ADVERTISEMENT

‘ಶರಣರಂತೆ ಬಾಳಿದ ಹರ್ಡೇಕರ ಮಂಜಪ್ಪ’

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2018, 10:38 IST
Last Updated 22 ಫೆಬ್ರುವರಿ 2018, 10:38 IST
ಗದುಗಿನ ತೋಂಟದಾರ್ಯ ಮಠದಲ್ಲಿ ನಡದ ಶಿವಾನುಭವ ಕಾರ್ಯಕ್ರಮದಲ್ಲಿ ಚೇತನಾ ಪಾಟೀಲ ವಚನ ಸಂಗೀತ ಪ್ರಸ್ತುತಪಡಿಸಿದರು. ಸಿದ್ಧಲಿಂಗ ಸ್ವಾಮೀಜಿ, ಡಾ. ಸಿದ್ಧಣ್ಣ ಉತ್ನಾಳ, ಡಾ. ಶ್ರೀನಿವಾಸ ಕುಲಕರ್ಣಿ, ಶಂಕರಗೌಡ ಪಾಟೀಲ, ಶಾರದಾ ಗೊರವರ ಇದ್ದಾರೆ.
ಗದುಗಿನ ತೋಂಟದಾರ್ಯ ಮಠದಲ್ಲಿ ನಡದ ಶಿವಾನುಭವ ಕಾರ್ಯಕ್ರಮದಲ್ಲಿ ಚೇತನಾ ಪಾಟೀಲ ವಚನ ಸಂಗೀತ ಪ್ರಸ್ತುತಪಡಿಸಿದರು. ಸಿದ್ಧಲಿಂಗ ಸ್ವಾಮೀಜಿ, ಡಾ. ಸಿದ್ಧಣ್ಣ ಉತ್ನಾಳ, ಡಾ. ಶ್ರೀನಿವಾಸ ಕುಲಕರ್ಣಿ, ಶಂಕರಗೌಡ ಪಾಟೀಲ, ಶಾರದಾ ಗೊರವರ ಇದ್ದಾರೆ.   

ಗದಗ: ‘ಬಸವಾದಿ ಶರಣರ ಚಿಂತನೆಗಳನ್ನು ಮತ್ತು ಗಾಂಧೀಜಿ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು, ಶರಣರಂತೆ ಬದುಕಿದ ವ್ಯಕ್ತಿ ಹರ್ಡೇಕರ ಮಂಜಪ್ಪನವರು’ ಎಂದು ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಸ್ಮರಿಸಿದರು. ಮಠದಲ್ಲಿ ನಡೆದ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಬಸವ ಜಯಂತಿಯನ್ನು ಸಾರ್ವಜನಿಕವಾಗಿ ಆಚರಿಸುವ ಮೂಲಕ ಮಂಜಪ್ಪನವರು ಬಸವಾದಿ ಶರಣರ ತತ್ವಗಳನ್ನು ಮನೆ ಮನಗಳಿಗೆ ತಲುಪಿಸುವ ಕಾರ್ಯ ಮಾಡಿದರು. ಬ್ರಹ್ಮಚರ್ಯ ಪಾಲಿಸಿ, ತಮ್ಮ ಇಡೀ ಬದುಕನ್ನೇ ಸ್ವಾತಂತ್ರ್ಯ ಚಳವಳಿ, ಶರಣ ಚಿಂತನೆಗಳ ಪ್ರಸಾರ, ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸುವ ಸಲುವಾಗಿ ಮುಡುಪಾಗಿಟ್ಟರು’ ಎಂದರು.

‘ಮಂಜಪ್ಪನವರು ಗಾಂಧೀಜಿಯವರಿಗೆ ಬಸವಣ್ಣನವರ ವಿಚಾರಗಳನ್ನು ಪರಿಚಯಿಸುವ ಕಾರ್ಯ ಮಾಡಿದರು. ಶರಣರ ಸಂದೇಶಗಳನ್ನು ಪ್ರಚುರಪಡಿಸುವ ಹಿನ್ನೆಲೆಯಲ್ಲಿ ಪತ್ರಿಕೆಗಳನ್ನು ಪ್ರಾರಂಭಿಸಿದರು. ಪುಸ್ತಕಗಳನ್ನು ರಚಿಸಿದರು. ಶರಣರಂತೆ ಬಾಳಿದರು’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಶರಣ ಸಂಸ್ಕೃತಿ ಮತ್ತು ಹರ್ಡೇಕರ ಮಂಜಪ್ಪನವರ ಕುರಿತು ಸಾಹಿತಿ ಡಾ. ಸಿದ್ಧಣ್ಣ ಉತ್ನಾಳ ಅವರು ಮಾತನಾಡಿದರು. ‘ಪ್ರಾರಂಭದಲ್ಲಿ, ಏಳು ರೂಪಾಯಿ ವೇತನದಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದರು. ಮಕ್ಕಳಿಗಾಗಿ ಚಿಕ್ಕ ಚಿಕ್ಕ ಪದ್ಯಗಳನ್ನು ರಚಿಸಿ, ಅವರಿಂದ ಹಾಡಿಸಿ ತಾವೂ ನಲಿದರು. ಸಾತಂತ್ರ್ಯ ಚಳವಳಿ ಪ್ರಖರಗೊಳ್ಳುತ್ತಿದ್ದ ಕಾಲದಲ್ಲಿ ತಿಲಕರ ಕೇಸರಿ ಪತ್ರಿಕೆಯಿಂದ ಪ್ರಭಾವಿತರಾದರು. ‘ಧರ್ನುಧಾರಿ’ ಎಂಬ ಸಾಪ್ತಾಹಿಕ ಆರಂಭಿಸಿದರು. 1921ರಲ್ಲಿ ಗಾಂಧೀಜಿ ಬಂಧನವಾದಾಗ ಧಾರವಾಡ, ವಿಜಯಪುರ ಜಿಲ್ಲೆಗಳಲ್ಲಿ ಸಂಚರಿಸಿ, ಸತ್ಯ, ಅಹಿಂಸೆ, ಸ್ವದೇಶಿ ಮತ್ತು ಅಸ್ಪೃಶ್ಯತೆ ನಿವಾರಣೆಗಾಗಿ ಜಾಗೃತಿ ಮೂಡಿಸಿದರು’ ಎಂದರು.

