ADVERTISEMENT

‘ಶರಣರ ತತ್ವ, ಆದರ್ಶ ಇಂದಿಗೂ ಪ್ರಸ್ತುತ’

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 10:39 IST
Last Updated 16 ಏಪ್ರಿಲ್ 2017, 10:39 IST

ಲಕ್ಕುಂಡಿ (ಗದಗ ತಾ.): ಶರಣರ ತತ್ವಾದರ್ಶ ಹಾಗೂ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಶರಣರ ಉತ್ತಮ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಲ್ಲಮಪ್ರಭು ದೇವರ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.ಗ್ರಾಮದ ಅಲ್ಲಮಪ್ರಭು ದೇವರ ಮಠದಲ್ಲಿ ಮೌನಯೋಗಿ ಬಸವರಾಜೇಂದ್ರ ಸ್ವಾಮೀಜಿಯ ಪಂಚಮ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ನಡೆದ ಹಾಲುಮತದ ಕುರುಬ ಗೊಲ್ಲಾಳೇಶ್ವರ ಪುರಾಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಜಂಜಾಟದ ಬದುಕಿಗೆ ಧಾರ್ಮಿಕ ತತ್ವ, ಬೋಧನೆಗಳು ಅವಶ್ಯವಾಗಿವೆ. ಮಠ, ಮಂದಿರಗಳಲ್ಲಿ ನಡೆಯುವ ಪುರಾಣ, ಪ್ರಚನ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ಬದುಕನ್ನು ಹಸನು ಮಾಡಿಕೊಳ್ಳಬೇಕು ಎಂದರು.ಮಹಾತ್ಮರ ಜೀವನದ ಘಟನೆಗಳನ್ನು ಪುರಾಣ, ಪ್ರವಚನದ ಮೂಲಕ ಇಂದಿನ ಯುವಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕು. ಹಂಪಿಯ ಹರೀಶ್ವರ ಕವಿ ರಚಿಸಿದ ಹಾಲುಮತದ ಕುರುಬ ಗೋಲ್ಲಾಳೇಶ್ವರ ಮಹಾಪುರಾಣ ಅರ್ಥಪೂರ್ಣವಾದ ಗ್ರಂಥವಾಗಿದೆ. ಗ್ರಂಥದಲ್ಲಿ ಪ್ರತಿಯೊಂದು ಸನ್ನಿವೇಶ ಮತ್ತು ಮಹಾತ್ಮರ ಪವಾಡಗಳನ್ನು ಉಲ್ಲೇಖ ಮಾಡಲಾಗಿದೆ ಎಂದು ಪ್ರವಚನಕಾರ ಕೊಟ್ರಯ್ಯಶಾಸ್ತ್ರಿ ನರಗುಂದಮಠ ತಿಳಿಸಿದರು.

ವೀರೇಶ್ವರ ಪುಣ್ಯಾಶ್ರಮದ ಅಜ್ಜಯ್ಯ ಗವಾಯಿ, ಹರ್ಲಾಪೂರ ಗ್ರಾಮದ ಶರಣಪ್ಪ ಯಾಡಿಯಾಪೂರ ಸಂಗೀತ ಕಾರ್ಯಕ್ರಮ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯ ಗಂಗಾಧರ ಬಟ್ಟೂರ, ರವಿ ಕಟ್ಟಿಗ್ಗಾರ, ಅಶೋಕ ಬೂದಿಹಾಳ, ಎಂ.ವಿ.ಗಡ್ಡಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.