ADVERTISEMENT

‘40 ದಿನಕ್ಕೊಮ್ಮೆ ನೀರುಕೊಟ್ಟಿದ್ದೇ ಸಾಧನೆ’

​ಪ್ರಜಾವಾಣಿ ವಾರ್ತೆ
Published 24 ಮೇ 2017, 9:06 IST
Last Updated 24 ಮೇ 2017, 9:06 IST

ಲಕ್ಷ್ಮೇಶ್ವರ: ‘ಸಮೀಪದ ಗದಗ ನಗರಕ್ಕೆ 40 ದಿನಗಳಿಗೊಮ್ಮೆ ಕುಡಿಯುವ ನೀರು ಕೊಟ್ಟಿದ್ದೇ ಸರ್ಕಾರದ ದೊಡ್ಡ ಸಾಧನೆ’ ಎಂದು ರಾಜ್ಯ ಬಿಜೆಪಿ ಘಟಕದ      ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಟೀಕಿಸಿದರು.

ಅವರು ಮಂಗಳವಾರ ಗ್ರಾಮದ ಲಕ್ಷ್ಮಣ ಮಲ್ಲಣ್ಣನವರ ಮನೆಯಲ್ಲಿ ಉಪಾಹಾರ ಸೇವಿಸಿದರು. ಬಳಿಕ ದಲಿತ ಕೇರಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
‘ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಭಾಗ್ಯಲಕ್ಷ್ಮೀ ಯೋಜನೆ ಈಗ ಕುಂಟುತ್ತಾ ಸಾಗಿದೆ. ರೈತರ ಅನುಕೂಲಕ್ಕಾಗಿ ಅವರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ನೀಡಿದ್ದೆ. ಎರಡು ಬಾರಿ ರೈತರ ಸಾಲ ಮನ್ನಾ ಮಾಡಿದ್ದೇನೆ.

ಈಗ ಅನ್ನಭಾಗ್ಯ ಯೋಜನೆ ಬಗ್ಗೆ ಸಿದ್ಧರಾಮಯ್ಯನವರು ಬೊಗಳೆ ಬಿಡುತ್ತಿದ್ದಾರೆ. ಆಹಾರ ಇಲಾಖೆಯಲ್ಲೂ ಭಾರಿ ಪ್ರಮಾಣದ ಅವ್ಯವಹಾರ ನಡೆದಿದೆ.ಇದನ್ನು ಪತ್ತೆ ಹಚ್ಚಲು ಹೋಗಿದ್ದ ಐಎಎಸ್‌ ಅಧಿಕಾರಿ ಮನೀಶ್‌ ತಿವಾರಿಯವರು ಸಂಶ ಯಾಸ್ಪದವಾಗಿ ಸಾವಿಗೀಡಾಗಿದ್ದಾರೆ. ರಾಜ್ಯ ಸರ್ಕಾರಕ್ಕೆ ಜನತೆಗೆ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ. ಕಾರಣ ಬೇಜವಾಬ್ದಾರಿ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೊಗೆಯಬೇಕಾಗಿದೆ’ ಎಂದರು.

ADVERTISEMENT

‘ಸಿದ್ಧರಾಮಯ್ಯನವರ ಸರ್ಕಾರದಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳಿಗೆ ಉಳಿಗಾಲ ಇಲ್ಲ’ ಎಂದರು.ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಸಂಸದ ಶಿವಕುಮಾರ ಉದಾಸಿಯವರ ಪ್ರಯತ್ನದಿಂದ ಗದಗ–ಲಕ್ಷ್ಮೇಶ್ವರ–ಯಲವಗಿ ರೈಲು ಮಾರ್ಗಕ್ಕೆ ಕೇಂದ್ರ ಹಸಿರು ನಿಶಾನೆ ತೋರಿ, ಅನುದಾನ ಬಿಡುಗಡೆ ಮಾಡಿದೆ’ ಎಂದರು.

ಭಾವಿ ಶಾಸಕ: ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತು ಪ್ರಾರಂಭಿಸಿದ ಯಡಿಯೂರಪ್ಪ ಅವರು, ಮಾಜಿ ಶಾಸಕ ರಾಮಣ್ಣ ಲಮಾಣಿ ಅವರನ್ನು ಭಾವಿ ಶಾಸಕ ಎಂದು ಸಂಬೋಧಿಸಿದಾಗ ನೆರೆದಿದ್ದ ಸಾವಿರಾರು ಅಭಿಮಾನಿಗಳು ಕರತಾಡನ ಮಾಡಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.