ADVERTISEMENT

ಅಪಹರಿಸಿದಾಗಲೇ ಜೀವನ ಮುಗಿಯಿತು ಅಂದುಕೊಂಡಿದ್ದೆ

ಕೆ.ಎಸ್.ಸುನಿಲ್
Published 29 ನವೆಂಬರ್ 2017, 9:07 IST
Last Updated 29 ನವೆಂಬರ್ 2017, 9:07 IST
ಟಾಮ್ ಉಳುನ್ನಾಲಿಲ್‌
ಟಾಮ್ ಉಳುನ್ನಾಲಿಲ್‌   

ಹಾಸನ: ‘ಧರ್ಮ ಸೇವಾರ್ಥ ಯೆಮನ್‌ಗೆ ತೆರಳಿದ್ದ ನನ್ನನ್ನು ಉಗ್ರರು ಅಪಹರಿಸಿದ್ದರು. ಆದರೆ ಚೆನ್ನಾಗಿ ನೋಡಿಕೊಂಡರು’ ಎಂದು ಕೇರಳದ ಕೆಥೊಲಿಕ್‌ ಪಾದ್ರಿ ಟಾಮ್ ಉಳುನ್ನಾಲಿಲ್‌ ಹೇಳಿದರು. ನಗರದ ಡಾನ್‌ ಬಾಸ್ಕೊ ಸಂಸ್ಥೆ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಅವರು, ‘ಪ್ರಜಾವಾಣಿ’ ಜತೆ ಮಾತನಾಡಿದರು.

‘ಬಂದರು ನಗರಿ ಏಡನ್‌ನಲ್ಲಿ ಮದರ್ ತೆರೆಸಾ ದತ್ತಿ ಸಂಸ್ಥೆ ವತಿಯಿಂದ ನಡೆಯುತ್ತಿದ್ದ ವೃದ್ಧಾಶ್ರಮದಲ್ಲಿ 2016ರ ಮಾರ್ಚ್ 4ರಂದು ಬೆಳಿಗ್ಗೆ 8.30ರ ಸುಮಾರಿಗೆ ಪ್ರಾರ್ಥನೆ ಮುಗಿಸಿ ನಿಂತಿದ್ದ ಸಂದರ್ಭದಲ್ಲಿ ಉಗ್ರರು ನಡೆಸಿದ ದಾಳಿಗೆ ನಾಲ್ವರು ನರ್ಸ್ ಸೇರಿದಂತೆ 15 ಜನರು ಬಲಿಯಾದರು. ದಾಳಿಯಲ್ಲಿ ಬದುಕುಳಿದ ನನ್ನನ್ನು ಉಗ್ರರು ಅಪಹರಿಸಿ, ಅಜ್ಞಾತ ಪ್ರದೇಶಕ್ಕೆ ಸಾಗಿಸಿದರು. ಅವರು ನನ್ನ ಜತೆ ಇದ್ದಾಗಲೇ ಕೊಂದು ಹಾಕುತ್ತಾರೆ, ಜೀವನ ಮುಗಿಯಿತು ಎಂದು ಭಾವಿಸಿದ್ದೆ. ಆದರೆ 18 ತಿಂಗಳು ಚೆನ್ನಾಗಿಯೇ ನೋಡಿಕೊಂಡರು’ ಎಂದು ವಿವರಿಸಿದರು.

‘ಯಾವ ಉದ್ದೇಶಕ್ಕೆ ಅಪಹರಿಸಿದರು ಎಂಬುದು ಗೊತ್ತಾಗಲೇ ಇಲ್ಲ. ನಮ್ಮ ನಡುವೆ ಯಾವುದೇ ಸಂಭಾಷಣೆ ಇರಲಿಲ್ಲ. ಅರಬ್ ಭಾಷೆಯಲ್ಲಿ ಮಾತನಾಡುತ್ತಿದ್ದರು. ಅದು ಅರ್ಥ ಆಗುತ್ತಿರಲಿಲ್ಲ. ನನ್ನೊಂದಿಗೆ ಮಾತ್ರ ಇಂಗ್ಲಿಷಿನಲ್ಲಿ ಮಾತನಾಡುತ್ತಿದ್ದರು. ಉಗ್ರರ ಮುಖ ನೋಡುವಂತಿರಲಿಲ್ಲ. ಬೇರೆ ಸ್ಥಳಗಳಿಗೆ ಹೋಗುವಾಗ ಕಣ್ಣಿಗೆ ಬಟ್ಟೆ ಕಟ್ಟುತ್ತಿದ್ದರು. ಹೊರಗಿನ ಸ್ಥಳ ನೋಡುವಂತಿರಲಿಲ್ಲ. ಈ ರೀತಿಯ ನಿಯಮಗಳು ಇದ್ದವು’ ಎಂದು ಅನುಭವದ ಬುತ್ತಿ ಬಿಚ್ಚಿಟ್ಟರು.

