ADVERTISEMENT

ಬಿಸಿಲು,ದೂಳು; ತಪ್ಪದ ಗೋಳು

ಹುಚ್ಚೇಶ್ವರ ಅಣ್ಣಿಗೇರಿ
Published 19 ಫೆಬ್ರುವರಿ 2018, 9:27 IST
Last Updated 19 ಫೆಬ್ರುವರಿ 2018, 9:27 IST
ಗದುಗಿನಲ್ಲಿ ಬಿಸಿಲಿನ ತಾಪ ಹೆಚ್ಚಿದ್ದು, ಮಡಕೆ ಮಾರಾಟ ಹೆಚ್ಚಿದೆ.
ಗದುಗಿನಲ್ಲಿ ಬಿಸಿಲಿನ ತಾಪ ಹೆಚ್ಚಿದ್ದು, ಮಡಕೆ ಮಾರಾಟ ಹೆಚ್ಚಿದೆ.   

ಗದಗ: ನಗರದಲ್ಲಿ ಬಿಸಿಲಿನ ತಾಪ ದಿನದಿಂದ ದಿನ ಏರುತ್ತಿದ್ದು, ಕಳೆದ ಎರಡು ವಾರಗಳಿಂದ ಗರಿಷ್ಠ 34 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಇನ್ನೊಂದೆಡೆ ನಗರದ ಹಲವು ಬಡಾವಣೆಗಳಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ವಿಪರೀತ ದೂಳಿನಿಂದಾಗಿ ವಾಹನ ಸವಾರರು ಹಾಗೂ ಪಾದಚಾರಿಗಳು ಪ್ರತಿನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಸದ್ಯದ ಪರಿಸ್ಥಿತಿ ನೋಡಿದರೆ ಈ ಬಾರಿಯೂ ಬಿಸಿಲಿನ ತಾಪ ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯುವ ಸಾಧ್ಯತೆ ಸಾಧ್ಯತೆ ಇದೆ ಎನ್ನುತ್ತವೆ ಹವಾಮಾನ ಇಲಾಖೆ ಮೂಲಗಳು.

ಒಂದೆಡೆ ಬಿಸಿಲಿನ ತಾಪ ಹೆಚ್ಚುತ್ತಿದ್ದರೆ ಇನ್ನೊಂದೆಡೆ ನಗರದಲ್ಲಿ ದೂಳಿನ ಸಮಸ್ಯೆ ವಿಪರೀತ ಹೆಚ್ಚಿದೆ. ರಸ್ತೆಯಲ್ಲಿ ಸಾಗಿದರೆ ದೂಳಿನ ಮಜ್ಜನವಾಗುತ್ತಿದ್ದು, ವಾಹನ ಸವಾರರು ಕಣ್ಣಿಗೆ ಕನ್ನಡಕ, ಹೆಲ್ಮೆಟ್‌ ಹಾಕಿಕೊಂಡು ಓಡಾಡಬೇಕಾದ ಪರಿಸ್ಥಿತಿ ಇದೆ. ಹಳೆ ಮತ್ತು ಹೊಸ ಬಸ್‌ ನಿಲ್ದಾಣ, ಜನತಾ ಬಜಾರ್‌, ಹುಯಿಲಗೋಳ ನಾರಾಯಣ ವೃತ್ತ, ರೋಟರಿ ಸರ್ಕಲ್‌, ಗಾಂಧಿ ವೃತ್ತ, ಭೂಮರಡ್ಡಿ ವೃತ್ತ, ಹಳೆ ಡಿಸಿ ಕಚೇರಿ, ಮುಳಗುಂದ ನಾಕಾ ಸೇರಿದಂತೆ ನಗರದಲ್ಲಿ ಎಲ್ಲೇ ಸುತ್ತಾಡಿದರೂ ಮುಖಕ್ಕೆ ದೂಳು ಅಡರುತ್ತದೆ. ಆಟೊ ಸವಾರರು, ಸೈಕಲ್ ಮೇಲೆ ಶಾಲೆಗಳಿಗೆ ಹೋಗುವ ಪುಟ್ಟ ಮಕ್ಕಳು, ರಸ್ತೆಯ ಬದಿಯ ವ್ಯಾಪಾರಿಗಳಿಗೂ ದೂಳು ಸಾಕಾಗಿದೆ.

