ADVERTISEMENT

ಮತ್ತೆ ದಾಖಲೆಯತ್ತ ನಗರದ ಉಷ್ಣಾಂಶ

ಜಿಲ್ಲೆಯಲ್ಲಿ ಜಾನುವಾರುಗಳ ಮೇವಿಗೆ ಮತ್ತು ಕುಡಿಯುವ ನೀರಿಗೆ ತೀವ್ರ ತತ್ವಾರ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 5:53 IST
Last Updated 2 ಫೆಬ್ರುವರಿ 2017, 5:53 IST
ಮತ್ತೆ ದಾಖಲೆಯತ್ತ ನಗರದ ಉಷ್ಣಾಂಶ
ಮತ್ತೆ ದಾಖಲೆಯತ್ತ ನಗರದ ಉಷ್ಣಾಂಶ   

ಗದಗ: ಜಿಲ್ಲೆಯಲ್ಲಿ ಬಿಸಿಲು ದಿನೇ ದಿನೇ  ಉಗ್ರ ಸ್ವರೂಪ ತಾಳುತ್ತಿದೆ. ಈ ಬಾರಿಯ ಉಷ್ಣಾಂಶವು ಫೆಬ್ರುವರಿ ತಿಂಗಳ ಸರ್ವ­ಕಾಲಿಕ ದಾಖಲೆಯನ್ನು (34.1 ಡಿಗ್ರಿ ಸೆಲ್ಸಿಯಸ್‌) ಸಮೀಪಿಸುತ್ತಿದೆ. ನಗರದಲ್ಲಿ ಜ.31ರಂದು 33.5 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ. 

2016ರ ಫೆಬ್ರುವರಿ ತಿಂಗಳಲ್ಲಿ ಗರಿಷ್ಠ 34.1 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. ಸಾಮಾನ್ಯವಾಗಿ ಫೆಬ್ರುವರಿ ತಿಂಗಳಲ್ಲಿ ಗದುಗಿನಲ್ಲಿ 30ರಿಂದ 31 ಡಿಗ್ರಿ ಸೆಲ್ಸಿಯಸ್‌ ವಾಡಿಕೆ ಉಷ್ಣಾಂಶ ಇರುತ್ತದೆ . ಆದರೆ ಬುಧವಾರ ಬಿಸಿಲಿನ ಝಳ 34 ಡಿಗ್ರಿ ಸಮೀಪಕ್ಕೆ ಬಂದಿದೆ. ಇದು  ತಿಂಗಳಾಂತ್ಯಕ್ಕೆ ದಾಖಲೆ ಪ್ರಮಾಣ ತಲುಪುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂಲಗಳು ಹೇಳಿವೆ.  ಬೆಳಿಗ್ಗೆ 9ರಿಂದ ಸಂಜೆ 4ರ­ವರೆಗೆ ತೀವ್ರ ಬಿಸಿಲಿರುತ್ತದೆ. ಬಿಸಿಲಿನ ಪ್ರಖರತೆಯಿಂದ ಮಧ್ಯಾಹ್ನದ ವೇಳೆಗೆ ಮನೆಯಿಂದ ಹೊರಗಡೆ ಬರಲು ಆಗು­ತ್ತಿಲ್ಲ.  ಈಗಲೇ ಈ ಸ್ಥಿತಿಯಾದರೆ ಮಾರ್ಚ್‌, ಏಪ್ರಿಲ್‌ನಲ್ಲಿ ವೇಳೆಗೆ ಹೇಗೆ ಎನ್ನುತ್ತಿದ್ದಾರೆ ನಗರದ ಜನತೆ.

ಜಿಲ್ಲೆಯಲ್ಲಿ ಜಲಮೂಲಗಳಾದ ಕೆರೆಗಳು ಬತ್ತಿದ್ದು, ಭೂಮಿ ಬಿರುಕು ಬಿಟ್ಟು ನಿಂತಿದೆ.  ನೀರಿನ ಸೆಲೆ ಕಣ್ಮರೆ­ಯಾಗಿರುವುದರಿಂದ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿದೆ. ಇದ­ರಿಂದಾಗಿ ನಗರದಲ್ಲಿ ಬಿಸಿಲ ಧಗೆ ಹೆಚ್ಚುತ್ತಿದೆ. ಇನ್ನೊಂದೆಡೆ ಒಣ ಹವೆ ಕೂಡ ಹೆಚ್ಚಾಗುತ್ತಿದೆ.

