ADVERTISEMENT

ಡಂಬಳ | ಬತ್ತಿದ ಕೆರೆ: ಅಂತರ್ಜಲ ಕುಸಿಯುವ ಆತಂಕ

ಭೀಕರ ಬರಗಾಲದಿಂದಾಗಿ ಭದ್ರಾ ನದಿಯಲ್ಲೂ ನೀರಿಲ್ಲ

ಲಕ್ಷ್ಮಣ ಎಚ್.ದೊಡ್ಡಮನಿ
Published 4 ಏಪ್ರಿಲ್ 2024, 6:11 IST
Last Updated 4 ಏಪ್ರಿಲ್ 2024, 6:11 IST
ಡಂಬಳ ಕೆರೆಯಲ್ಲಿ ನೀರು ಬತ್ತಿರುವುದು
ಡಂಬಳ ಕೆರೆಯಲ್ಲಿ ನೀರು ಬತ್ತಿರುವುದು   

ಡಂಬಳ: ಇಲ್ಲಿನ ಐತಿಹಾಸಿಕ ಗೋಣ ಸಮುದ್ರ ಕೆರೆಯಲ್ಲಿ (ವಿಕ್ಟೋರಿಯಾ ಮಹಾರಾಣಿ ಕೆರೆ) ಕಳೆದ ಆರೇಳು ವರ್ಷಗಳಿಂದ ನೀರು ಭರ್ತಿಯಾಗಿ ಇರುತ್ತಿತ್ತು. ಆದರೆ ಕಳೆದ ವರ್ಷ ಮಳೆ ಕೈಕೊಟ್ಟ ಪರಿಣಾಮವಾಗಿ ಕೆರೆ ಬತ್ತಿದೆ.

ವರ್ಷಪೂರ್ತಿ ಜಲರಾಶಿಯಿಂದ ಕಂಗೊಳಿಸುತ್ತಿದ್ದ ಕೆರೆ ಈಗ ನೀರಿಲ್ಲದೇ ಆಟದ ಮೈದಾನದಂತೆ ಆಗಿದೆ. ಕೆರೆ ಬತ್ತಿರುವುದರಿಂದ ಸುತ್ತಮುತ್ತಲಿನ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆ ಆಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಅಂತರ್ಜಲದ ಪ್ರಮಾಣ ಮತ್ತಷ್ಟು ಕುಸಿಯಬಹುದು ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. 

ಸಿಂಗಟಾಲೂರ ಏತನೀರಾವರಿ ಯೋಜನೆಯ ಅಡಿ ಡಂಬಳ ಕೆರೆಗೆ ಬೃಹತ್ ಕಾಲುವೆ ಮೂಲಕ  ನೀರು ತುಂಬಿಸಲಾಗಿತ್ತು. ಈ ಭಾಗದಲ್ಲಿ ಮಳೆ ಕೈಕೊಟ್ಟರೂ ಶಿವಮೊಗ್ಗ ಜಿಲ್ಲೆಯ ಭದ್ರಾ ನದಿಯ ಮೂಲಕ ತುಂಗಭದ್ರಾ ನದಿಗೆ ನೀರು ಹರಿಸಿ ಅಲ್ಲಿಂದ ಕಾಲುವೆಯ ಮೂಲಕ ಡಂಬಳ ಕೆರೆಗೆ ನೀರು ಹರಿಸಲಾಗುತ್ತಿತ್ತು. ಆದರೆ ಈ ಸಲ ಭೀಕರ ಬರಗಾಲದಿಂದ ಭದ್ರಾ ನದಿಯಲ್ಲಿ ಅಲ್ಪಪ್ರಮಾಣದ ನೀರು ಮಾತ್ರ ಇರುವುದರಿಂದ ಈ ಭಾಗದ ಜಂತಲಿಶಿರೂರ, ಹಿರೇವಡ್ಡಟ್ಟಿ, ಪೇಠಾಲೂರ, ಬಸಾಪುರ, ಮುರಡಿ ಕೆರೆಗಳಲ್ಲಿ ನೀರು ಇಲ್ಲದಂತೆ ಆಗಿದೆ.

