ADVERTISEMENT

ನೆಹರೂ ಕುಟುಂಬದಿಂದ ದೇಶ ಲೂಟಿ: ಸಿ.ಸಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 6:31 IST
Last Updated 14 ನವೆಂಬರ್ 2017, 6:31 IST

ಗಜೇಂದ್ರಗಡ: ನೆಹರೂ ಕುಟುಂಬ ಜೀವನದುದ್ದಕ್ಕೂ ದೇಶವನ್ನು ಲೂಟಿ ಮಾಡಿದ್ದಲ್ಲದೆ, ಸಮಾದಿಗಾಗಿ ಸಾವಿರಾರು ಕೋಟಿ ಮೌಲ್ಯದ ನೂರಾರು ಎಕರೆ ಭೂಮಿಯನ್ನು ಹೊಂದುವ ಮೂಲಕ ಸತ್ತ ಮೇಲೂ ದೇಶವನ್ನು ಲೂಟಿ ಹೊಡೆದ ಕೀರ್ತಿ ಆ ಕುಟುಂಬಕ್ಕೆ ಸಲ್ಲುತ್ತದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಸಿ. ಪಾಟೀಲ ಲೇವಡಿಯಾಡಿದರು.

ಪಟ್ಟಣದ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಭಾನುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆ ಮತ್ತು ನಗರ ಬಿಜೆಪಿ ಘಟಕದ ನೂತನ ಪದಾಧಿಕಾರಿಗಳ ಅಧಿಕಾರ ಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಾತಿಗಳನ್ನು ಒಡೆಯುವುದರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದ ಜನತೆಗೆ ‘ಜಾತಿ ವಿಭಜನೆ ಭಾಗ್ಯ’ವನ್ನು ಕರುಣಿಸಿದ್ದಾರೆ ಎಂದು ಟೀಕಿಸಿದರು. ಬಿಜೆಪಿ ಮುಖಂಡ ಕಳಕಪ್ಪ ಬಂಡಿ ಮಾತನಾಡಿ, ನನ್ನ ಅಧಿಕಾರದ ಅವಧಿಯಲ್ಲಿ ಬಡವರಿಗೆ ಮನೆ ನಿರ್ಮಿಸಿಕೊಡುವ ನಿಟ್ಟಿನಲ್ಲಿ ಪಟ್ಟಣ ಸೇರಿದಂತೆ ರೋಣ, ನರೇಗಲ್‌ಗಳಲ್ಲಿ ಭೂಮಿ ಖರೀದಿಸಲಾಯಿತು. ಆದರೆ, ಆ ಜಾಗಗಳಲ್ಲಿ ಮನೆ ನಿರ್ಮಿಸಿಕೊಡಲು ಇಂದಿನ ಶಾಸಕರಿಗೆ ಆಗಿಲ್ಲ ಎಂದರು.

ADVERTISEMENT

ಚುನಾವಣೆಯಲ್ಲಿ ದುಡ್ಡು ಕೊಟ್ಟರೆ ಜನ ಮತ ಹಾಕುತ್ತಾರೆ ಎಂದುಕೊಂಡಿರುವ ಅವರು, ದುಡ್ಡು ಮಾಡುವುದನ್ನೆ ಕಾಯಕ ಮಾಡಿಕೊಂಡಿದ್ದಾರೆ. ಕ್ಷೇತ್ರದ ಅಭಿವೃದ್ದಿ ಕಾರ್ಯಗಳನ್ನು ಮರೆತಿದ್ದಾರೆ. ಆದರೆ, ಜನ ಜಾಣರಾಗಿದ್ದು ಯಾರ ಅವಧಿಯಲ್ಲಿ ಅಭಿವೃದ್ದಿ ಕಾರ್ಯಗಳಾಗಿವೆ ಎಂಬುದನ್ನು ಗಮನಿಸುತ್ತಿದ್ದು, ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ, ಶರಣಪ್ಪ ಹಿರೇಮನಿ, ಮುತ್ತಣ್ಣ ಲಿಂಗನಗೌಡ್ರ, ಬಸಪ್ಪ ಪಲ್ಲೇದ, ಹೊನ್ನುಸಾ ದಾನಿ, ಶರಣಪ್ಪ ದೊಣ್ಣೆಗುಡ್ಡ, ಅಮರೇಶ ಬಳಿಗೇರ ಹಾಗೂ ಬಾಸ್ಕರಸಾ ರಾಯಬಾಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.