ADVERTISEMENT

ಅಕ್ರಮ ಗುಡಿಸಲು ತೆರವಿಗೆ ಒತ್ತಾಯಿಸಿ ಪ್ರತಿಭಟನೆ

ಕೊಲ್ಲಹಳ್ಳಿ ಗ್ರಾಮ ಠಾಣಾ ಜಾಗವನ್ನು ಸಾರ್ವಜನಿಕರ ಉಪಯೋಗಕ್ಕೆ ಮೀಸಲಿಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2017, 7:21 IST
Last Updated 7 ಮಾರ್ಚ್ 2017, 7:21 IST
ಸಕಲೇಶಪುರ: ತಾಲ್ಲೂಕಿನ ಮಳಲಿ ಗ್ರಾ.ಪಂ. ವ್ಯಾಪ್ತಿಯ ಕೊಲ್ಲಹಳ್ಳಿ ಗ್ರಾಮ ಠಾಣಾ ಜಾಗದಲ್ಲಿನ ಅಕ್ರಮ ಶೆಡ್‌ಗಳನ್ನು ತೆರವುಗೊಳಿಸಿ ಆ ಸ್ಥಳವನ್ನು ಸಾರ್ವಜನಿಕರ ಉಪಯೋಗಕ್ಕೆ ಮೀಸಲಿಡಬೇಕು ಎಂದು ಆಗ್ರಹಿಸಿ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.
 
ಮಾಜಿ ಶಾಸಕ ಬಿ.ಆರ್‌.ಗುರುದೇವ್‌ ನೇತೃತ್ವದಲ್ಲಿ ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳ ಕಾರ್ಯಕರ್ತರು  ಮೆರವಣಿಗೆ ನಡೆಸಿ, ಕೊಲ್ಲಹಳ್ಳಿ ಗ್ರಾಮದ ಸ.ನಂ. 112ರ ಗ್ರಾಮ ಠಾಣಾ ಜಾಗದಲ್ಲಿ ಸಾರ್ವಜನಿಕರಿಗೆ ಉಪಯೋಗ ಆಗುವಂತಹ ಶಾಲೆ, ಕಾಲೇಜು, ಕ್ರೀಡಾಂಗಣ ನಿರ್ಮಾಣ ಮಾಡುವ ಉದ್ದೇಶಕ್ಕೆ ಕಾಯ್ದಿರಿಸಿ ಗ್ರಾಮ ಪಂಚಾಯಿತಿ ಆಡಳಿತ ನಿರ್ಣಯ ಕೈಗೊಂಡಿದೆ. ಇದು ನಿಜಕ್ಕೂ ಸ್ವಾಗತಾರ್ಹ.

ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಿದ ಬೆಲೆಬಾಳುವ ಸರ್ಕಾರಿ ಸ್ವತ್ತನ್ನು ಲಪಟಾಯಿಸಲು ಕೆಲ ಕಿಡಿಗೇಡಿಗಳೇ ಮುಂದೆ ನಿಂತು ಈಚೆಗೆ ಶೆಡ್‌ಗಳನ್ನು ನಿರ್ಮಾಣ ಮಾಡಿಸಿದ್ದಾರೆ ಎಂದು ಹೇಳಿದರು.
 
ಹಲವು ವರ್ಷಗಳಿಂದ ವಾಸ ಇದ್ದವರನ್ನು ಮಳಲಿ ಗ್ರಾಮ ಪಂಚಾಯಿತಿ ಆಡಳಿತ ತೆರವುಗೊಳಿಸಲು ಮುಂದಾಗಿದೆ ಎಂದು ಕೆಲವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ವಿಚಾರಣೆ ನಡೆಸಿರುವ ನ್ಯಾಯಾಲಯ ಗ್ರಾ.ಪಂ. ಸಾರ್ವಜನಿಕ ಉಪಯೋಗಕ್ಕಾಗಿ ಕಾಯ್ದಿರಿಸಿರುವ ಜಾಗಕ್ಕೆ ಅತಿಕ್ರಮವಾಗಿ ಪ್ರವೇಶ ಮಾಡಿ ನಿರ್ಮಿಸಿರುವ ಶೆಡ್‌ಗಳನ್ನು ತೆರವುಗೊಳಿಸುವಂತೆ 23–01–2017ರಂದು ಆದೇಶ ಮಾಡಿದೆ.

