ADVERTISEMENT

ಮೂಲಸೌಲಭ್ಯ ಕಾಣದ ಜನತಾ ಪ್ಲಾಟ್‌

ಕೊಳಚೆ ನಡುವೆ ವಾಸಿಸುತ್ತಿರುವ ನಿವಾಸಿಗಳು, ಸಮಸ್ಯೆ ಬಗೆಹರಿಸದ ಸದಸ್ಯರು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 6:10 IST
Last Updated 6 ಫೆಬ್ರುವರಿ 2017, 6:10 IST

ಡಂಬಳ: ಇಲ್ಲಿಯ ಜನತಾ ಪ್ಲಾಟ್‌ ನಿವಾಸಿ­ಗಳು ಹಲವು ದಶಕಗಳಿಂದ ಕೊಳೆಗೇರಿಯಲ್ಲೇ ಜೀವನ ಮಾಡು­ವಂತಾಗಿದೆ. ಇಲ್ಲಿಯ ಜನರಿಗೆ
ಮೂಲ ಸೌಲಭ್ಯ ಎಂದರೆ ಮರೀಚಿಕೆಯಾಗಿದೆ. ಹೀಗಾಗಿ ಜನರು ಪಂಚಾಯ್ತಿ ಸದಸ್ಯರ ವಿರುದ್ಧ ಆಕ್ರೋಶ್ಯ ವ್ಯಕ್ತಪಡಿಸುತ್ತಾರೆ.

ಈಚೆಗೆ ನಿರ್ಮಾಣಗೊಂಡ  ಬಡಾವ­ಣೆಗಳಿಗೆ ಸಿ.ಸಿ ರಸ್ತೆ ಕಾಮಗಾರಿಮ ಮಾಡಿಸಿದ್ದಾರೆ. ಆದರೆ ಕೊಳಚೆ ಪ್ರದೇಶ­ದಲ್ಲಿ ವಾಸಮಾಡುವ ಜನತಾ ಪ್ಲಾಟ್‌ ನಿವಾಸಿಗಳ ಕಷ್ಟ ಸದಸ್ಯರಿಗೆ ತಿಳಿಯುತ್ತಿಲ್ಲ ಎಂಬುದು ಇಲ್ಲಿಯ ನಿವಾಸಿಗಳಿಗೆ ನೋವು ತರಿಸಿದೆ.

‘8ನೇ ವಾರ್ಡ್‌ ವ್ಯಾಪ್ತಿಗೆ ಬರುವ ಜನತಾ ಕಾಲೊನಿ ಸದಾ ಗಬ್ಬೆದ್ದು ನಾರುತ್ತದೆ.  ಸಂಜೆಯಾಗುತ್ತಿದ್ದಂತೆ ಸೊಳ್ಳೆ ಕಾಟಕ್ಕೆ ಜನರು ಹೈರಾಣಾಗಿದ್ದಾರೆ. ಮಳೆಗಾಲದಲ್ಲಿ ವಿವಿಧ ಕಡೆಯಿಂದ ಸಂಗ್ರಹವಾಗುವ ನೀರು ಈ ಓಣಿಯಲ್ಲಿ ನದಿಯಂತೆ ಹರಿಯುತ್ತದೆ.

ಪ್ರತಿ ಬಾರಿಯೂ ಸದಸ್ಯರಿಗೆ ಕಷ್ಟ ಹೇಳಿಕೊಳ್ಳುವುದೇ ಆಗಿದೆ. ಆದರೆ ಪರಿಹಾರ ಮಾತ್ರ ಸಿಗುತ್ತಿಲ್ಲ. ಜನಪ್ರತಿನಿಧಿಗಳ ಭರವಸೆಯ ಮಾತು ಕೇಳಿ ನಮಗೂ ಸಾಕಾಗಿದೆ. ಸಿಸಿ ರಸ್ತೆ ಇಲ್ಲ.

ಗಟಾರು ನಿರ್ಮಾಣವಾಗಿಲ್ಲ. ಪಂಚಾಯ್ತಿ ಚುನಾವಣೆಯಲ್ಲಿ ಓಟು ಹಾಕಿಸಿಕೊಂಡು ಹೋದವರು ಇಲ್ಲಿಗೆ ತಲೆ ಹಾಕಿಲ್ಲ’ ಎಂದು ಸಾಹಿಸಾಬ್‌ ಹೊಸಭಾವಿ ಹಾಗೂ ರುದ್ರಪ್ಪ ಹಡಪದ ನೋವು ತೋಡಿಕೊಂಡರು.

‘ನಮ್ಮಿಂದ ಓಟು ಪಡೆಯುವಾಗ  ಎಲ್ಲಾ ರೀತಿಯ ಸವಲತ್ತು ಮಾಡುತ್ತೇವೆ ಎಂಬ ಬಣ್ಣ ಬಣ್ಣದ ಮಾತು ಹೇಳುತ್ತಾರೆ. ಆದರೆ ಆಯ್ಕೆಯಾದ ನಂತರ ನಾವು ಪರಿತಪಿಸಬೇಕು. ರಾತ್ರಿ ಕತ್ತಲು,ಸೊಳ್ಳೆಯ ಕಾಟ, ನೀರಿನ ಕೊರತೆಯಿಂದ ಕಾಲೊನಿ ತತ್ತರಿಸಿದೆ. 

ವೃದ್ಧರು, ಮಕ್ಕಳು, ಯುವ­ಕರು  ರಾತ್ರಿ ಸಂಚರಿಸುವುದು  ಕಷ್ಟವಾ­ಗಿದೆ ನಮ್ಮ ಸಮಸ್ಯೆಯನ್ನು ಯಾರಿಗೆ ಹೇಳಿದರೂ ಪರಿಹಾರ ಮಾತ್ರ ದೊರೆಯುತ್ತಿಲ್ಲ’ ಎನ್ನುತ್ತಾರೆ  ಬೀಬಿ­ಜಾನ್‌ ನದಾಫ ಹಾಗೂ ದ್ಯಾಮವ್ವ ಕೊರವರ ತಿಳಿಸಿದರು.

ಮೂಲಸೌಕಯರ್ಗಳಿಂದ ವಂಚಿತ­ವಾದ ಕಾಲೊನಿ ಅಭಿವೃದ್ಧಿಗೆ ಆದ್ಯತೆ ನೀಡಲು ಕ್ರಮ ಕೈಗೊಳ್ಳಲಾಗುವುದು. ಮೂಲ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು’ ಎಂದು ಜಿಲ್ಲಾ ಪಂಚಾಯ್ತಿ ಎಂಜಿನಿಯರ್‌ ಎಂ.ಡಿ ತೋಗುಣಿಸಿ ತಿಳಿಸಿದರು.
-ಲಕ್ಷ್ಮಣ ಎಚ್ ದೊಡ್ಡಮನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.