ADVERTISEMENT

ರೈತರ ಜಮೀನಿಗೆ ಗೊಬ್ಬರವಾದ ಕೆರೆ ಹೂಳು

ಜೋಮನ್ ವರ್ಗಿಸ್
Published 15 ಮಾರ್ಚ್ 2017, 7:09 IST
Last Updated 15 ಮಾರ್ಚ್ 2017, 7:09 IST

ಗದಗ: ನಗರದ ಹೃದಯ ಭಾಗದಲ್ಲಿ ರುವ 102 ಏಕರೆ ವಿಸ್ತೀರ್ಣದ ಭೀಷ್ಮ ಕೆರೆಯ ಬಸವೇಶ್ವರ ಪುತ್ಥಳಿ ಹಿಂಭಾಗದ ಪ್ರದೇಶದಲ್ಲಿ ಎರಡನೆಯ ಹಂತದ ಹೂಳೆತ್ತುವ ಕಾಮಗಾರಿ ಎರಡು ವಾರಗಳ ಹಿಂದೆ ಪ್ರಾರಂಭವಾಗಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ ಮುಖ್ಯ ಕೆರೆಯಿಂದ 40 ಸಾವಿರ  ಕ್ಯೂಬಿಕ್‌ ಮೀಟರ್‌ನಷ್ಟು, ಅಂದಾಜು 20 ಸಾವಿರ  ಟ್ರ್ಯಾಕ್ಟರ್‌ಗಳಷ್ಟು ಹೂಳು ಹೊರತೆಗೆ ಯಲಾಗಿತ್ತು. ಕೆರೆಯಿಂದ ತೆಗೆದ ಫಲ ವತ್ತಾದ ಹೂಳನ್ನು ರೈತರು ಸ್ವಯಂ ಪ್ರೇರಣೆಯಿಂದ ಟ್ರ್ಯಾಕ್ಟರ್‌ಗಳಲ್ಲಿ ತಮ್ಮ ಜಮೀನುಗಳಿಗೆ ತೆಗೆದುಕೊಂಡು ಹೋಗಿ ದ್ದರು. ಈ ಬಾರಿಯೂ ಗದಗ ಸುತ್ತಮುತ್ತ ಲಿನ 15ಕ್ಕೂ ಹೆಚ್ಚು ಗ್ರಾಮಗಳ ರೈತರು ಟ್ರ್ಯಾಕ್ಟರ್‌ಗಳ ಜತೆ ಬಂದು ಹೂಳು ತೆಗೆದುಕೊಂಡು ಹೋಗುತ್ತಿದ್ದಾರೆ.

ಮಳೆ ಕೊರತೆ ಮತ್ತು ಸತತ ಬರ ದಿಂದಾಗಿ ಮಣ್ಣಿನ ಫಲವತ್ತತೆ ಕಡಿಮೆ ಯಾಗಿದೆ. ಕೆರೆಯ ಹೂಳಿನಲ್ಲಿ ನೈಸರ್ಗಿಕ ಪೋಷಕಾಂಶಗಳು ಹೆಚ್ಚಿರುತ್ತವೆ. ಜತೆಗೆ ತೇವಾಂಶವೂ ಹೆಚ್ಚಿರುತ್ತದೆ. ಜೂನ್‌ನಲ್ಲಿ ಅಲ್ಪ ಪ್ರಮಾಣದ ಮಳೆ ಲಭಿಸಿದರೂ ಸಾಕು. ಒಳ್ಳೆಯ ಬೆಳೆ ಬರುತ್ತದೆ ಎನ್ನುತ್ತಾರೆ ಹಿರೇಕೊಪ್ಪದಿಂದ ಹೂಳು ತೆಗೆದುಕೊಂಡು ಹೋಗಲು ಕರೆಯಂಗ ಳಕ್ಕೆ ಬಂದಿದ್ದ ರೈತ ದ್ಯಾಮಪ್ಪ ಲಮಾಣಿ.

