ADVERTISEMENT

‘ಅನ್ಯ ಭಾಷೆ ಕಲಿತರೂ, ಕನ್ನಡಕ್ಕೆ ಆದ್ಯತೆ’

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2017, 6:52 IST
Last Updated 3 ನವೆಂಬರ್ 2017, 6:52 IST
ಅರಕಲಗೂಡಿನಲ್ಲಿ ಬುಧವಾರ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿದರು
ಅರಕಲಗೂಡಿನಲ್ಲಿ ಬುಧವಾರ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿದರು   

ಅರಕಲಗೂಡು: ‘ಜಾಗತೀಕರಣ, ಖಾಸಗೀ ಕರಣಗಳ ಒತ್ತಡದಲ್ಲಿ ಬೇರೆ ಭಾಷೆ ಕಲಿಯುವ ಅನಿವಾರ್ಯತೆ ಇದ್ದರೂ ಮಾತೃಭಾಷೆ ಮರೆಯಬಾರದು’ ಎಂದು ಆದಿಚುಂಚನಗಿರಿ ಮಠಾಧೀಶ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಎ.ಮಂಜು ಅಭಿಮಾನಿಗಳ ಬಳಗ ಪಟ್ಟಣದಲ್ಲಿ ಬುಧವಾರ ಏರ್ಪಡಿಸಿದ್ದ ರಾಜ್ಯೋತ್ಸವ ಹಾಗೂ ಸಚಿವ ಎ.ಮಂಜು ಅವರ 60ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಕನ್ನಡ ಭಾಷೆ ತಾಯಿ ಇದ್ದಂತೆ ಎಂಬುದನ್ನು ಮರೆಯಬಾರದು. ಜ್ಞಾನಾಭಿವೃದ್ಧಿಗೆ ಎಷ್ಟೇ ಭಾಷೆ ಕಲಿತರೂ ತಾಯಿ ಭಾಷೆಗೆ ಮಹತ್ವವನ್ನು ನೀಡಲೇಬೇಕು ಎಂದು ಸಲಹೆ ಮಾಡಿದರು.

ಜಿಲ್ಲೆ ತನ್ನದೆ ಆದ ಮಹತ್ವ ಹೊಂದಿದೆ. ಸಾಹಿತ್ಯ, ಕಲೆ, ಸಂಸ್ಕೃತಿ, ವಿಜ್ಞಾನ ರಾಜಕೀಯ ವಿವಿಧ ಕ್ಷೇತ್ರಗಳಿಗೆ ತನ್ನದೆ ಆದ ಮಹತ್ವದ ಕೊಡುಗೆ ನೀಡಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಗೃಹ ಸಚಿವ ರಾಮಲಿಂಗಾರೆಡ್ಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಪರ ಯೋಜನೆಗಳ ಮೂಲಕ ಉತ್ತಮ ಆಡಳಿತ ನೀಡಿದೆ. ಪ್ರಣಾಳಿಕೆಯ 165 ಭರವಸೆಗಳ ಪೈಕಿ 155ನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.

ADVERTISEMENT

ಕಾಲೇಜು ದಿನಗಳಿಂದಲೂ ಸಚಿವ ಮಂಜು ನನ್ನ ಒಡನಾಡಿ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಜನತೆ ಇನ್ನೂ ಹೆಚ್ಚಿನ ಬೆಂಬಲ ನೀಡಿ ರಾಜಕೀಯವಾಗಿ ಶಕ್ತಿ ತುಂಬಬೇಕು ಎಂದರು.

ಸಚಿವ ಎ.ಮಂಜು ಅವರು, ‘ಹಲವು ದಶಕಗಳಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಆಗದೇ ಹಿನ್ನಡೆ ಅನುಭವಿಸಿತ್ತು. ನಾನು ಉಸ್ತುವಾರಿ ಸಚಿವನಾದ ನಂತರ ನೀರಾವರಿ, ರಸ್ತೆ ಅಭಿವೃದ್ಧಿ ಸೇರಿ ಅಭಿವೃದ್ಧಿಗೆ ಚುರುಕು ನೀಡಲಾಗಿದೆ ಎಂದು ತಿಳಿಸಿದರು.

ಅರೇಮಾದನಹಳ್ಳಿ ವಿಶ್ವಕರ್ಮ ಮಠದ ಶಿವ ಸುಜ್ಞಾನತೀರ್ಥ ಸ್ವಾಮೀಜಿ. ಧಾರ್ಮಿಕ ಪರಿಷತ್ ಸದಸ್ಯ ಕೆ.ಎಂ.ನಾಗರಾಜ್ ಮಾತನಾಡಿದರು. ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಂಮೀಜಿ, ನಟರಾದ ರಘುನಂದನ್, ಸಾಧುಕೋಕಿಲಾ, ಸಚಿವ ಮಂಜು ಪತ್ನಿ ತಾರಾ, ವಿಧಾನ ಪರಿಷತ್ ಸದಸ್ಯ ಎಂ.ವಿ.ಗೋಪಾಲಸ್ವಾಮಿ, ಜಿ.ಪಂ.ಅಧ್ಯಕ್ಷೆ ಶ್ವೇತಾ ದೇವರಾಜ್, ಹುಡಾ ಅಧ್ಯಕ್ಷ ಕೃಷ್ಣಕುಮಾರ್, ತಾ.ಪಂ ಅಧ್ಯಕ್ಷೆ ವೀಣಾ ಮಂಜುನಾಥ್, ಪ.ಪಂ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಇದ್ದರು.

ಬಳಿಕ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಮತ್ತು ತಂಡದಿಂದ ಸಂಗೀತ ಸಂಜೆ ನಡೆಯಿತು. ಸಚಿವರ ಜನ್ಮದಿನ ನಿಮಿತ್ತ ರಕ್ತದಾನ ಶಿಬಿರ, ಪೌರ ಕಾರ್ಮಿಕರಿಗೆ ಮತ್ತು ಆಟೊ ಚಾಲಕರಿಗೆ ಸಮವಸ್ತ್ರ ವಿತರಣೆ, ಸಸಿ ನೆಡುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಶಂಕುಸ್ಥಾಪನೆ ಹಾಗೂ ಸುಭಾಷ್ ನಗರ ಬಡಾವಣೆಯಲ್ಲಿ ಹೈಮಾಸ್ಟ್ ವಿದ್ಯುತ್ ದೀಪ ಉದ್ಘಾಟಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.