ADVERTISEMENT

ಬಿಂಕದಕಟ್ಟಿ ‘ಹಕ್ಕಿಹಾದಿ’ಗೆ ಸ್ವಾಗತ

ಜೋಮನ್ ವರ್ಗಿಸ್
Published 19 ನವೆಂಬರ್ 2017, 5:35 IST
Last Updated 19 ನವೆಂಬರ್ 2017, 5:35 IST
ಮೃಗಾಲಯದಲ್ಲಿ ನಿರ್ಮಿಸಿರುವ ಪಕ್ಷಿಗಳ ವೀಕ್ಷಣೆ ಪಂಜರ
ಮೃಗಾಲಯದಲ್ಲಿ ನಿರ್ಮಿಸಿರುವ ಪಕ್ಷಿಗಳ ವೀಕ್ಷಣೆ ಪಂಜರ   

ಗದಗ: ಪಕ್ಷಿ ಪ್ರಿಯರ ಬಹುದಿನದ ಕನಸಿಗೆ ಈಗ ರೆಕ್ಕೆ ಬಂದಿದೆ. ನಾಲ್ಕು ದಶಕ ಪೂರೈಸಿರುವ ಇಲ್ಲಿನ ಬಿಂಕದಕಟ್ಟಿ ಮೃಗಾಲಯದ ಆವರಣದಲ್ಲಿ ಪಕ್ಷಿಗಳ ವೀಕ್ಷಣೆಗಾಗಿ ನಿರ್ಮಿಸಿರುವ ವಿಶೇಷ ಪಂಜರ, ‘ಹಕ್ಕಿಕಾಪು’ (Aviary) ಭಾನುವಾರದಿಂದ ಸಾರ್ವಜನಿಕರಿಗೆ ವೀಕ್ಷಣೆಗೆ ಮುಕ್ತವಾಗಲಿದೆ.

ಈ ಪಕ್ಷಿ ಪಕ್ಷಿಪಂಜರದ ಒಳಗೆ ಪ್ರವೇಶಿಸಲು ಪಾದಚಾರಿ ಸೇತುವೆ ನಿರ್ಮಿಸಲಾಗಿದೆ. ಸಾರ್ವಜನಿಕರು ಈ ‘ಹಕ್ಕಿಹಾದಿ’ ಮೂಲಕ ಹೆಜ್ಜೆ ಹಾಕುತ್ತಾ ಅತ್ಯಂತ ಸಮೀಪದಿಂದ ಪಕ್ಷಿಗಳನ್ನು ಕಣ್ತುಂಬಿಸಿಕೊಳ್ಳಬಹುದು. ಹಕ್ಕಿಯ ಹಾಡಿಗೆ ಕಿವಿಯಾಗಬಹುದು.

‘ಮೊದಲು ಪಂಜರದ ಹೊರಗಿನಿಂದ ಮಾತ್ರ ಹಕ್ಕಿಗಳನ್ನು ವೀಕ್ಷಿಸಲು ಅವಕಾಶ ಇತ್ತು. ಈಗ ಪಕ್ಷಿಗಳ ಮಧ್ಯೆ ಪ್ರವಾಸಿಗರು ನಡೆದುಕೊಂಡು ಹೋಗಿ ನೋಡಲು ಅನುಕೂಲವಾಗುವಂತೆ ಹಕ್ಕಿಕಾಪು ನಿರ್ಮಾಣ ಆಗಿದೆ ಹೀಗಾಗಿ, ಪಕ್ಷಿಗಳನ್ನು ಸನಿಹದಿಂದಲೇ ವೀಕ್ಷಿಸಬಹುದು. ‘ರಾಜ್ಯದಲ್ಲಿ 8 ಮೃಗಾಲಯಗಳಿವೆ.

ADVERTISEMENT

ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲೂ ಈ ಸೌಲಭ್ಯ ಇಲ್ಲ. ಇಡೀ ರಾಜ್ಯದಲ್ಲೇ ಇಂಥ ಸೌಲಭ್ಯ ಹೊಂದಿರುವುದು ಬಿಂಕದಕಟ್ಟಿ ಮೃಗಾಲಯದಲ್ಲಿ ಮಾತ್ರ’ ಎನ್ನುತ್ತಾರೆ ಆರ್‌ಎಫ್‌ಒ ಮಹಾಂತೇಶ ಪೆಟ್ಲೂರ.