‘ಕಾಯಕ ಸಿದ್ಧಾಂತ, ವ್ಯಕ್ತಿತ್ವ ನಿರ್ಮಾಣ ಮತ್ತು ರಾಷ್ಟ್ರಪ್ರೇಮದ ವಿಚಾರಗಳನ್ನು ವಿದ್ಯಾರ್ಥಿಗಳಲ್ಲಿ ನೆಲೆಗೊಳಿಸುವ ನಿಟ್ಟಿನಲ್ಲಿ ಮಂಜಪ್ಪನವರು ಆಲಮಟ್ಟಿಯಲ್ಲಿ ಆಶ್ರಮ ಶಾಲೆ ಆರಂಭಿಸಿದರು. ಪ್ರಾರಂಭದಲ್ಲಿ ಆರ್ಯ ಸಮಾಜದ ಚಿಂತನೆಗಳತ್ತ ಒಲವಿದ್ದ ಅವರು, ಬಸವಣ್ಣನವರ ವಚನಗಳನ್ನು ಅಧ್ಯಯನ ಮಾಡಿದ ನಂತರ ಬಸವ ಸಮಾಜ ಕಟ್ಟುವ ಕನಸು ಕಂಡರು. ಬಸವ ಜಯಂತಿ ಮೂಲಕ ಬಸವ ಚಿಂತನೆಗಳನ್ನು ಜನಮಾನಸದಲ್ಲಿ ಬಿತ್ತಿದರು’ ಎಂದು ಡಾ. ಶ್ರೀನಿವಾಸ ಕುಲಕರ್ಣಿ ಅಭಿಪ್ರಾಯಪಟ್ಟರು.

ಚೇತನಾ ಪಾಟೀಲ ಅವರಿಂದ ವಚನ ಸಂಗೀತ ನಡೆಯಿತು. ಸಾವಿತ್ರಿ ಗಾಳಿ ಧರ್ಮಗ್ರಂಥ ಪಠಣ, ವಿಜಯಾ ಗಾಳಿ ವಚನ ಚಿಂತನೆ ನೆರವೇರಿಸಿದರು. ವೀರೇಶ ನಂದಿಹಾಳ ಹಾಗೂ ಗೊರವರ ಪರಿವಾರ ಭಕ್ತಿ ಸೇವೆಯನ್ನು ವಹಿಸಿಕೊಂಡಿದ್ದರು.

ಶಿವಾನುಭವ ಸಮಿತಿ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಸ್ವಾಗತಿಸಿದರು. ಮಂಜುಳಾ ಹಾಸಲಕರ ನಿರೂಪಿಸಿದರು. ಪ್ರೊ. ರಮೇಶ ಕಲ್ಲನಗೌಡರ ಪರಿಚಯಿಸಿದರು.

ಶಂಕರಗೌಡ ಪಾಟೀಲ, ಶಾರದಾ ಬಸವರಾಜ ಗೊರವರ, ವಿರೂಪಾಕ್ಷಪ್ಪ ಬಳ್ಳೊಳ್ಳಿ, ದಾನಯ್ಯ ಗಣಾಚಾರಿ, ಅಕ್ಕಮಹಾದೇವಿ ಚೆಟ್ಟಿ, ಚೇತನ ಅಂಗಡಿ, ಸಿದ್ಧಲಿಂಗೇಶ ಲಕ್ಕುಂಡಿ, ಶಿವನಗೌಡ ಗೌಡರ ಇದ್ದರು.

* * 

ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರು, ಬರಹಗಾರರು, ಪತ್ರಕರ್ತರೂ ಆಗಿದ್ದ ಹರ್ಡೇಕರ ಮಂಜಪ್ಪನವರದು ಆದರ್ಶ ಶರಣ ವ್ಯಕ್ತಿತ್ವ
ಡಾ. ಸಿದ್ದಣ್ಣ ಉತ್ನಾಳ
ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.