಸ ಮಾಡಿದ ಕೂಲಿ ನೀಡದೇ ಅಧಿಕಾರಿಗಳು ಸತಾ ಯಿಸುತ್ತಿದ್ದಾರೆ. ಮೊದಲೇ ಬರಗಾಲ ಬೆರೆ ಜೀವನ ಸಾಗಿಸಲು ತುಂಬಾ ತೊಂದರೆ ಆಗುತ್ತಿದೆ. ಕೆಲಸ ಮಾಡೋಣ ಎಂದರೆ ಯಾವ ಕೆಲಸವೂ ಸಿಗುತ್ತಿಲ್ಲ’ ಎಂದು ಮಹಿಳಾ ಕಾರ್ಮಿಕರು ಅಧಿಕಾರಿಗಳ ಎದುರು ಅಳಲು ತೋಡಿಕೊಂಡರು.

ಚಂದ್ರವ್ವ ಎಮ್ಮಿಯವರ, ಯಮನವ್ವ ಮಾದರ, ಚನ್ನವ್ವ ಉಪ್ಪಾರ, ಶಾರಮ್ಮ ಉಪ್ಪಾರ, ದೇವಕ್ಕಾ ವಾಲಿಕಾರ, ಶಿವಮ್ಮ ವಾಲಿಕಾರ, ದುರ್ಗವ್ವ ಮಾದರ, ರತ್ನವ್ವ ಶಿಪ್ರಿ, ಪ್ರೇಮಾ ಗೌಡರ, ಅನಸೂಯಾ ದನ್ನಪ್ಪನವರ, ಸಂಗಮ್ಮ ಹೈಗರ, ಕಳಕವ್ವ ಹೈಗರ, ಶಾರಮ್ಮ ಉಪ್ಪಾರ, ದೇವಕ್ಕ ಹೈಗರ ಪ್ರತಿಭಟನೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.