ADVERTISEMENT

ಅಧಿಕಾರಿಗಳ ದಾಳಿ; ಪ್ಲಾಸ್ಟಿಕ್‌ ವಶ

​ಪ್ರಜಾವಾಣಿ ವಾರ್ತೆ
Published 21 ಜೂನ್ 2017, 9:22 IST
Last Updated 21 ಜೂನ್ 2017, 9:22 IST

ಬೇಲೂರು: ಪಟ್ಟಣದ ಗಾಣಿಗರ ಬೀದಿಯಲ್ಲಿನ ವೆಂಕಟೇಶ್ವರ್‌ ಪ್ರಿಂಟಿಂಗ್‌ ಪ್ರೆಸ್‌ ಮೇಲೆ ಮಂಗಳವಾರ ದಾಳಿ ನಡೆಸಿದ ಪುರಸಭಾ ಸಿಬ್ಬಂದಿ ಸಂಗ್ರಹಿಸಿಟ್ಟಿದ್ದ  ಸುಮಾರು ₹ 50 ಸಾವಿರಕ್ಕೂ ಹೆಚ್ಚು ಬೆಲೆಯ ನಿಷೇಧಿತ ಪ್ಲಾಸ್ಟಿಕ್‌ ಅನ್ನು ವಶಪಡಿಸಿಕೊಂಡರು.

ಅಂಗಡಿಯ ಉಗ್ರಾಣದಲ್ಲಿ ಪ್ಲಾಸ್ಟಿಕ್‌ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಮೇರೆಗೆ ಪುರಸಭೆ ಅಧ್ಯಕ್ಷೆ ಕೆ.ಎಸ್‌.ಉಮಾ (ಮುದ್ದಮ್ಮ) ಮತ್ತು ಮುಖ್ಯಾಧಿಕಾರಿ ಬಿ.ಸಿ.ಬಸವರಾಜು ನೇತೃತ್ವದಲ್ಲಿ ವೆಂಕಟೇಶ್ವರ್ ಪ್ರಿಂಟಿಂಗ್‌ ಪ್ರೆಸ್‌ ಮೇಲೆ ದಾಳಿ ನಡೆಸಲಾಯಿತು. ಪ್ಲಾಸ್ಟಿಕ್‌ ಲೋಟ, ತಟ್ಟೆ, ಥರ್ಮಾಕೋಲ್‌ ತಟ್ಟೆ, ಪ್ಲಾಸ್ಟಿಕ್‌ ದೊನ್ನೆ ಇನ್ನಿತರ ಪ್ಲಾಸ್ಟಿಕ್‌ ಸಾಮಗ್ರಿಗಳನ್ನು ವಶಪಡಿಸಿಕೊಂಡರು.

ಪ್ರೆಸ್‌ ಮಾಲೀಕ ರಘುನಂದನ್‌ ಪ್ಲಾಸ್ಟಿಕ್‌ ವಶಪಡಿಸಿಕೊಳ್ಳಲು ಅಡ್ಡಿ ಪಡಿಸಿದರಲ್ಲದೆ, ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು. ಇದರಿಂದ ಕೆರಳಿದ ಪುರಸಭೆ ಮುಖ್ಯಾಧಿಕಾರಿ ಬಿ.ಸಿ.ಬಸವರಾಜು, ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ, ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಸಿದರು.

ADVERTISEMENT

ರಘುನಂದನ್‌ಗೆ ಪುರಸಭೆ ಅಧಿಕಾರಿಗಳು ₹ 5 ಸಾವಿರ ದಂಡ ವಿಧಿಸಿ, ಪುನಾ ಪ್ಲಾಸ್ಟಿಕ್‌ ವಸ್ತುಗಳನ್ನು ಮಾರಾಟ ಮಾಡಿದರೆ ಕ್ರಿಮಿನಲ್‌ ಮೊಕದ್ದಮ್ಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದರು. ನಂತರ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ಲಾಸ್ಟಿಕ್‌ ವಶಪಡಿಸಿಕೊಂಡರು.

ದಂಡ ಎಚ್ಚರಿಕೆ: ಪುರಸಭೆ ಅಧ್ಯಕ್ಷೆ ಕೆ.ಎಸ್‌.ಉಮಾ (ಮುದ್ದಮ್ಮ), ‘ಬೇಲೂರು ಪಟ್ಟಣದಲ್ಲಿ ಪ್ಲಾಸ್ಟಿಕ್‌ ನಿಷೇಧಿಸಲಾಗಿದೆ. ಹಲವಾರು ಬಾರಿ ದಾಳಿ ಮಾಡಿ ವರ್ತಕರಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ. ಆದರೂ, ಪ್ಲಾಸ್ಟಿಕ್‌ ಬಳಕೆ ನಿಂತಿಲ್ಲ. ಪ್ಲಾಸ್ಟಿಕ್‌ ಬಳಕೆ ಮತ್ತು ಮಾರಾಟ  ಕಂಡುಬಂದರೆ ಅಂತಹವರಿಗೆ ₹ 5 ಸಾವಿರದಿಂದ ₹ 1 ಲಕ್ಷದವರೆಗೆ ದಂಡ ವಿಧಿಸಲಾಗುವುದು’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.