ADVERTISEMENT

ಬಿಸಿಲು, ದೂಳಿನಿಂದಾಗಿ ಆರೋಗ್ಯದಲ್ಲೂ ಏರುಪೇರು ಉಂಟಾಗುತ್ತಿದ್ದು, ಆಸ್ಪತ್ರೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ದೂಳಿನಿಂದಾಗಿ ಬಹುತೇಕರು ಕಣ್ಣು, ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಿದ್ದಾರೆ. ಮೂಗಿನಿಂದ ನೀರು ಸೋರುವುದು, ಮುಖದಲ್ಲಿ ಗುಳ್ಳೆಗಳಾಗುವುದು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದೆ.

ರಾಜ್ಯದಲ್ಲೇ ವೇಗದಲ್ಲಿ ಗಾಳಿ ಬೀಸುವ ಜಿಲ್ಲೆ ಗದಗ. ಗಾಳಿ ವೇಗ ಹೆಚ್ಚಿರುವುದರಿಂದ ವಾತಾವರಣದಲ್ಲಿ ದೂಳಿನ ಕಣಗಳು ಹೆಚ್ಚಿರುತ್ತದೆ. ಕಣ್ಣು ತೆರೆದರೆ ಮರಳು ಮಿಶ್ರಿತ ಮಣ್ಣು ಕಣ್ಣಿಗೆ ನುಗ್ಗುತ್ತದೆ. ಹೀಗಾಗಿ ವಾಹನ ಸವಾರರು ಕಣ್ಣಿಗೆ ಕನ್ನಡಕ ಹಾಕಿಕೊಂಡು, ಮೂಗು-ಬಾಯಿಗೆ ಕರವಸ್ತ್ರ ಕಟ್ಟಿಕೊಂಡು ಸಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಪ್ರಾಣಿ, ಪಕ್ಷಿಗಳೂ ಕಂಟಕ: ಬಿಸಿಲಿನ ಆರ್ಭಟವೂ ಜೋರಾದಂತೆ ಪ್ರಾಣಿ, ಪಕ್ಷಿಗಳು ದಾಹ ತೀರಿಸಿಕೊಳ್ಳಲು ಪರದಾಡುತ್ತಿವೆ. ಉರಿಯುವ ಬಿಸಿಲಿನ ನಡುವೆ ನೀರು, ಆಹಾರ ಅರಸಿ ಬರುವ ಪಕ್ಷಿಗಳು ನಿತ್ರಾಣಗೊಂಡು ಕೆಳಗೆ ಬೀಳುತ್ತಿವೆ.ನಗರದಲ್ಲಿ ಜನರು ಅಲ್ಲಲ್ಲಿ ಮನೆಯ ತಾರಸಿಯ ಮೇಲೆ, ಮರಗಿಡಗಳಲ್ಲಿ ಪಕ್ಷಿಗಳಿಗಾಗಿ ಒಂದಿಷ್ಟು ಕಾಳು, ನೀರಿನ ಪಾತ್ರೆ ಇಡಲು ಪ್ರಾರಂಭಿಸಿದ್ದಾರೆ. ನಗರದ ವಿವಿಧ ಬಡಾವಣೆಗಳಲ್ಲಿರುವ ಪಕ್ಷಿ ಪ್ರೇಮಿಗಳು ತಮ್ಮ ಮನೆಯ ಕಿಟಕಿ, ಅಂಗಳದಲ್ಲಿರುವ ಗಿಡಗಳಿಗೆ ಮಡಕೆ, ಚಿಕ್ಕ ಬಕೇಟ್‌ಗಳನ್ನು ಕಟ್ಟಿ ಅದರಲ್ಲಿ ಕಾಳು, ನೀರು ಹಾಕುತ್ತಿರುವ ದೃಶ್ಯವೂ ಕಂಡುಬರುತ್ತಿದೆ.

* * 

ಈ ಬಾರಿ ಫೆಬ್ರುವರಿಯಲ್ಲೇ ಬಿಸಿಲಿನ ರುದ್ರ ನರ್ತನ ಪ್ರಾರಂಭವಾಗಿದೆ. ಮಾರ್ಚ್‌, ಏಪ್ರಿಲ್‌ನಲ್ಲಿ ಬಾಣಲೆಯಿಂದ ಬೆಂಕಿಗೆ ಬಿದ್ದ ಪರಿಸ್ಥಿತಿ ಆಗಬಹುದು. –ಸವಿತಾ ಪೂಜಾರ, ಗೃಹಣಿ, ಗದಗ ನಿವಾಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.