ADVERTISEMENT

‘ಸಾಮಾನ್ಯವಾಗಿ ಉಗ್ರರಿಂದ ಅಪಹರಣಗೊಂಡ ವ್ಯಕ್ತಿ ಜೀವಂತವಾಗಿ ಸ್ವದೇಶಕ್ಕೆ ಮರಳುವುದು ಸಾಧ್ಯವಿಲ್ಲ. ಆದರೆ, ನನ್ನ ವಿಚಾರದಲ್ಲಿ ಇದು ಸಂಪೂರ್ಣ ವಿರುದ್ಧವಾಗಿದೆ. ಕೋಣೆಯೊಂದರಲ್ಲಿ ಕೂಡಿ ಹಾಕಿ. ಅವರು ಏನು ಊಟ ಮಾಡುತ್ತಿದ್ದರೋ ಅದನ್ನೇ ನನಗೂ ಕೊಡುತ್ತಿದ್ದರು’ ಎಂದು ಹೇಳಿದರು.

‘ವಿದೇಶಾಂಗ ಇಲಾಖೆಯ ಪರಿಶ್ರಮದಿಂದ 2017ರ ಸೆ.12ರಂದು ಬಿಡುಗಡೆಗೊಂಡೆ. ಯೆಮನ್‌ ನಿಂದ ಬಂದ ತಕ್ಷಣವೇ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿದೆ. ಬಿಡುಗಡೆಗಾಗಿ ಪ್ರಾರ್ಥಿಸಿದ ಎಲ್ಲ ಧರ್ಮದವರಿಗೂ ಅಂತರಾಳದಿಂದ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಹೇಳಿದರು.

ಪಾದ್ರಿ ಟಾಮ್ ಉಳುನ್ನಾಲಿಲ್ 2001ರಿಂದ 2006ರ ವರೆಗೆ ನಗರದ ಡಾನ್ ಬಾಸ್ಕೊ ಟೆಕ್ನಿಕಲ್‌ ಸಂಸ್ಥೆಯಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಯೆಮನ್ ದೇಶದ ವೃದ್ಧಾಶ್ರಮವೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗಲೇ ಉಗ್ರರಿಂದ ಅಪಹರಣಗೊಂಡಿದ್ದ. ತಾವು ಸೇವೆ ಸಲ್ಲಿಸಿದ ಸಂಸ್ಥೆಗೆ ಮಂಗಳವಾರ ಭೇಟಿ ನೀಡಿದ್ದ ಅವರು, ಸಂತ ಅಂಥೋಣಿ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

* * 

ಕೊನೆವರೆಗೂ ಉಗ್ರ ಮುಖ ನೋಡಲು ಆಗಲೇ ಇಲ್ಲ. ಒಂದೇ ರೂಮಿನಲ್ಲಿರಬೇಕಿತ್ತು. ಒಂದು ಪೆನ್, ಪುಸ್ತಕ, ಟಿ.ವಿ ಕೂಡಾ ಇರಲಿಲ್ಲ. ಸಮಯ ಕಳೆಯುವುದೇ ಬಹುದೊಡ್ಡ ಸಮಸ್ಯೆಯಾಗಿತ್ತು
ಟಾಮ್ ಉಳುನ್ನಾಲಿಲ್‌, ಕೇರಳದ ಕೆಥೊಲಿಕ್‌ ಪಾದ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.