ಒಂದೇ ವಾರದಲ್ಲಿ ಏರಿಕೆ: ಜನವರಿ ಕೊನೆಯ ವಾರದಲ್ಲಿ ಸರಾಸರಿ  ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್‌ ಇತ್ತು.  ಆದರೆ, ಕಳೆದ ಒಂದು ವಾರದಿಂದ ಉಷ್ಣಾಂಶದಲ್ಲಿ ದಿಢೀರ್‌ ಏರಿಕೆ­ಯಾ­ಗಿದ್ದು, ಬಿಸಿಲಿನ ಬೇಗೆಯಿಂದ ತತ್ತರಿಸಿದ ಜನರು ಮನೆಗಳಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಬಾಯಾರಿಕೆ ನೀಗಿಸಿಕೊಳ್ಳಲು ಎಳೆನೀರು, ಕಬ್ಬಿನ ಹಾಲು, ಕಲ್ಲಂಗಡಿ  ಮೊರೆ ಹೋಗುತ್ತಿ­ರು­ವುದು ಸಾಮಾನ್ಯ ದೃಶ್ಯವಾಗಿದೆ.

ಬಾಕ್ಸ್‌
33 ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ : ಒಂದೆಡೆ ಬಿಸಿಲಿನ ಝಳಕ್ಕೆ ಜನತೆ ಬೇಸೆತ್ತಿದ್ದಾರೆ.ಇನ್ನೊಂದೆಡೆ ಜಿಲ್ಲೆ­ಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಹಲವೆಡೆ ಜನರು ಕುಡಿ­ಯುವ ನೀರಿಗೆ ಕೆರೆಯುನ್ನೇ ಆಶ್ರಯಿ­ಸಿದ್ದಾರೆ. ಆದರೆ, ಕೆರೆ ಒಡಲು ಬತ್ತಿದ್ದು ಕುಡಿಯಲು ಮತ್ತು ಕೃಷಿ ಚಟುವಟಿಕೆಗಳಿಗೆ ಬಳಸಲು ನೀರಿನ ಅಭಾವ ಉಂಟಾಗಿದೆ. ಜನವರಿ 3ನೇ ವಾರದಲ್ಲಿ ಜಿಲ್ಲೆಗೆ  ಭೇಟಿ ನೀಡಿದ್ದ  ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಎಸ್.­ಪಟ್ಟಣ­ಶೆಟ್ಟಿ ಅವರು, ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ತುರ್ತು ನೀರಿನ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿ ಹೋಗಿದ್ದಾರೆ. ನೀರಿನ ತೊಂದರೆ­­ಯಾಗದಂತೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳು ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ಜಿಲ್ಲಾಡಳಿತದ ಅಂಕಿ ಅಂಶದ ಪ್ರಕಾರ, ಮುಂಬರುವ ಬೇಸಿಗೆಯಲ್ಲಿ ಜಿಲ್ಲೆಯ 33 ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ­ಯಿದೆ. ಈ ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡ­ಲಾಗುವುದು. ಕೆರೆಗಳ ಪುನಶ್ಚೇತನ ಯೋಜನೆಯಡಿ 10 ಕಾಮಗಾರಿಗಳು ಪ್ರಗತಿಯಲ್ಲಿವೆ. ಕೆರೆ ಸಂಜೀವಿನಿ ಯೋಜನೆಯಡಿ 144 ಕಾಮಗಾರಿಗಳ ಪೈಕಿ 124 ಕಾಮಗಾರಿಗಳು ಪೂರ್ಣ­ಗೊಂಡಿದೆ. ಅದರಲ್ಲಿ 12 ಕಾಮಗಾರಿ­ಗಳು ಪ್ರಗತಿಯಲ್ಲಿವೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವ­ಹಣಾಧಿಕಾರಿ ಮಂಜುನಾಥ ಚವ್ಹಾಣ.

ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಒಟ್ಟು 641.6 ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು.  ಅದರಲ್ಲಿ 370.2 ಮಿ.ಮೀ. ಮಳೆಯಾಗಿದೆ. ಶೇ 43 ರಷ್ಟ ಮಳೆ ಕೊರತೆಯಾಗಿದೆ. ಮುಂಗಾರು ಹಂಗಾಮಿಗಾಗಿ 2,05,822 ಹೆಕ್ಟೇರ್ ಪ್ರದೇಶದಲ್ಲಿ ತೇವಾಂಶ ಕೊರತೆಯಿಂದ ಬೆಳೆ ಹಾನಿಯಾಗಿದೆ. ಸದ್ಯ ಗದುಗಿನಲ್ಲಿ 8ರಿಂದ 10 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಮುಂಡರಗಿಯಲ್ಲಿ 5 ದಿನಗಳಿಗೊಮ್ಮೆ, ನರಗುಂದದಲ್ಲಿ 8 ದಿನಗಳಿಗೊಮ್ಮೆ, ರೋಣದಲ್ಲಿ 8 ದಿನಗಳಿಗೊಮ್ಮೆ   ಹಾಗೂ ಶಿರಹಟ್ಟಿಯಲ್ಲಿ ಪ್ರತಿದಿನ ನೀರು ಪೂರೈಕೆ ಮಾಡಲಾಗುತ್ತಿದೆ.

***

ಲಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುವುದು.
- ಮಂಜುನಾಥ ಚವ್ಹಾಣ, ಜಿಲ್ಲಾ ಪಂಚಾಯಿತಿ ಸಿಇಒ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.