ADVERTISEMENT

‘ರೈತರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿ’

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2017, 8:57 IST
Last Updated 18 ಡಿಸೆಂಬರ್ 2017, 8:57 IST

ನರಗುಂದ: ‘ಮಹದಾಯಿ ಯೋಜನೆ ಅನುಷ್ಠಾನಕ್ಕೆ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು. ಪಕ್ಷಭೇದ ಮರೆತು ರೈತರ ಹಿತ ಕಾಯಬೇಕು. ರೈತರ ಆಶೋತ್ತರಗಳಿಗೆ ಸ್ಪಂದಿಸದ ಸರ್ಕಾರಗಳು ಆಡಳಿತ ನಡೆಸಲು ಅಯೋಗ್ಯವಾಗಿವೆ’ ಎಂದು ರೈತ ಸೇನೆ ಮುಖಂಡ ಶಂಕ್ರಗೌಡ ಪಾಟೀಲ ಹೇಳಿದರು ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 886ನೇ ದಿನವಾದ ಭಾನುವಾರ ಅವರು ಮಾತನಾಡಿದರು.

‘ರೈತರ ವಿವಿಧ ಬೇಡಿಕೆಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಪಂದಿಸಬೇಕು. ಬಿಜೆಪಿ ಪಕ್ಷವು ರೈತ ವಿರೋಧಿಯಾಗಿದ್ದು, ಕೊಟ್ಟ ಮಾತಿಗೆ ತಪ್ಪಿದೆ. ಕಾಂಗ್ರೆಸ್‌ ಸಹಿತ ಸರಿಯಾಗಿ ಚಿಂತನೆ ಮಾಡದೇ ಕೇಂದ್ರದ ಮೇಲೆ ಕೈ ಚೆಲ್ಲಿ ಕುಳಿತಿದೆ. ಇದು ಸರಿಯಲ್ಲ, ಚುನಾವಣೆ ಬಂದಾಗ ಮಾತ್ರ ಪಕ್ಷಗಳು ರೈತರಿಗೆ ಭರವಸೆಗಳನ್ನು ಮೋಸ ಮಾಡುತ್ತಿವೆ. ಇನ್ನು ಮುಂದೆ ಈ ರೀತಿ ನಡೆಯದು. ಕಾಂಗ್ರೆಸ್‌ ಹಾಗೂ ಬಿಜೆಪಿ ಯಾತ್ರೆಗಳ ಹೆಸರಲ್ಲಿ ಪ್ರಜೆಗಳ ಹಣ ಪೋಲು ಮಾಡುತ್ತಾ ಹೊರಟಿವೆ.

ರಾಜಕೀಯ ಪಕ್ಷಗಳು ನಮ್ಮ ಮತ ಪಡೆಯಲು ಪರಿವರ್ತನೆ ಯಾತ್ರೆ ಮಾಡುತ್ತಿವೆ. ಆದರೆ, ರೈತರು ಒಗ್ಗಟ್ಟಾಗಿ ನಡೆಸುತ್ತಿರುವ ಹೋರಾಟಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಡಿ.23ರಂದು ಬೆಂಗಳೂರಿನಲ್ಲಿ ಬಿಜೆಪಿ ಕಚೇರಿ ಎದುರು ನಡೆಯಲಿರುವ ಪ್ರತಿಭಟನೆಯಲ್ಲಿ ರೈತರು ಶಕ್ತಿ ಪ್ರದರ್ಶಿಸಲಿದ್ದಾರೆ. ಮಹದಾಯಿ ಹೋರಾಟದ ಶಕ್ತಿಯನ್ನು ರಾಜಧಾನಿಯಲ್ಲಿ ಸರ್ಕಾರ ನೋಡಬೇಕು. ಕೇಂದ್ರಕ್ಕೆ ಹೊಸ ಸಂದೇಶ ರವಾನಿಸಬೇಕು’ ಎಂದರು.

ADVERTISEMENT

‘ಬಿ.ಎಸ್‌.ಯಡಿಯೂರಪ್ಪನವರು ಹುಸಿ ಭರವಸೆ ನೀಡಿ ರೈತರಿಗೆ ಮೋಸ ಮಾಡಿದ್ದಾರೆ. ರೈತರ ಹಿತ ಕಾಯದ ನಾಯಕರು ರಾಜಕೀಯ ಮಾಡಲು ಯೋಗ್ಯರಲ್ಲ’ ಎಂದು ಮಹದಾಯಿ ಹೋರಾಟ ಸಮಿತಿ ಉಪಾಧ್ಯಕ್ಷ ರಮೇಶ ನಾಯ್ಕರ ಕಿಡಿಕಾರಿದರು. ಧರಣಿಯಲ್ಲಿ ಎ.ಪಿ.ಪಾಟೀಲ, ವೆಂಕಪ್ಪ ಹುಜರತ್ತಿ, ಚನ್ನಪ್ಪಗೌಡ ಪಾಟೀಲ, ವಿರುಪಾಕ್ಷಿ ಹುಲಜೋಗಿ, ವೀರಣ್ಣ ಸೊಪ್ಪಿನ, ಹನಮಂತ ಪಡೆಸೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.