ADVERTISEMENT

‘ಕೆರೆಯಲ್ಲಿ ನೀರು ಭರ್ತಿ ಇದ್ದಾಗ 2–3 ಕಿ.ಮೀ ವ್ಯಾಪ್ತಿಯಲ್ಲಿಯ ಕೊಳವೆಬಾವಿಗಳಲ್ಲಿ ಅಂತರ್ಜಲ ಉತ್ತಮವಾಗಿತ್ತು. ಪ್ರಸ್ತುತ ಮಳೆ ಕೈಕೊಟ್ಟ ಪರಿಣಾಮವಾಗಿ ಕೊಳವೆಬಾವಿಗಳೂ ಬತ್ತುವ ಆತಂಕ ಎದುರಾಗಿದೆ. ಕುಡಿಯುವ ನೀರಿನ ಪೂರೈಕೆಯಲ್ಲಿಯೂ ಸ್ವಲ್ಪ ಅಡಚಣೆ ಆಗುವ ಸಾಧ್ಯತೆ ಇದೆ. ಕೆರೆ ಭರ್ತಿಯಾಗಿದ್ದರಿಂದ ಜನ ಜಾನುವಾರುಗಳಿಗೆ ಅಂದಾಜು 3,000 ಎಕರೆ ಪ್ರದೇಶದ ರೈತರ ಬೆಳೆಗಳಿಗೆ ನೀರು ವರದಾನವಾಗಿತ್ತು. ಆದರೆ ಈಗ ಜಾನುವಾರುಗಳು ಕುಡಿಯುವ ನೀರಿಗೆ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ವರ್ಷಗಳಿಂದ ನಮಗೆ ಕುಡಿಯುವ ನೀರಿನ ಅಭಾವ ಆಗಿರಲಿಲ್ಲ. ಈಗ ಕೆರೆಯಲ್ಲಿ ನೀರು ಬತ್ತಿದ ಪರಿಣಾಮವಾಗಿ ಜನ ಜಾನುವಾರುಗಳಿಗೂ ನೀರು ಸಿಗದಿರುವ ಆತಂಕ ಎದುರಾಗಿದೆ’ ಎನ್ನುತ್ತಾರೆ ಡಂಬಳದ ಮುಖಂಡ ವಿರುಪಾಕ್ಷಪ್ಪ ಯಲಿಗಾರ ಮತ್ತು ಬಸವರಾಜ ಪೂಜಾರ.

‘ಕೆರೆ ಭರ್ತಿಯಾದರೆ ನಮ್ಮ ಗ್ರಾಮದಲ್ಲಿ ಬರಗಾಲ ಇರುವುದಿಲ್ಲ. ಜನರು ಉದ್ಯೋಗ ಅರಸಿ ಗುಳೆ ಹೋಗುವುದಿಲ್ಲ. ನಮ್ಮಲ್ಲೇ ಬಹುತೇಕ ಕೃಷಿ ಜಮೀನುಗಳು ಕೆರೆ ನೀರಾವರಿ ವ್ಯಾಪ್ತಿಗೆ ಬರುತ್ತವೆ. ಹೈನುಗಾರಿಕೆ ಹೆಚ್ಚಳವಾಗಿದೆ. ಬೇಸಿಗೆ ಸಮಯದಲ್ಲಿ ನಮ್ಮ ಗ್ರಾಮ ಪಂಚಾಯ್ತಿಯು ಕೊಳವೆಬಾವಿ ಮೂಲಕ ಪ್ರತಿಯೊಂದು ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಲು ಅಗತ್ಯ ಕ್ರಮ ತೆಗೆದುಕೊಂಡಿದೆ. ನೀರು ಸರಬರಾಜು ಮಾಡಲು ಅಗತ್ಯ ಸಿಬ್ಬಂದಿ ಇದ್ದಾರೆ. ಬೇಸಿಗೆಯಲ್ಲಿ ಜನರು ನೀರು ವ್ಯರ್ಥವಾಗದಂತೆ ಬಳಕೆ ಮಾಡಬೇಕು. ಸಾರ್ವಜನಿಕರು ಗ್ರಾಮ ಪಂಚಾಯ್ತಿಯೊಂದಿಗೆ ಸಹಕಾರ ನೀಡಬೇಕು’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಿವಲೀಲಾ ದೇವಪ್ಪ ಬಂಡಿಹಾಳ ತಿಳಿಸಿದರು.

ಡಂಬಳ ಕೆರೆಯಲ್ಲಿ ನೀರು ಬತ್ತಿರುವುದು
‘ಬರಗಾಲ ಎದುರಿಸಲು ಸಿದ್ಧ’
‘ಬೇಸಿಗೆ ಸಮಯದಲ್ಲಿ ಜಾನುವಾರುಗಳಿಗೆ ಮೇವು ಹಾಗೂ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಅಗತ್ಯ ಕ್ರಮ ತಗೆದುಕೊಳ್ಳಲಾಗಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ. ಬರಗಾಲ ಎದುರಿಸಲು ತಾಲ್ಲೂಕ ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ’ ಎಂದು ತಹಶೀಲ್ದಾರ್‌ ಧನಂಜಯ ಮಾಲಗಿತ್ತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.