ಆದೇಶ ನೀಡಿ ಒಂದೂವರೆ ತಿಂಗಳು ಕಳೆದರೂ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಕ್ರಮ ಶೆಡ್‌ಗಳನ್ನು ತೆರವುಗೊಳಿಸದೇ  ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿವೆ ಎಂದು ಬಿ.ಆರ್‌.ಗುರುದೇವ್‌ ಆರೋಪಿಸಿದರು. 
 
ಜಿ.ಪಂ. ಸದಸ್ಯ ಸುಪ್ರದೀಪ್ತ ಯಜಮಾನ್‌ ಮಾತನಾಡಿ, ವಸತಿ, ನಿವೇಶನ ಇಲ್ಲದೆ ಇರುವ ಫಲಾನುಭವಿಗಳಿಗೆ ನಿವೇಶನ ನೀಡಬೇಕು ಎಂಬ ಬೇಡಿಕೆಗೆ ತಮ್ಮ ಬೆಂಬಲ ಇದೆ. ಆದರೆ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕ್ರೀಡಾಂಗಣ, ಕಾಲೇಜು ನಿರ್ಮಾಣ ಆಗುವುದರಿಂದ ಜನರಿಗೆ ಅನುಕೂಲ ಆಗುತ್ತದೆ.

ಮಳಲಿ ಗ್ರಾ.ಪಂ. ವ್ಯಾಪ್ತಿಯ ಮಠಸಾಗರ ಹಾಗೂ ಆಲೇಬೇಲೂರು ಗ್ರಾಮಗಳಲ್ಲಿ ಸುಮಾರು 10 ಎಕರೆಗೂ ಹೆಚ್ಚು ಪ್ರದೇಶದಲ್ಲಿ ವಸತಿ ಹಾಗೂ ನಿವೇಶನ ರಹಿತರಿಗೆ ನಿವೇಶನ ನೀಡುವುದಕ್ಕೆ ಗ್ರಾ.ಪಂ. ಆಡಳಿತ ಮುಂದಾಗಿದೆ. ಆ ಜಾಗದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡುವುದಕ್ಕೆ ತಮ್ಮ ಬೆಂಬಲ ಕೂಡ ಇದೆ ಎಂದರು. 
 
ಎಪಿಎಂಸಿ ಸದಸ್ಯ ಕವನ್‌ಗೌಡ ಮಾತನಾಡಿ, ಕೊಲ್ಲಹಳ್ಳಿ ಗ್ರಾಮ ಠಾಣಾ ಜಾಗದಲ್ಲಿ ಮನೆ ಹಾಗೂ ನಿವೇಶನ ಇರುವಂತವರಿಂದ ಶೆಡ್‌ಗಳನ್ನು ಹಾಕಿಸಲಾಗಿದೆ. ಗ್ರಾ.ಪಂ. ಆಡಳಿತ ನ್ಯಾಯಾಲಯಕ್ಕೂ ಕೂಡ ದಾಖಲೆ ಸಮೇತ ಮಾಹಿತಿ ನೀಡಿದೆ.   ಇದಕ್ಕೆಲ್ಲ ಒಬ್ಬ ವ್ಯಕ್ತಿ ಕಾರಣ ಎಂಬುದನ್ನು ನ್ಯಾಯಾಲಯ ತನ್ನ  ಆದೇಶದಲ್ಲಿ  ಕೂಡ ಸ್ಪಷ್ಟವಾಗಿ ತಿಳಿಸಿದೆ. ಅಕ್ರಮ ಶೆಡ್‌ಗಳನ್ನು ತೆರವುಗೊಳಿಸುವುದಕ್ಕೆ ತಾಲ್ಲೂಕು ಆಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದರು.
 
ಎಪಿಎಂಸಿ ಸದಸ್ಯ ಬಾಗರಹಳ್ಳಿ ಪುಟ್ಟಸ್ವಾಮಿ, ಬಿಜೆಪಿ ಮುಖಂಡ ಹೆತ್ತೂರು ವಿಜಯ್‌ಕುಮಾರ್‌, ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.