ADVERTISEMENT

ಮಹದಾಯಿಗೂ ಆದ್ಯತೆ ನೀಡಿ

ನರಗುಂದದಲ್ಲಿ 1005ನೇ ದಿನಕ್ಕೆ ಕಾಲಿಟ್ಟ ಮಹದಾಯಿ ಧರಣಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 8:32 IST
Last Updated 16 ಏಪ್ರಿಲ್ 2018, 8:32 IST

ನರಗುಂದ: ‘ಉತ್ತರ ಕರ್ನಾಟಕದ ಜೀವನಾಡಿಯಂತಿರುವ ಮಹದಾಯಿ ಯೋಜನೆಗೆ ಅಖಂಡ ಕರ್ನಾಟಕದ ಜನತೆ ಬೆಂಬಲವಾಗಿ ನಿಂತಿದೆ. ಆದರೆ ಇದಕ್ಕೆ ಈ ಭಾಗದ ಜನಪ್ರತಿನಿಧಿಗಳ ನಿರ್ಲಕ್ಷ ಹೆಚ್ಚಾಗಿದೆ, ಚುನಾವಣೆ ಬಂದಾಗ ಮಾತ್ರ ಮಹದಾಯಿ ಎಂದು ಕನವರಿಸುತ್ತಾರೆ ಹೊರತು ಅದಕ್ಕೆ ಆದ್ಯತೆ ನೀಡುತ್ತಿಲ್ಲ. ತಾವು ನಿಜವಾಗಿ ರಾಜಕಾರಣಿಗಳಾಗಿ ಜನಸೇವೆಯ ಮನಸ್ಸಿದ್ದರೆ ಚುನಾವಣೆಗೆ ನೀಡುವ ಪ್ರಾಮುಖ್ಯವನ್ನು ಮಹದಾಯಿ ಅನುಷ್ಠಾನಕ್ಕೆ ನೀಡಿ’ ಎಂದು ಬೆಂಗಳೂರಿನ ಧನಂಜಯ ಆಗ್ರಹಿಸಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 1005ನೇ ದಿನವಾದ ಭಾನುವಾರ ಮಾತನಾಡಿದರು.‘ಮಹದಾಯಿಗೆ ಸರ್ವರ ಪ್ರಯತ್ನ ನಡೆದರೂ ಆಳುವ ವರ್ಗ ಅದರ ಬಗ್ಗೆ ನಿರಾಸಕ್ತಿ ತೋರಿ ಹೋರಾಟ ಜೀವಂತವಾಗಿ ಇರುವಂತೆ ಮಾಡಿದೆ. ಇದನ್ನು ನಾಡಿನ ಜನತೆ ಸಹಿಸಲಾರರು. ಯಾವುದಾದರೂ ರೀತಿಯಲ್ಲಿ ಜನಪ್ರತಿನಿಧಿಗಳಿಗೆ ಪಾಠ ಕಲಿಸಬೇಕಿದೆ. ಚುನಾವಣೆಯಲ್ಲಿ ಮತ ಕೋರಿ ಮಹದಾಯಿ ಬಳಸದಂತೆ ಮಾಡಬೇಕಿದೆ’ ಎಂದರು.

ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ ಮಾತನಾಡಿ ‘ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಮ್ಮ ಆಶೋತ್ತರಗಳಿಗೆ ಸ್ಪಂದಿಸುತ್ತಿಲ್ಲ. ಈ ಸಲದ ವಿಧಾನಸಭೆ ಚುನಾವಣೆ ಎಲ್ಲ ಪಕ್ಷಗಳಿಗೂ ಪಾಠವಾಗಬೇಕಿದೆ. ಮಹಿಳೆಯರು ಚನ್ನಮ್ಮ, ಓಬವ್ವನ ರೀತಿಯಲ್ಲಿ ಮಹದಾಯಿ ಹೋರಾಟದಲ್ಲಿ ಪಾಲ್ಗೊಳ್ಳಬೇಕಿದೆ’ ಎಂದರು.

ADVERTISEMENT

ಧರಣಿಯಲ್ಲಿ ಎಸ್‌.ಬಿ.ಜೋಗಣ್ಣವರ, ಅರ್ಜುನ ಮಾನೆ, ಯಲ್ಲಪ್ಪ ಗುಡದೇರಿ, ಎಸ್‌.ಬಿ.ಕೊಣ್ಣೂರು, ಶಿವಪ್ಪ ಸಾತನ್ನವರ, ವೆಂಕಪ್ಪ ಹುಜರತ್ತಿ, ರತ್ನವ್ವ ಸವಳಭಾವಿ, ಅನಸವ್ವ ಶಿಂಧೆ ಹಾಗೂ ಹೋರಾಟ ಸಮಿತಿ ಸದಸ್ಯರು ಇದ್ದರು,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.