ADVERTISEMENT

ಸದಸ್ಯರಿಂದ ಹೆಸ್ಕಾಂ ಅಧಿಕಾರಿಗಳ ತರಾಟೆ

ಅಸಮರ್ಪಕ ವಿದ್ಯುತ್‌ ಪೂರೈಕೆ, ನಿರ್ವಹಣೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2014, 7:16 IST
Last Updated 31 ಅಕ್ಟೋಬರ್ 2014, 7:16 IST

ನರಗುಂದ: ‘ತಾಲ್ಲೂಕಿನಲ್ಲಿ ವಿದ್ಯುತ್‌ ತಂತಿಗಳು ಜೋತು ಬಿದ್ದಿವೆ. ಅನೇಕ ಅನಾಹುತಗಳಿಗೆ ಕಾರಣವಾಗುತ್ತಿದೆ. ಸಾವುಗಳು ಸಂಭವಿಸುತ್ತಿವೆ. ಇದರ ಬಗ್ಗೆ ಏಕೆ ಗಮನಹರಿಸುತ್ತಿಲ್ಲ, ತಾವೇನು ಮಾಡುತ್ತೀದ್ದೀರಿ?’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಎಸ್‌. ಪಾಟೀಲ ಅವರು ಬುಧ­ವಾರ ಪಟ್ಟಣದ ತಾ.ಪಂ. ಸಭಾಭ­ವ­ನದಲ್ಲಿ ನಡೆದ ಸಭೆಯಲ್ಲಿ ಹೆಸ್ಕಾಂ ಅಧಿಕಾ­ರಿಗಳನ್ನು ತರಾಟೆಗೆ ತೆಗೆದುಕೊಂಡರು.

ಹುಣಸಿಕಟ್ಟಿ ಗ್ರಾಮದಲ್ಲಿ ವಿದ್ಯುತ್‌ ತಂತಿ ಹರಿದು ಬಿದ್ದ ಪರಿಣಾಮ ವ್ಯಕ್ತಿಯ ಸಾವು ಸಂಭವಿಸಿತು.  ಹೀಗೆ ಅನೇಕ ಅವ­ಘಡ­ಗಳು ಉಂಟಾಗುತ್ತಿವೆ. ಆದ್ದರಿಂದ ಕೂಡಲೇ ವಿದ್ಯುತ್‌ ತಂತಿಗಳನ್ನು ಸರಿಪ­ಸಬೇಕು. ಇಲ್ಲವಾದರೆ ನಿಮ್ಮ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚಿಸಬೇಕಾಗುತ್ತದೆ   ಎಂದು ಸಭೆ ತಾಕೀತು ಮಾಡಿತು.  ಹುಣಸಿಕ­ಟ್ಟಿಗೆ ಸಂಬಂಧಿಸಿದಂತೆ ಗ್ರಾ.ಪಂ.  ಅಧಿಕಾರಿಗಳು ಹಾಗೂ ಹೆಸ್ಕಾಂ ಅಧಿಕಾರಿಗಳು ಸಮನ್ವಯತೆ­ಯಿಂದ ವಿದ್ಯುತ್‌ ವ್ಯವಸ್ಥೆ ಸರಿಪಡಿಸು­ವಂತೆ ಸಭೆ ಸೂಚಿಸಿತು.

ತಾಲ್ಲೂಕಿನಲ್ಲಿ ಸರಿಯಾಗಿ ವಿದ್ಯುತ್‌ ಪೂರೈಕೆಯಾಗು­ತ್ತಿಲ್ಲ ಎಂದು ತಾ.ಪಂ. ಉಪಾಧ್ಯಕ್ಷೆ ಪಾರವ್ವ ಹಡಗಲಿ ಆಕ್ಷೇಪಿಸಿದರು. ನಿರಂತರ ಜ್ಯೋತಿ ಯೋಜನೆ ಬನಹಟ್ಟಿ­ಯಲ್ಲಿ ಅನುಷ್ಠಾನಗೊಳ್ಳದೇ ಇರುವು­ದಕ್ಕೆ ತಾ.ಪಂ. ಸದಸ್ಯರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಹೆಸ್ಕಾಂ ಸಿಬ್ಬಂದಿಗೆ ಸೂಚಿಸಿದರು.

ತಾಲ್ಲೂಕಿನಲ್ಲಿ ಆರೋಗ್ಯ ಇಲಾಖೆ ಇದ್ದು ಇಲ್ಲದಂತಾಗಿದೆ. ತಾಲ್ಲೂಕು ವೈದ್ಯಾಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಅಲ್ಲದೆ ಸಭೆ ತಾವು ಬರದೇ ಆರೋಗ್ಯ ಸಹಾಯಕರನ್ನು ಕಳುಹಿಸಿದ್ದಾರೆ ಎಂದು ಆರೋಗ್ಯ ಇಲಾಖೆ ವಿರುದ್ಧ  ಜಿ.ಪಂ. ಸದಸ್ಯ ಎಂ.ಎಸ್.ಪಾಟೀಲ  ಅಸಮಾಧಾನ ವ್ಯಕ್ತಪಡಿಸಿದರು. 

ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಆಧುನಿಕ ಸೌಕರ್ಯಗಳಿಲ್ಲ. ಹೆರಿಗೆಗೆ ಬಂದರೆ ಬೇರೆ ಆಸ್ಪತ್ರೆಗೆ ಹೋಗಲು ಏಕೆ ಹೇಳುತ್ತಾರೆ. ಈ ಕುರಿತು ಶಿಸ್ತು ಕ್ರಮಕೈಗೊಳ್ಳಬೇಕು ಎಂದು ತಾ.ಪಂ. ಸದಸ್ಯ ಜಿ.ಎಸ್‌.ಆದೆಪ್ಪನವರ ಆಗ್ರಹಿಸಿದರು.

ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸರ್ಕಾರಿ ಯೋಜನೆಗಳ ಬಗ್ಗೆ ಸರಿಯಾಗಿ ಪ್ರಚಾರ ಮಾಡುವಂತೆ  ತಾ.ಪಂ. ಸದಸ್ಯರು ಸೂಚಿಸಿದರು.  ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಪ್ರಗತಿ ವಿವರ ನೀಡಿದರು. ಆದರೆ ಕೆಲವು ಇಲಾಖೆಯ ಮುಖ್ಯಸ್ಥರು ಬಾರದೇ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಇದಕ್ಕೆ ತಾ.ಪಂ. ಸದಸ್ಯರು ಆಕ್ಷೇಪಿಸಿದರು. 

ಜಿ.ಪಂ. ಅಧ್ಯಕ್ಷೆ ಶಾಂತಾ ದಂಡಿನ, ತಾ.ಪಂ. ಅಧ್ಯಕ್ಷೆ ಹೆಬ್ಬಳ್ಳೆವ್ವ ದೊಡಮನಿ, ತಾ.ಪಂ. ಅಧಿಕಾರಿ ಎ.ಜಿ. ಪಾಟೀಲ ತಾ.ಪಂ. ಸದಸ್ಯರಾದ ವಿ.ಎನ್‌. ಕೊಳ್ಳಿಯವರ, ಬಿ.ಎಸ್. ಪಾಟೀಲ, ಶಾಂತವ್ವ ಯಲಿಗಾರ, ಭೀಮವ್ವ ಶಿರಹಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.