ADVERTISEMENT

ನಾಶವಾದ ಬಿ.ಟಿ ಹತ್ತಿ: ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಜೂನ್ 2015, 9:53 IST
Last Updated 30 ಜೂನ್ 2015, 9:53 IST

ಗದಗ: ಬಿ.ಟಿ. ಹತ್ತಿ ಬೆಳೆ ನಾಶಕ್ಕೆ ಪರಿಹಾರ ನೀಡುವಂತೆ ತಾಲ್ಲೂಕಿನ ಲಕ್ಕುಂಡಿ ಗ್ರಾಮದ ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಖಾಸಗಿ ಕಂಪೆನಿಗಳಾದ ಅಜೀತ ಫಸ್ಟ್ ಕ್ಲಾಸ್, ಎ.ಟಿ.ಎಂ ನಿಂದ ಖರೀದಿಸಿ ಬಿತ್ತಿದ ಹತ್ತಿ ಬೀಜಗಳು ಫಸಲು ನೀಡುವ ಮುನ್ನವೇ ನೆಲ ಕಚ್ಚಿವೆ. ಕಂಪೆನಿಗಳು ಗೊತ್ತಿದ್ದರೂ ಕಳಪೆ ಬೀಜ ಮಾರಾಟ ಮಾಡಿವೆ. ರೈತರ ಜೀವನದ ಜತೆ ಚೆಲ್ಲಾಟವಾಡುತ್ತಿರುವ ಕಂಪೆನಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಹಾಗೂ ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಎನ್‌.ಎಸ್‌.ಪ್ರಸನ್ನ ಕುಮಾರ ಅವರಿಗೆ ಸೋಮವಾರ ಸಲ್ಲಿಸಿದ ಮನವಿಯಲ್ಲಿ ರೈತರು ಒತ್ತಾಯಿಸಿದ್ದಾರೆ.

ಕಳೆದ 3–4 ತಿಂಗಳ ಹಿಂದೆ ಬಿತ್ತಿದ್ದ ಹತ್ತಿ ಬೆಳೆ ಸಂಪೂರ್ಣವಾಗಿ ನಾಶವಾಗಿವೆ. ಸುಮಾರು 200 ಎಕರೆ ಪ್ರದೇಶದಲ್ಲಿ  ಬಿತ್ತಿದ ಹತ್ತಿ ಬೆಳೆ ದಿನ ಕಳೆದಂತೆ  ಸತ್ವ ಕಳೆದುಕೊಳ್ಳತ್ತಿದೆ.  ಎಕರೆಗೆ  ರೂ 30 ಸಾವಿರ ರಿಂದ ರೂ40 ಸಾವಿರ ಖರ್ಚಾಗಿದೆ. ಎರಡು ತಿಂಗಳಲ್ಲಿಯೇ ಕಾಯಿ ಬಿಟ್ಟು ಹತ್ತಿ ಒಡೆಯಲಾರದೆ ಮುದುಡಿವೆ. ಸಸಿಗಳು ಸಾಮಾನ್ಯ ಎತ್ತರ ಬೆಳೆಯದೆ ಕೇವಲ ಒಂದು, ಎರಡು ಅಡಿ ಎತ್ತರ ಮಾತ್ರ ಬೆಳೆದು  ನೆಲಕ್ಕೆ ವಾಲಿವೆ.  ರೋಗ ಬಾಧೆಯಿಂದ ಎಲೆಗಳು ಕೆಂಪು ಬಣ್ಣಕ್ಕೆ ತಿರುಗಿ ಅವಧಿಗಿಂತಲ್ಲೂ ಮುಂಚಿತವಾಗಿ ತೊಳೆ ಬಿಟ್ಟಿವೆ.  ಹೀಚುಗಾಯಿಗಳು ನೆಲಕ್ಕೆ ಬೀಳತೊಡಗಿವೆ ಎಂದು ರೈತರು ಅಳಲು ತೋಡಿಕೊಂಡರು.

ಕೃಷಿ ವಿಶ್ವವಿದ್ಯಾನಿಲಯದ  ಅಧಿಕಾರಿಗಳು ಪರಿಶೀಲನೆ ನಡೆಸಿ ಹೋಗಿದ್ದಾರೆ. ಆದರೆ ಇದುವರೆಗೂ ನಿಖರ ಕಾರಣ ತಿಳಿಸಿಲ್ಲ. 2 ರಿಂದ 3 ವಾರಗಳಲ್ಲಿ ವರದಿ ನೀಡದಿದ್ದರೆ  ರಾಷ್ಟ್ರೀ­ಯ ಹೆದ್ದಾರಿ 63 ಬಂದ್ ಮಾಡಿ  ಪ್ರತಿ­ಭಟನೆ  ನಡೆಸಲಾಗುವುದು ಎಂದರು.

ಹತ್ತಿ ಬೀಜ ಖರೀದಿ ಹಾಗೂ ಬಿತ್ತನೆ ಸೇರಿದಂತೆ ಲಕ್ಷಾಂತರ ರೂಪಾಯಿ ಸಾಲ  ಮಾಡಲಾಗಿದೆ. ಕಳಪೆ ಹತ್ತಿ ಬೀಜ ನೀಡಿದ ಕಂಪೆನಿಗಳ ವಿರುದ್ಧ  ತಕ್ಷಣ  ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.   ನಿಯೋಗದಲ್ಲಿ ರೈತರಾದ ಅಜ್ಜಪ್ಪ ಯಲಿಶಿರುಂದ, ವೀರಪ್ಪ ಉಚಗಿ, ಸೋಮವ್ವ ಬಣವಿ, ಶಂಕ್ರಪ್ಪ ಬಣವಿ, ಹನುಮಂತಪ್ಪ ಯಲಿಶಿರುಂದ, ಇಬ್ರಾಹಿಮ್ ಹಮ್ಮಸಾಗರ, ಯಲ್ಲಪ್ಪ ಬೇಲೇರಿ, ಮಲ್ಲಪ್ಪ ಗಾಣಿಗೇರ, ಕೋಟೆಪ್ಪ ಗಾಜಿ, ಹೈದರಅಲಿ ನದಾಫ್  ಇದ್ದರು.

ಕಳಪೆ ಹತ್ತಿ ಬೀಜ ಮಾರಾಟ ಮಾಡಿದ ಕಂಪೆನಿಗಳ ವಿರುದ್ಧ ಕ್ರಮ ಕೈಗೊಂಡು  ಎಕರೆಗೆ ರೂ 30 ಸಾವಿರ ಪರಿಹಾರ ನೀಡಬೇಕು.
ಅಜ್ಜಪ್ಪ ಯಲಿಶಿರುಂದ,
ಲಕ್ಕುಂಡಿ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.