ADVERTISEMENT

ಅನುಕಂಪದ ಅಲೆಯ ಹುಡುಕಾಟ

ಬೇಲೂರು ಕ್ಷೇತ್ರ: ಕಾಂಗ್ರೆಸ್, ಜೆಡಿಎಸ್‌ ನಡುವೆ ಪೈಪೋಟಿ

ಕೆ.ಎಸ್.ಸುನಿಲ್
Published 7 ಮೇ 2018, 11:49 IST
Last Updated 7 ಮೇ 2018, 11:49 IST

ಹಾಸನ: ಅರೆ ಮಲೆನಾಡು ಹಾಗೂ ಬಯಲು ಸೀಮೆ ಪ್ರದೇಶ ಒಳಗೊಂಡಿರುವ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಅನುಕಂಪದ ಅಲೆಯ ಹುಡುಕಾಟ ನಡೆದಿದೆ.

ಬೇಲೂರಿನ ಮಾಜಿ ಶಾಸಕ ದಿವಂಗತ ವೈ.ಎನ್.ರುದ್ರೇಶ್ ಗೌಡರ ಸಾವಿನ ಅನುಕಂಪದ ಅಲೆಯ ಲಾಭ ಪಡೆಯಲು ಕಾಂಗ್ರೆಸ್, ಅವರ ಪತ್ನಿ ಎಂ.ಎನ್.ಕೀರ್ತನಾ ಅವರನ್ನು ಕಣಕ್ಕಿಳಿಸಿದೆ. ಜೆಡಿಎಸ್ ನಿಂದ ಲಿಂಗಾಯತ ಸಮುದಾಯದ ಕೆ.ಎಸ್.ಲಿಂಗೇಶ್ ಹಾಗೂ ಬಿಜೆಪಿಯಿಂದ ಒಕ್ಕಲಿಗ ಸಮುದಾಯದ ಉದ್ಯಮಿ ಎಚ್.ಕೆ.ಸುರೇಶ್ ಸ್ಪರ್ಧಿಸಿದ್ದಾರೆ.

ಕಳೆದ ಬಾರಿಯ ಸೋಲಿನ ಅನುಕಂಪ, ಜೆಡಿಎಸ್ ಕಾರ್ಯಕರ್ತರ ಪಡೆ, ಎಚ್.ಡಿ.ದೇವೇಗೌಡರ ನಾಮಬಲವನ್ನು ಲಿಂಗೇಶ್ ನಂಬಿಕೊಂಡಿದ್ದಾರೆ.

ADVERTISEMENT

ಕೀರ್ತನಾಗೆ ಪತಿಯ ನಿಧನದಿಂದ ಎದ್ದಿರುವ ಅನುಕಂಪದ ಅಲೆ ಮುನ್ನಡೆ ಒದಗಿಸಬಹುದು ಎನ್ನುವುದು ಕಾಂಗ್ರೆಸ್‌ ಲೆಕ್ಕಾಚಾರ.

ಮೇಲ್ನೋಟಕ್ಕೆ ಕಾಂಗ್ರೆಸ್‌, ಜೆಡಿಎಸ್‌ ನಡುವೆ ಹಣಾಹಣಿ ಕಂಡು ಬಂದಿದೆ. ಒಕ್ಕಲಿಗರ ಮತಗಳು ವಿಭಜನೆಯಾಗಿ, ವೀರಶೈವ ಲಿಂಗಾಯತರ ಮತಗಳನ್ನು ಲಿಂಗೇಶ್‌ ಪಡೆದರೆ ಜೆಡಿಎಸ್‌ಗೆ ಗೆಲುವಿನ ದಡ ಸೇರಿಸಬಹುದ ಎನ್ನುವ ನಿರೀಕ್ಷೆ ವರಿಷ್ಠರಲ್ಲಿದೆ.

