ADVERTISEMENT

‘ಮೃದು, ಸರಳ, ಸುಂದರ ಸಾಂಗತ್ಯ’

ಕಸಾಪ ಜಿಲ್ಲಾ ಘಟಕದ ವತಿಯಿಂದ ಸಾಹಿತ್ಯ ಸಂಜೆ ಉಪನ್ಯಾಸ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 30 ಜೂನ್ 2015, 9:46 IST
Last Updated 30 ಜೂನ್ 2015, 9:46 IST

ಗದಗ: ಸಾಂಗತ್ಯ ಅಚ್ಚಗನ್ನಡದ ಛಂದೋಬಂಧವಾಗಿದೆ. ಅದರ ಶೈಲಿ ಸುಲಲಿತ, ಸುಕೋಮಲ, ಮೃದು­ಮಧುರ, ಸರಳ ಹಾಗೂ ಸುಂದರವಾಗಿದೆ ಎಂದು ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ  ಡಾ.ರಾಜೇಂದ್ರ ಗಡಾದ  ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕ ಆಯೋಜಿಸಿದ್ದ ಸಾಹಿತ್ಯ ಸಂಜೆಯಲ್ಲಿ ಕನ್ನಡದಲ್ಲಿ ಸಾಂಗತ್ಯ ಸಾಹಿತ್ಯ ಕುರಿತು ಮಾತನಾಡಿದ ಅವರು, ಸಾಂಗತ್ಯ ಇತರೆ ಪ್ರಕಾರಗಳಿಗಿಂತ ಅಂದರೆ ಚಂಪೂ, ರಗಳೆ, ಷಟ್ಪದಿ, ತ್ರಿಪದಿ, ಶತಕಗಳಿಗಿಂತ ತಡವಾಗಿ ಬಂದರೂ ಕನ್ನಡ ಕವಿಗಳಿಗೆ ಅತ್ಯಂತ ಪ್ರಿಯವಾದ ಮಟ್ಟಾಯಿತು.ಆದರೆ ಸಾಂಗತ್ಯವು ಯಾವುದರಿಂದ ಹುಟ್ಟಿದ ಮಟ್ಟು, ಸ್ವತಂತ್ರವೇ, ಪರತಂತ್ರವೇ ಎನ್ನುವ ಬಗ್ಗೆ ವಿದ್ವಾಂಸರಲ್ಲಿ ಅನೇಕ ಅಭಿಪ್ರಾಯಗಳಿವೆ. ಗೀತಿಕೆಯ ಎರಡು ಪಾದ ಅಥವಾ ಪಿರಿಯಕ್ಕರದ ಎರಡು ಪಾದದ ರೂಪಾಂತರದಿಂದ ಸಾಂಗತ್ಯ ಸಿದ್ಧವಾಯಿತು. ಕ್ರಿ.ಶ.1410ರಲ್ಲಿ ದೇಪರಾಜನೇ ಮೊದಲ ಸಾಂಗತ್ಯಕಾರನೆಂದೂ ಅವರ ಸೊಬಗಿನ ಸೋನೆ ಪ್ರಥಮ ಸಾಂಗತ್ಯ ಕೃತಿಯೆಂದು ಬಹುಜನ ವಿದ್ವಾಂಸರು ಗುರುತಿಸಿದ್ದಾರೆ ಎಂದು ತಿಳಿಸಿದರು. 