ಮೃಗಾಲಯದ ಆವರಣದಲ್ಲಿ 150 ಅಡಿ ಉದ್ದ, 40 ಅಡಿ ಅಗಲ, ಮತ್ತು 50 ಅಡಿ ಎತ್ತರದಲ್ಲಿ ಬೃಹತ್ ಪಂಜರ ನಿರ್ಮಿಸಲಾಗಿದೆ. ಸದ್ಯ ಮೃಗಾಲಯದಲ್ಲಿ ವಿವಿಧ ಜಾತಿಯ 20 ಪಕ್ಷಿಗಳಿವೆ. ಇದಲ್ಲದೆ, ಪಕ್ಷಿ ಪ್ರೇಮಿಗಳನ್ನು, ಪ್ರವಾಸಿಗರನ್ನು ಆಕರ್ಷಿಸಲು ವಿವಿಧಜಾತಿಯ 90 ಪಕ್ಷಿಗಳನ್ನು ಮೈಸೂರು ಮೃಗಾಲಯದಿಂದ ಇಲ್ಲಿಗೆ ತರಲಾಗಿದೆ. ಇದರಲ್ಲಿ ಬ್ಲ್ಯಾಕ್‌ ಸ್ವಾನ್‌, ಲೇಡಿ ಅಮೆರ್ಸ್ಟ್‌ ಪೆಸೆಂಟ್, ನೈಟ್‌ ಹೆರಾನ್‌, ಬಡ್ಜ್‌ರಿಗರ್‌, ರೋಸ್‌ ರಿಂಗ್ಡ್‌ ಪ್ಯಾರಾಕೀಟ್‌, ಜವಾ ಸ್ಪಾರೋ, ಫಿಂಚಸ್‌, ಪೇಟೆಂಡ್‌ ಸ್ಟಾರ್ಕ್‌, ರೆಡ್‌ಜಂಗಲ್‌ ಪೌಲ್‌ (ಕಾಡುಕೋಳಿ) ರೋಸ್‌ ಪೆಲಿಕನ್‌ ಪಕ್ಷಿಗಳು ಪ್ರಮುಖ ಆಕರ್ಷಣೆ. ಸದ್ಯ 40 ಪಕ್ಷಿಗಳನ್ನು ಮಾತ್ರ ಈ ಪಂಜರದೊಳಗೆ ಬಿಡಲಾಗಿದೆ.

‘ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೈಸೂರು ಮೃಗಾಲಯದಿಂದ ಪಕ್ಷಿಗಳನ್ನು ತರಲು ಸ್ವಲ್ಪ ವಿಳಂಬವಾಗಿತ್ತು. ಹೊಸ ಅತಿಥಿಗಳು, ನ.16 ರಂದು ಇಲ್ಲಿಗೆ ಬಂದಿವೆ. ಹೊಸ ಪರಿಸರಕ್ಕೆ ಹೊಂದಿಕೊಳ್ಳುತ್ತಿವೆ. ಪಕ್ಷಿಗಳು ಹೆಚ್ಚಿದರೆ ಮೃಗಾಲಯದಲ್ಲಿ ಪ್ರವಾಸಿಗರ ಕಲರವವೂ ಹೆಚ್ಚಲಿದೆ’ ಎಂದು ಆರ್‌ಎಫ್‌ಒ ಅಭಿಪ್ರಾಯಪಟ್ಟರು.

ಈ ಹಕ್ಕಿಹಾದಿಯ ಪಂಜರದಲ್ಲಿ ಪೇರಲ, ನೆರಳೆ, ಕಾಡು ಬಾದಾಮಿ ಸೇರಿ ಹಲವು ಬಗೆಯ ಹಣ್ಣಿನ ಸಸಿಗಳನ್ನು ನೆಡಲಾಗಿದೆ. ಪಕ್ಷಿಗಳ ವಿಶ್ರಾಂತಿ, ನೆಲೆಗಾಗಿ ಅಲ್ಲಲ್ಲಿ ಕೃತಕ ಗೂಡುಗಳನ್ನು ನಿರ್ಮಿಸಲಾಗಿದೆ. ಹಸಿರು ಕಾಪಾಡಿಕೊಳ್ಳಲು ಹುಲ್ಲು ಹಾಸು ಬೆಳೆಸಲಾಗಿದೆ. ಪಕ್ಷಿಗಳ ಪ್ರಮುಖ ಆಹಾರ ಗೆದ್ದಲು, ಹುಳು ಉತ್ಪಾದನೆಗೆ ಜೈವಿಕ ಗುಂಡಿ ನಿರ್ಮಿಸಲಾಗಿದೆ. ‘ಒಟ್ಟಾರೆ ಈ ಪಂಜರದಲ್ಲಿ ಕಾಡಿನಲ್ಲಿರುವ ಅದೇ ಮಾದರಿಯ ನೈಸರ್ಗಿಕ ವಾತಾವರಣ ಮರುಸೃಷ್ಟಿ ಮಾಡುವ ಪ್ರಯತ್ನ ನಡೆದಿದೆ’ ಎಂದು ಅವರು ವಿವರಿಸಿದರು.

ಇಂದು ಉದ್ಘಾಟನೆ
ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ ಪಾಟೀಲ ಅವರು ಭಾನುವಾರ ‘ಹಕ್ಕಿಕಾಪು’ ಉದ್ಘಾಟಿಸಲಿದ್ದಾರೆ. ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವಿರೇಶ್‌, ಸದಸ್ಯ ಕಾರ್ಯದರ್ಶಿ ಬಿ.ಪಿ ರವಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ ಭಾಗವಹಿಸಲಿದ್ದಾರೆ.

* * 

ಮೃಗಾಲಯದಲ್ಲಿ ₹ 34 ಲಕ್ಷ ವೆಚ್ಚದಲ್ಲಿ ಬೃಹತ್ ಪಕ್ಷಿ ಪಂಜರ ನಿರ್ಮಿಸಿ, ‘ಹಕ್ಕಿ ಹಾದಿ’ ಅಭಿವೃದ್ಧಿಪಡಿಸಲಾಗಿದೆ. ನ. 19ರಿಂದ ಇದು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ
ಮಹಾಂತೇಶ ಪೆಟ್ಲೂರ
ಬಿಂಕದಕಟ್ಟಿ ಮೃಗಾಲಯದ ಆರ್‍ಎಫ್‌ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.