ADVERTISEMENT

ಮುಂಡರಗಿ, ಗಜೇಂದ್ರಗಡದಲ್ಲೂ ವಿರೋಧ

​ಪ್ರಜಾವಾಣಿ ವಾರ್ತೆ
Published 25 ಜುಲೈ 2017, 7:04 IST
Last Updated 25 ಜುಲೈ 2017, 7:04 IST

ಮುಂಡರಗಿ: ಎಪಿಎಂಸಿ ವ್ಯಾಪಾರಸ್ಥರು ಹಾಗೂ ದಲ್ಲಾಲರು ಸೋಮವಾರ ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದ ರಿಂದ ಪಟ್ಟಣದ ಟಿಎಪಿಪಿಎಂಎಸ್ (ಕೃಷಿ ಉತ್ಪನ್ನ ಮಾರುಕಟ್ಟೆ ಕೋ ಆಪರೇಟಿವ್ ಸೊಸೈಟಿ) ಯಿಂದ ಇ- ಪೇಮೆಂಟ್ ಮೂಲಕ ರೈತರ ಬೆಳೆಯನ್ನು ಖರೀದಿಸಲಾಯಿತು.

ಎಪಿಎಂಸಿ ವರ್ತಕರ ಪ್ರತಿನಿಧಿ ಕೊಟ್ರೇಶಪ್ಪ ಅಂಗಡಿ ಮಾತನಾಡಿ, ಇ- ಪೇಮೆಂಟ್ ಯೋಜನೆಯನ್ನು ಕೇವಲ ಗದಗ ಜಿಲ್ಲೆಗೆ ಮಾತ್ರ ಪ್ರಾರಂಭಿಸುವುದು ಸರಿಯಾದ ಕ್ರಮವಲ್ಲ, ಇ- ಪೇಮೆಂಟಿ ನಿಂದ ದರದಲ್ಲಿ ವ್ಯತ್ಯಾಸವಾಗುತ್ತದೆ. ಇದರಿಂದಾಗಿ ರೈತರು ಇ- ಪೇಮೆಂಟ್ ಜಾರಿ ಇಲ್ಲದೆ ಇರುವ ಮುಂಡರಗಿ ಮಾರುಕಟ್ಟೆಯನ್ನು ಬಿಟ್ಟು ಪಕ್ಕದಲ್ಲಿರುವ ಕೊಪ್ಪಳ, ಬಳ್ಳಾರಿ, ಹರಪನಹಳ್ಳಿ, ಹೂವಿ ನಹಡಗಲಿ ಮಾರುಕಟ್ಟೆಗಳಿಗೆ ಬೆಳೆಯನ್ನು ಮಾರಾಟ ಮಾಡುತ್ತಾರೆ ಎಂದರು.

ಸರ್ಕಾರ ಈ ಯೋಜನೆಯನ್ನು ಕೇವಲ ಗದಗ ಜಿಲ್ಲೆಗೆ ಸೀಮಿತ ಗೊಳಿಸದೆ ರಾಜ್ಯದಾದ್ಯಂತ ಅನುಷ್ಠಾನ ಮಾಡಿದರೆ ಇಲ್ಲಿಯ ವ್ಯಾಪಾರಸ್ಥರ ಅಭ್ಯಂತರವಿಲ್ಲ ಎಂದು ತಿಳಿಸಿದರು.

ADVERTISEMENT

ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ವೀರಣ್ಣ ಬೇವಿನಮರದ ಮಾತನಾಡಿ, ಇ- ಪೇಮೆಂಟ್ ಯೋಜನೆಯು ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ ಎಂದರು.

ಎಪಿಎಂಸಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಮಾತನಾಡಿ, ‘ಇ- ಪೇಮೆಂಟ್ ಜಾರಿಯಿಂದ ರೈತರಿಗೆ, ವರ್ತಕರಿಗೆ ಮತ್ತು ಎಪಿಎಂಸಿಗೆ ಅನುಕೂಲ ಆಗಲಿದೆ. ಪಾರದರ್ಶಕ ವಹಿವಾಟು ಮಾಡುವ ಉದ್ದೇಶದಿಂದ ಇ-ಪೇಮೆಂಟ್ ಜಾರಿ ತರಲಾಗುತ್ತಿದೆ. ಇದಕ್ಕೆ ಎಪಿಎಂಸಿಯ ಎಲ್ಲ ವರ್ತಕರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಗಜೇಂದ್ರಗಡ ವರದಿ
ರಾಜ್ಯ ಸರ್ಕಾರವು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇ– ಪೇಮೆಂಟ್ ವ್ಯವಸ್ಥೆ ಜಾರಿಗೆ ತಂದಿರುವ ಕ್ರಮಕ್ಕೆ ಗಜೇಂದ್ರಗಡದಲ್ಲೂ ವಿರೋಧ ವ್ಯಕ್ತವಾಗಿದೆ.

ಇ– ಪೇಮೆಂಟ್‌ ಜಾರಿಯಿಂದ ತಮಗೆ ಮತ್ತು ರೈತರಿಗೆ ಬಹಳಷ್ಟು ತೊಂದರೆ ಆಗುತ್ತಿದ್ದು ಅದನ್ನು ಪುನರ್ ಪರಿಶೀಲಿಸಬೇಕು. ಇಲ್ಲದಿದ್ದರೆ ತಾವು ವ್ಯಾಪಾರ ವಹಿವಾಟನ್ನು ಬಂದ್ ಮಾಡು ವುದಾಗಿ ಇಲ್ಲಿನ ಜಗಜ್ಯೋತಿ ಬಸವೇಶ್ವರ ಉಪ ಮಾರುಕಟ್ಟೆಯ ವರ್ತಕರು ಎಚ್ಚರಿಕೆ ನೀಡಿದ್ದರೂ, ಸರ್ಕಾರವು ಇದನ್ನು ಗಣನೆಗೆ ತೆಗೆದುಕೊಳ್ಳದ ಕಾರಣ ಎಲ್ಲ ಅಂಗಡಿಗಳನ್ನು ವರ್ತಕರು ಸೋಮ ವಾರ ಬಂದ್ ಮಾಡಿದ್ದರಿಂದ ಎಪಿಎಂಸಿ ಮಾರುಕಟ್ಟೆಯು ಬಿಕೋ ಎನ್ನುತ್ತಿತ್ತು.

ಅತ್ತ ಎಪಿಎಂಸಿಯಲ್ಲಿ ಇ– ಪೇಮೆಂಟ್ ವ್ಯವಸ್ಥೆಗೆ ಎಪಿಎಂಸಿ ಅಧ್ಯಕ್ಷ ವೀರಣ್ಣ ಶೆಟ್ಟರ ಚಾಲನೆ ನೀಡಿದರೆ, ಇತ್ತ ವರ್ತಕರು ಹೊಸ ವ್ಯವಸ್ಥೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ರಾಜಣ್ಣ ಹೂಲಿ, ರೇಣುಕಾ ದೇವಗಣ್ಣವರ, ಲಿಂಗನಗೌಡ ಲಕ್ಕನ ಗೌಡರ, ಐ.ಎಚ್.ಬಾಗವಾನ, ನೀಲಪ್ಪ ತೊಂಡಿಹಾಳ, ಎ.ಬಿ.ಕುರಹಟ್ಟಿ, ಹನಮಂತಪ್ಪ, ನಾಗರಾಜ, ಕಳಕಪ್ಪ ಅಡಲಿ ಇದ್ದರು. ಅತ್ತ ದಲಾಲರ ಬಂದ್, ಇತ್ತ ರೈತರ ಮಾಲನ್ನು ಸರ್ಕಾರ ಖರೀದಿ ಪ್ರಕ್ರಿಯೆ ಇದರಿಂದ ಇಲ್ಲಿನ ಮಾರುಕಟ್ಟೆ ಯಲ್ಲಿ ಮುಸುಕಿನ ಗುದ್ದಾಟದಿಂದ ರೈತ ಬಲಿಯಾಗಬಾರದು ಎಂಬ ಮಾತು ಎಪಿಎಂಸಿ ಪ್ರಾಂಗಣದಲ್ಲಿ ಕೇಳಿಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.