ADVERTISEMENT

ಮಸಾರಿ ಜಮೀನಿಗೆ ಕೆರೆ ಹೂಳು ಉತೃಷ್ಟ. ಸರ್ಕಾರಿ ಗೊಬ್ಬರ ಹಾಕಿ ಭೂಮಿಯನ್ನು ನಾಶ ಮಾಡುವುದಕ್ಕಿಂತ ಇದು ಪರಿಸರ ಸ್ನೇಹಿ ವಿಧಾನ. ಟ್ರ್ಯಾಕ್ಟರ್‌ ಬಾಡಿಗೆ, ಆಳಿನ ಕೂಲಿ ಸೇರಿ ಒಂದು ಟ್ರ್ಯಾಕ್ಟರ್‌ಗೆ ₹ 250 ವೆಚ್ಚವಾಗುತ್ತದೆ. ಆದರೂ ಇದು ಲಾಭದಾಯಕ. ಅಪ ರೂಪಕ್ಕೆ ಇಂತಹ ಅವಕಾಶ ಲಭಿಸುತ್ತದೆ. ಈಗಾಗಲೇ ಜಮೀನಿಗೆ 30 ಟ್ರ್ಯಾಕ್ಟರ್‌ ಹೂಳು ಹಾಕಿಸಿದ್ದೇನೆ ಎನ್ನುತ್ತಾರೆ ತಾಲ್ಲೂಕಿನ ಹೊಂಬಳ ರೈತ ಮಲ್ಲೇಶಪ್ಪ.

ಸದ್ಯ ಜಮೀನಿನಲ್ಲಿ ಬಿತ್ತನೆ, ಕಟಾವು ಕೆಲಸ ಮುಗಿದಿದ್ದು, ಕಸ ಕಡ್ಡಿಗಳನ್ನು ತೆಗೆದು ಹೊಲ ಸ್ವಚ್ಛಗೊಳಿಸುವ ಕೆಲಸ ನಡೆದಿದೆ. ಭೂಮಿಯ ಮೇಲ್ಪದರದ ಮಣ್ಣು ಫಲವತ್ತತೆ ಕಳೆದುಕೊಂಡಿದ್ದು, ಕೆರೆಯ ಹೂಳನ್ನು ತಂದು ಜಮೀನಿನ ಮೇಲ್ಮಟ್ಟದಲ್ಲಿ ಹರಡುವುದರಿಂದ ಮುಂಗಾರು ಹಂಗಾಮಿನ ಬೆಳೆ ಚೆನ್ನಾಗಿ ಬರುತ್ತದೆ. ಹಿಂದೆ ದಶಕದ ಹಿಂದೆ ಈ ರೀತಿ ಪ್ರಯೋಗ ಮಾಡಿ ಯಶಸ್ವಿಯಾ ಗಿದ್ದೆವು ಎನ್ನುತ್ತಾರೆ ಚಿಕ್ಕೊಪ್ಪದ ರೈತ ಬಸವರಾಜ.

ಮೊದಲನೇ ಹಂತದಲ್ಲಿ ಕೆರೆಯಲ್ಲಿ 4 ಅಡಿ ಆಳದಷ್ಟು ಹೂಳೆತ್ತಲಾಗಿತ್ತು. ಎರಡನೇ ಹಂತದಲ್ಲಿಇನ್ನೂ 6 ಅಡಿ ಆಳದಷ್ಟು ಹೂಳೆತ್ತುವ ಯೋಜನೆ ಇದೆ. ಇದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಲಿದೆ. ನಗರದ ಕುಡಿ ಯುವ ನೀರಿನ ಬವಣೆಯೂ ಸ್ವಲ್ಪ ಮಟ್ಟಿಗೆ ನೀಗಲಿದೆ ಎಂದು ಹೇಳುತ್ತಾರೆ ಕೆರೆ ಸಂಜೀವಿನಿ ಯೋಜನೆಗೆ ಸಂಬಂ ಧಿಸಿದ ಅಧಿಕಾರಿಗಳು.

ಪ್ರವಾಸಿ ಸ್ಥಳ: ಹೂಳೆತ್ತುವ ಕಾಮಗಾರಿ ಪೂರ್ಣಗೊಂಡ ನಂತರ  ಭೀಷ್ಮ ಕೆರೆ ಯನ್ನು ಸಾಂಸ್ಕೃತಿಕ ಮತ್ತು ಪ್ರವಾಸಿ ಸ್ಥಳ ವನ್ನಾಗಿ ಅಭಿವೃದ್ಧಿಪಡಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ₹ 8.5 ಲಕ್ಷ ಅನುದಾನ ಬಿಡುಗಡೆಯಾಗಿದೆ.