ಯಗಚಿ, ವಾಟೆಹೊಳೆ ಜಲಾಶಯಗಳಿದ್ದರೂ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳದಿರುವುದು, ಕುಡಿಯುವ ನೀರಿನ ಸಮಸ್ಯೆ, ಪ್ರವಾಸಿ ತಾಣಗಳಲ್ಲಿ ಮೂಲ ಸೌಲಭ್ಯ ಕೊರತೆ..ಇವು ಚುನಾವಣೆಯಲ್ಲಿ ಪರಿಣಾಮ ಬೀರಲಿದೆ.

ಮೃದು ಸ್ವಭಾವ, ಮಿತಭಾಷಿ ಗುಣಗಳಿಂದ ರುದ್ರೇಶ್ ಗೌಡರು ಗುರುತಿಸಿಕೊಂಡಿದ್ದರು. ಆದರೆ, ಅಭಿವೃದ್ಧಿ ವಿಚಾರದಲ್ಲೂ ಅದೇ ಮೃದು ಭಾವನೆ ಪ್ರದರ್ಶಿಸಿದರು ಎಂಬ ಆರೋಪ ಇದೆ.

ಎರಡು ಅವಧಿಯಲ್ಲಿ ರುದ್ರೇಶ್‌ಗೌಡರು ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳು ಹಾಗೂ ಕಾಂಗ್ರೆಸ್‌ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಮುಂದಿಟ್ಟು ಕೀರ್ತನಾ ಮತಯಾಚಿಸುತ್ತಿದ್ದಾರೆ. ಕೀರ್ತನಾ ಗೆಲುವಿಗೆ ಅವರ ಮೈದುನರು, ಮಗಳು ಮತ್ತು ಸಂಬಂಧಿಕರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.

ರುದ್ರೇಶ್‌ಗೌಡರ ಅಕಾಲಿಕ ಸಾವಿನ ಅನುಕಂಪ ಮತಗಳಾಗಿ ಮಾರ್ಪಟ್ಟರೆ ಕ್ಷೇತ್ರದ ಮೊದಲ ಶಾಸಕಿ ಎನ್ನುವ ಕೀರ್ತಿ ಕೀರ್ತನಾ ಅವರಿಗೆ ಲಭಿಸಬಹುದು.

ಎರಡು ತಿಂಗಳು ಮುಂಚಿತವಾಗಿಯೇ ಟಿಕೆಟ್ ಖಾತರಿಪಡಿಸಿಕೊಂಡು ಲಿಂಗೇಶ್‌, ಹಗಲಿರುಳು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕಾರ್ಯಕರ್ತರ ಸಭೆ ನಡೆಸಿ ಪಕ್ಷದ ಪರವಾಗಿ ಅಲೆ ಎಬ್ಬಿಸುವಲ್ಲಿ ಸಫಲವಾಗಿದ್ದಾರೆ. ಲಿಂಗೇಶ್‌, ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಅಭ್ಯರ್ಥಿ ಎನ್ನುವುದನ್ನೇ ಜೆಡಿಎಸ್‌ ಟ್ರಂಪ್‌ ಕಾರ್ಡ್‌ ಮಾಡಿಕೊಂಡಿದ್ದು, ಜೆಡಿಎಸ್‌ನ ಸಾಂಪ್ರದಾಯಿಕ ಮತಗಳೊಂದಿಗೆ ಆ ಸಮುದಾಯದ ಮತಗಳನ್ನು ದೊಡ್ಡ ಸಂಖ್ಯೆಯಲ್ಲಿ ಸೆಳೆಯುವ ಕಾರ್ಯತಂತ್ರ ಅನುಸರಿಸುತ್ತಿದೆ.

ಕ್ಷೇತ್ರದಲ್ಲಿ ತನ್ನದೇ ಆದ ಮತ ಬ್ಯಾಂಕ್‌ ಹೊಂದಿರುವ ಬಿಎಸ್‌ಪಿ ಜತೆ ರಾಜ್ಯ ಮಟ್ಟದಲ್ಲಿ ಮೈತ್ರಿ ಮಾಡಿಕೊಂಡಿರುವುದು ಒಂದಷ್ಟು ದಲಿತ ಮತಗಳನ್ನು ಜೆಡಿಎಸ್‌ ಖಾತೆಗೆ ಜಮಾ ಮಾಡುವ ಸಾಧ್ಯತೆಯಿದೆ.