16-17ನೇ ಶತಮಾನ ಸಾಂಗತ್ಯದ ಸುವರ್ಣ ಯುಗವಾಗಿದೆ. 19ನೇ ಶತಮಾನದ ಮುಂದೆ ಕ್ರಮೇಣ ಸಾಹಿತ್ಯದ ಬೇರೆ ಪ್ರಕಾರಗಳಾಗಿ ಅಡಿಯಿಡುತ್ತದೆ.198 ಕವಿಗಳಿಂದ 242ಕ್ಕೂ ಹೆಚ್ಚು ಸಾಂಗತ್ಯ ಕೃತಿಗಳು ಕನ್ನಡದಲ್ಲಿ ಬಂದಿವೆ. ದೇಪರಾಜನ ಸೊಬಗಿನಸೇನೆ, ಶಿಶುಮಾಯಣನ ತ್ರಿಪುರ ದಹನ ಸಾಂಗತ್ಯ, ನಿಜಗುಣ ಶಿವಯೋಗಿಗಳ ಪರಮಾಣು ಭೋದೆ, ನಂಜುಂಡನ ಭೈರವೇಶ್ವರ ಕಾವ್ಯ, ಲಕ್ಷ್ಮಯ್ಯನ ಮದನ ಮೋಹನಿ, ರತ್ನಾಕರ ವರ್ಣಿಯ ಭರತೇಶ ವೈಭವ, ಕನಕದಾಸರ ಮೋಹನ ತರಂಗಿಣಿ, ಹೊನ್ನಮ್ಮನ ಹದಿಬದೆಯ ಧರ್ಮ, ವಿರುಪರಾಜನ ತ್ರಿಭುವ ತಿಲಕ, ಸಾಳ್ವನ ವೈದ್ಯ ಸಾಂಗತ್ಯ ,ಅಳಿಯಲಿಂಗರಾಜನ ಗಿರಿಜಾಕಲ್ಯಾಣ, ಶೃಂಗಾರಮ್ಮನ ಪದ್ಮಿನಿ ಕಲ್ಯಾಣ, ಹೆಳವನಕಟ್ಟೆ ಗಿರಿಯಮ್ಮನ ಚಂದ್ರಹಾಸ ಕಥೆ ಮೊದಲಾದವು ಸಾಂಗತ್ಯದ ಪ್ರಮುಖ ಕೃತಿಯಾಗಿವೆ ಎಂದರು. ಕವಿ  ಬಿ.ಎಂ.ಯಲ್ಲಪ್ಪ ಅವರು ಓ ಕವಿತೆ, ಹಕ್ಕಿಪಲ್ಲವಿ ಸ್ವರಚಿತ ಕವನ  ವಾಚಿಸಿ  ರಂಜಿಸಿದರು.

ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಕೆ.ವಿ.ಕುಂದಗೋಳ, ಆರ್.ಎಲ್.­ಖ್ಯಾಡದ, ಶಂಕ್ರಪ್ಪ ತೊಂಡಿ­ಹಾಳ,  ಆರ್.ಡಿ.ಕಪ್ಪಲಿ, ಪಿ.ಟಿ.ನಾರಾಯಣ­ಪೂರ, ಆರ್.ಎಚ್.ಬಿ.­ರಾಘವೇಂದ್ರ, ಎಚ್.ಚಂದ್ರಪ್ಪ,ಗೌರಮ್ಮ ಹುಬ್ಬಳ್ಳಿ, ಬಿ.ಎಸ್.ಹಿಂಡಿ, ರತ್ನಕ್ಕ ಪಾಟೀಲ, ಮಲ್ಲಿಕಾಜರ್ುನ ಪೂಜಾರ, ಬಸವರಾಜ ಗಣಪ್ಪನವರ, ಶರಣಪ್ಪ ಹೊಸಂಗಡಿ, ನಿಜಲಿಂಗಪ್ಪ ಕರಿಬಿಷ್ಠಿ, ಆರ್.ಜಿ.­ಹಾಸಲಕರ, ಎಂ.ಜಿ.ಹಾಸಲಕರ, ಬಿರಾದಾರ.­ರಾ.ಚ, ಜಿ.ಎಂ.ಯಾನ­ಮಶೇಟ್, ಶಂಕ್ರಪ್ಪ ಬಡಿಗೇರ, ಅಶೋಕ ಸುತಾರ, ಹ.ತು.ಸಂಜೀವಸ್ವಾಮಿ, ವಿಶ್ವನಾಥ ಕಮ್ಮಾರ,ಶಂಕ್ರಪ್ಪ ಕರಿಬಿಷ್ಟಿ, ಶಂಕ್ರಪ್ಪ ತೊಂಡಿಹಾಳ, ಹೊ.ಬ.­ತೋಟದ, ಹೋ.ಬ.ತೋಟದ ಪಾಲ್ಗೊಂಡಿದ್ದರು.

ಎಚ್.ಬಿ.ತೋಟದ ಪ್ರಾರ್ಥಿಸಿದರೆ, ಗದಗ ತಾಲ್ಲೂಕು ಕಸಾಪ ಅಧ್ಯಕ್ಷ ಪ್ರೊ.ಕಿಶೋರಬಾಬು ನಾಗರಕಟ್ಟಿ  ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಡಾ.ಪ್ರಭು ಗಂಜಿಹಾಳ ವಂದಿಸಿದರು. ಗೌರವ ಕೋಶಾಧ್ಯಕ್ಷ ಮಲ್ಲೇಶ್ ಡಿ.ಎಚ್ ನಿರೂಪಿಸಿದರು.

ಸಾಂಗತ್ಯ ತ್ರಿಪದಿಯ ಎರಡನೇ ಚರಣವನ್ನು ಆವೃತ್ತಿ ಮಾಡಿ ಹಾಡುವ ರೂಢಿಯು ಸಾಂಗತ್ಯದ ರೂಪ ನಿರ್ಮಾಣಕ್ಕೆ ದಾರಿ ಮಾಡಿತು
ಡಾ.ಶಿವಪ್ಪ ಕುರಿ,
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.