ADVERTISEMENT

ಮಹಿಳಾ ಸಬಲೀಕರಣಕ್ಕೆ ಕೇಂದ್ರ ಸರ್ಕಾರದ ಆದ್ಯತೆ: ಬಿರದೂರ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 10:33 IST
Last Updated 20 ಜುಲೈ 2017, 10:33 IST

ಮುಳಗುಂದ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾರಿಗೆ ತಂದ ‘ಬೇಟಿ ಪಢಾವೋ– ಬೇಟಿ ಬಚಾವೋ’ ಹಾಗೂ ‘ಸುಕನ್ಯಾ ಸಮೃದ್ಧಿ’ ಯೋಜನೆಗಳು ಹೆಣ್ಣು ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಆಗಿವೆ. ಇವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಎಂದು ಮಾಜಿ ಶಾಸಕ ಎಸ್.ವಿ.ಬಿದರೂರ ಸಲಹೆ ನೀಡಿದರು.

ಪಟ್ಟಣದ ಲಕ್ಷ್ಮೀ ವೆಂಕಟೇಶ್ವರ ಭವನದಲ್ಲಿ ಈಚೆಗೆ ನಡೆದ ಬಿಜೆಪಿ ವಿಸ್ತಾರಕರ ಸಭೆಯಲ್ಲಿ ಅವರು ಮಾತನಾಡಿದರು.

ಎಲ್ಲ ವರ್ಗದ ಜನರ ಅಭಿವೃದ್ಧಿ ಹಾಗೂ ಆರ್ಥಿಕ ಸಬಲತೆ ಕಾಣಲು ಮುದ್ರಾ ಯೋಜನೆ, ಬಡವರಿಗಾಗಿ ಜನಧನ ಯೋಜನೆ ಸೇರಿ ಹಲವು ಜನಪರ ಯೋಜನೆಗಳನ್ನು ಕಾರ್ಯಗತ ಮಾಡುವ ಮೂಲಕ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡಿಸಿದ್ದಾರೆ. ಈ ಯೋಜನೆಗಳ ಲಾಭವನ್ನು ದೇಶದ ಪ್ರತಿ ಪ್ರಜೆ ಪಡೆಯಬೇಕು ಎಂದರು.

ADVERTISEMENT

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮೋಹನ ಮಾಳಶೆಟ್ಟಿ ಮಾತನಾಡಿ, ಪಂಡಿತ ದಿನದಯಾಳ್ ಉಪಾಧ್ಯಾಯ ಅವರ ಅಂತ್ಯೋದಯ ಆಶಯವನ್ನು ಈಡೆರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಭಾಗವಾಗಿ ಇಂದು ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಯೋಜನೆಯ ಮಹತ್ವ ತಿಳಿಸಿಕೊಡುತ್ತಿದ್ದಾರೆ. ಉಜ್ವಲ ಯೋಜನೆ ಅಡಿ ಪಟ್ಟಣದಲ್ಲಿ 605 ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು ಅಗತ್ಯ ದಾಖಲೆಗಳನ್ನು ನೀಡಿ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದರು.

ಸ್ಥಳಿಯ ಘಟಕದ ಅಧ್ಯಕ್ಷ ಬಿ.ಎಂ. ಕುಲಕರ್ಣಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ವಿಸ್ತಾರಕ ಗಿರಿಶ ಕಾರಬಾರಿ, ರಾಜ್ಯ ಮಹಿಳಾ ಘಟಕದ ಕಾರ್ಯಕಾರಿಣಿ ಸದಸ್ಯೆ ವಂದನಾ ವೇರ್ಣಿಕರ, ಮಹಿಳಾ ಮೋರ್ಚಾದ ಅಧ್ಯಕ್ಷೆ ಅಶ್ವಿನಿ ಜಗತಾಪ್, ಪ್ರಧಾನ ಕಾರ್ಯದರ್ಶಿಗಳಾದ ಶಾರದಾ ಸಜ್ಜನರ, ಯಲ್ಲಪ್ಪ ಜಿಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.