ADVERTISEMENT

ಕೃಷಿ ಹೊಂಡ ಬಳಸಿ ಬೆಳೆ ಉಳಿಸಲು ಯತ್ನ

ಡಾ.ಮಲಿಕ್ಲಾರ್ಜುನ ಕುಂಬಾರ
Published 4 ಜನವರಿ 2018, 9:40 IST
Last Updated 4 ಜನವರಿ 2018, 9:40 IST
ಬೆಳೆಗಳಿಗೆ ನೀರು ಹಾಯಿಸಲು ಕೃಷಿ ಹೊಂಡಕ್ಕೆ ಆಯಿಲ್ ಪಂಪ್ ಅಳವಡಿಸುತ್ತಿರುವ ರೈತರು
ಬೆಳೆಗಳಿಗೆ ನೀರು ಹಾಯಿಸಲು ಕೃಷಿ ಹೊಂಡಕ್ಕೆ ಆಯಿಲ್ ಪಂಪ್ ಅಳವಡಿಸುತ್ತಿರುವ ರೈತರು   

ಗಜೇಂದ್ರಗಡ: ಹೋಬಳಿ ವ್ಯಾಪ್ತಿಯಲ್ಲಿ ತೇವಾಂಶ ಕೊರತೆಯಿಂದ ಒಣಗುತ್ತಿರುವ ಜೋಳ ಮತ್ತು ಕಡಲೆ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.

ಸುತ್ತಲಿನ ರಾಂಪುರ, ರಾಜೂರು, ಕೊಡಗನೂರು, ವೀರಾಪುರ, ಸೂಡಿ, ಹಿರೇಕೊಪ್ಪ ಸೇರಿ ಹಲವು ಹಳ್ಳಿಗಳ ಎರೆ ಭೂಮಿಯಲ್ಲಿ ಅಂದಾಜು 2 ಸಾವಿರ ಎಕರೆ ಜೋಳ ಹಾಗೂ 600 ಎಕರೆ ಕಡಲೆ ಬಿತ್ತನೆ ಮಾಡಿದ್ದು, ತೇವಾಂಶದ ಕೊರತೆಯಿಂದ ಬೆಳೆ ಒಣಗುತ್ತಿವೆ. ಇದರಿಂದ ಕಂಗಾಲಾಗಿರುವ ರೈತರು ತಮ್ಮ ಹೊಲಗಳಲ್ಲಿ ನಿರ್ಮಿಸಿಕೊಂಡಿರುವ ಕೃಷಿ ಹೊಂಡಗಳ ಮೊರೆ ಹೋಗಿದ್ದಾರೆ.

ಕೃಷಿಹೊಂಡಗಳಲ್ಲಿ ಈಗಾಗಲೇ ಸಂಗ್ರಹವಾಗಿರುವ ನೀರನ್ನು ಅಥವಾ ಟ್ಯಾಂಕರ್ ಮೂಲಕ ತುಂಬಿಸಿದ ನೀರನ್ನು ಸರ್ಕಾರ ಸಬ್ಸಿಡಿ ದರದಲ್ಲಿ ವಿತರಿಸಿರುವ ಆಯಿಲ್ ಇಂಜಿನ್‌ಗಳ ಸಹಾಯದಿಂದ ಮೇಲೆತ್ತಿ ಕಾರಂಜಿಗಳ ಮೂಲಕ ಬೆಳೆಗಳಿಗೆ ನೀರುಣಿಸಲಾಗುತ್ತಿದೆ.

ADVERTISEMENT

‘ಈ ಭಾಗದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ತೇವಾಂಶದ ಕೊರತೆ ಕಾಡುತ್ತಿದೆ. ಇದರಿಂದ ಬೆಳೆ ಒಣಗುತ್ತಿವೆ. ಇಂಥ ತುರ್ತು ಸಂದರ್ಭದಲ್ಲಿ ಕೆಲ ರೈತರು ಹೊಲಗಳಲ್ಲಿ ನಿರ್ಮಿಸಿರುವ ಕೃಷಿ ಹೊಂಡಗಳಲ್ಲಿ ಸಂಗ್ರಹವಾಗಿರುವ ನೀರನ್ನು ಬಳಸಿಕೊಂಡು ಬೆಳೆ ಉಳಿಸಿಕೊಳ್ಳುತ್ತಿರುವುದು ಸಂತಸ ತಂದಿದೆ’ ಎನ್ನುತ್ತಾರೆ ಸಹಾಯಕ ಕೃಷಿ ಅಧಿಕಾರಿ ಕೆ.ಎಚ್.ಗಂಗೂರ.

‘ಕೃಷಿಹೊಂಡ, ನೀರು, ಆಯಿಲ್ ಇಂಜಿನ್ ಇರುವವರೆನೋ ನೀರು ಹಾಸ್ತಾರ. ಆದ್ರ ಏನೂ ಇಲ್ದಾವ್ರು ಏನು ಮಾಡೊದು? ನಮ್ದು ಇರೋದೇ ಎರಡು ಎಕರೆ ಹೊಲ. ಅದರಲ್ಲಿ ಕೃಷಿಹೊಂಡ ನಿರ್ಮಿಸಿ ಬೆಳೆ ತೆಗೆಯುವುದು ಸಾಧ್ಯವಿಲ್ಲ. ದೇವರ ಮೇಲೆ ಭಾರ ಹಾಕಿವಿ ಬಂದಷ್ಟ ಬರಲಿ’ ಎನ್ನುತ್ತಾರೆ ಕೊಡಗಾನೂರು ಗ್ರಾಮದ ರೈತ ಬಸವರಾಜ ನಡಕಟ್ಟಿನ.

‘ಹಿಂದಿನಿಂದ ರೈತರು ಬೆಳೆದ ಫಸಲಿಗೆ ಸರಿಯಾದ ಬೆಲೆ ಕೊಡ್ಲಾರ್ದ ಸರ್ಕಾರಗಳು ಮೋಸ ಮಾಡಿಕೊಂಡ ಬಂದಾವು. ಈಗ ಸರಿಯಾಗಿ ಮಳಿ ಆಗ್ದ ದೇವ್ರು ನಮಗ ಮೋಸಾ ಮಡಕತ್ತಾನ ಅನ್ಸಾಕತೈತಿ. ಕಡ್ಲಿ, ಜೋಳ ಒಣಗಬಾರ್ದು ಅಂತ ನಮ್ಮ ಹೊಲದಾಗಿನ ಕೃಷಿ ಹೊಂಡದಾಗಿನ ನೀರ ಆಯಿಲ್ ಇಂಜಿನ್ ಬಳಸಿ ಹಾಸಾಕತ್ತೇನಿ’ ಎನ್ನುತ್ತಾರೆ ಕೊಡಗಾನೂರು ಗ್ರಾಮದ ರೈತ ಪ್ರಭುಲಿಂಗಯ್ಯ ಹಿರೇಮಠ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.