ಕೆರೆಯ ಆವರಣದಲ್ಲಿ ಉಪಾಹಾರ ಮಂದಿರ, ವಾಹನ ನಿಲುಗಡೆ ಸೌಲಭ್ಯ ಒದಗಿಸುವ ಕುರಿತು ಜಿಲ್ಲಾಧಿಕಾರಿಗಳು ಹಾಗೂ ನಗರ ಸಭೆ ಅಧಿಕಾರಿಗಳು ಚಿಂತಿಸುತ್ತಿದ್ದಾರೆ. ಸಂಗೀತ ಕಾರಂಜಿ, ತೂಗು ಸೇತುವೆ ನಿರ್ಮಾಣ ಸೇರಿದಂತೆ ಕೆರೆಯ ಸೌಂದರ್ಯ ವರ್ಧನೆಗೆ ಕ್ರಮ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ.

ಮೈಸೂರಿನ ಕೆಆರ್‌ಎಸ್‌ ಬೃಂದಾ ವನ ಮಾದರಿಯಲ್ಲಿಯೇ ಭೀಷ್ಮಕೆರೆ ಅಂಗಳದಲ್ಲಿ ಬೃಂದಾವನ ನಿರ್ಮಿಸಿ, ಬೋಟಿಂಗ್‌, ಕಾರಂಜಿ ಹಾಗೂ ಇತರೆ ಸೌಲಭ್ಯ ಕಲ್ಪಿಸಬೇಕು. ಮಾನಸಿಕ ಒತ್ತಡ ಹೆಚ್ಚು ಇರುವುದರಿಂದ ಜನರು ಇಂತಹ ಸ್ಥಳಗಳಿಗೆ ಭೇಟಿ ನೀಡಲು ಅಪೇಕ್ಷಿಸು ತ್ತಾರೆ ಎನ್ನುವುದು ಗದುಗಿನ ತೋಂಟ ದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಅವರ ಸಲಹೆ.

***

2.40 ಲಕ್ಷ ಘನ ಮೀಟರ್ ಹೂಳು ಹೊರಕ್ಕೆ

ಜಿಲ್ಲೆಯಲ್ಲಿ ಕೆರೆ ಸಂಜೀವಿನಿ ಯೋಜನೆಯಡಿ ಮೊದಲ ಹಂತದಲ್ಲಿ ₹ 2.5 ಕೋಟಿ ಅನುದಾನದಲ್ಲಿ 144 ಕಾಮಗಾರಿಗಳ ಪೈಕಿ 132 ಕಾಮ ಗಾರಿಗಳನ್ನು ಪೂರ್ಣಗೊಳಿ ಸಲಾಗಿದ್ದು, ₹ 1.92 ಕೋಟಿ  ಅನುದಾನ ಬಳಸಿಕೊಳ್ಳಲಾಗಿದೆ. ಇದರಡಿ ಇದು ವರೆಗೆ 2.40 ಲಕ್ಷ ಘನ ಮೀಟರ್ ಕೆರೆ ಹೂಳನ್ನು ಹೊರತೆಗೆಯಲಾಗಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯ್ತಿ  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚೌವ್ಹಾಣ.

ಎರಡನೆಯ ಹಂತದಲ್ಲಿ ₹ 3.35 ಕೋಟಿ ಅನುದಾನದಲ್ಲಿ 214  ಕಾಮ ಗಾರಿಗಳ ಗುರಿ ನಿಗದಿಪಡಿಸಲಾಗಿದೆ. ಇದರಲ್ಲಿ ಈಗಾಗಲೇ 139 ಕಾಮ ಗಾರಿ ಗಳನ್ನು ಪೂರ್ಣಗೊಳಿಸಲಾ ಗಿದೆ. ₹ 1.92 ಕೋಟಿ ವೆಚ್ಚ ಮಾಡ ಲಾಗಿದೆ. 2.63 ಲಕ್ಷ ಘನ ಮೀಟರ್ ಕೆರೆ ಹೂಳು ಹೊರತೆಗೆಯಲಾಗಿದೆ ಎನ್ನುತ್ತಾರೆ ಅವರು.

**

ಹೂಳೆತ್ತುವ ಕಾಮಗಾರಿ ಪೂರ್ಣಗೊಂಡ ನಂತರ ಭೀಷ್ಮ ಕೆರೆಯನ್ನು ಸಾಂಸ್ಕೃತಿಕ ಮತ್ತು ಪ್ರವಾಸಿ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲಾಗುವುದು.

-ಎಚ್‌.ಕೆ.ಪಾಟೀಲ
ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.