ಎಚ್.ಕೆ.ಸುರೇಶ್ ಅವರು ಬಿಜೆಪಿ ವೋಟ್ ಬ್ಯಾಂಕ್ ಹಾಗೂ ತಮ್ಮ ಸಂಘಟನಾ ಸಾಮರ್ಥ್ಯ ಲಾಭ ತರಬಹುದು ಎಂದು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಈಗಾಗಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪ್ರಚಾರ ನಡೆಸಿ ಹೋಗಿದ್ದಾರೆ. ತ್ರಿಕೋನ ಪೈಪೋಟಿಯ ನಿರೀಕ್ಷೆಯಲ್ಲಿರುವ ಸುರೇಶ್ ಕೂಡ ಜಯದ ಕನಸು ಕಾಣುತ್ತಿದ್ದಾರೆ.

ಕಣದಲ್ಲಿ ಹುರಿಯಾಳುಗಳು
ಕೆ.ಎಸ್.ಲಿಂಗೇಶ್ (ಜೆಡಿಎಸ್),
ಎಂ.ಎನ್.ಕೀರ್ತನಾ (ಕಾಂಗ್ರೆಸ್),
ಎಚ್.ಕೆ.ಸುರೇಶ್ (ಬಿಜೆಪಿ),
ಎಚ್.ಬಿ.ಚಂದ್ರಕಾಂತ್ ( ಆರ್ ಪಿಐ ),
ಎನ್.ಆರ್.ಅರುಣ್ (ಶಿವಸೇನೆ )

ಹಿಂದಿನ ಎರಡು ಚುನಾವಣೆಗಳ ಫಲಿತಾಂಶ
ವರ್ಷ–ಗೆದ್ದವರು–ಪಕ್ಷ–ಸಮೀಪ ಸ್ಪರ್ಧಿ–ಪಕ್ಷ
2008–ವೈ.ಎನ್‌.ರುದ್ರೇಶ್‌ಗೌಡ–ಕಾಂಗ್ರೆಸ್‌–ಬಿ.ಶಿವರುದ್ರಪ್ಪ–ಬಿಜೆಪಿ
2013–ವೈ.ಎನ್‌.ರುದ್ರೇಶ್‌ಗೌಡ–ಕಾಂಗ್ರೆಸ್‌–ಕೆ.ಎಸ್‌.ಲಿಂಗೇಶ್‌–ಜೆಡಿಎಸ್‌

ಸಮುದಾಯ ಓಲೈಸಲು ಸ್ಪರ್ಧೆ
ಕ್ಷೇತ್ರದಲ್ಲಿ ಹೆಚ್ಚು ಮತದಾರರನ್ನು ಹೊಂದಿರುವ ದಲಿತ ಸಮುದಾಯವನ್ನು ಓಲೈಸಲು ಜೆಡಿಎಸ್‌, ಕಾಂಗ್ರೆಸ್‌ ನಡುವೆ ಪೈಪೋಟಿ ನಡೆಯುತ್ತಿದೆ. ಕಾಂಗ್ರೆಸ್‌ ಸರ್ಕಾರದ ಕಾರ್ಯಕ್ರಮಗಳ ಕಾರಣಕ್ಕಾಗಿ ದಲಿತ ಸಮುದಾಯದ ಹೆಚ್ಚಿನ ಮತಗಳು ತಮಗೆ ಲಭಿಸಬಹುದು ಎಂಬ ಲೆಕ್ಕಾಚಾರ ಹೊಂದಿದೆ. ಸಣ್ಣಪುಟ್ಟ ಸಮುದಾಯಗಳ ಮತಗಳು ಅಭ್ಯರ್ಥಿಗಳ ಸೋಲು–ಗೆಲುವಿನ ಹಣೆಬರಹ ಬರೆಯುವುದರಿಂದ ಇವುಗಳ ಮನವೊಲಿಕೆಯಲ್ಲೂ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.