ADVERTISEMENT

ಆತ್ಮಸ್ಥೈರ್ಯ ಬೆಳೆಸಿಕೊಳ್ಳಲು ಸಲಹೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2017, 9:33 IST
Last Updated 7 ಸೆಪ್ಟೆಂಬರ್ 2017, 9:33 IST

ಹಾಸನ: ‘ಮಹಿಳೆಯರು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಹೇಳಿದರು.‌

ಜಿಲ್ಲಾಧಿಕಾರಿ ಕಚೇರಿ ಸಂಭಾಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಜತೆ ಬುಧವಾರ ಸಭೆ ನಡೆಸಿ ಅವರು ಮಾತನಾಡಿದರು. ಪೊಲೀಸ್ ಠಾಣೆಗೆ ದೂರು ನೀಡಲು ಬಂದ ಮಹಿಳೆಯರ ಜತೆ ಸಂಯಮ ಮತ್ತು ಗೌರವದಿಂದ ವರ್ತಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಇಲಾಖೆ ಪ್ರಕರಣ ದಾಖಲಾತಿ ಅನ್ವಯ 2015–2016 ರಲ್ಲಿ 264 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 56 ಬಾಲ್ಯವಿವಾಹ ಪ್ರಕರಣಗಳು ಇವೆ ಎಂದರು.

ADVERTISEMENT

ಗರ್ಭಪಾತಕ್ಕೆ ಸಂಬಂಧಿಸಿದ ಮಾತ್ರೆಗಳನ್ನು ವೈದ್ಯರ ರಸೀದಿ ಇಲ್ಲದೇ ವಿತರಿಸುವುದು ದೊಡ್ಡ ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಅವರು ಹೇಳಿದರು.

ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡಲು ಬರುವ ಹೆಣ್ಣುಮಕ್ಕಳು ಬಡ ಕುಟುಂಬದಿಂದ ಬರುವವರಾಗಿದ್ದು, ಅವರಿಗೆ ಯಾವುದೇ ಉದ್ಯೋಗ ಖಾತ್ರಿ ಇರುವುದಿಲ್ಲ. ಅದ್ದರಿಂದ ಅವರ ಸುರಕ್ಷತೆಗೆ ಗಮನ ಹರಿಸಬೇಕು. ಮುಖ್ಯವಾಗಿ ಶೌಚಾಲಯ ಹಾಗೂ ಮೂಲ ಸೌಕರ್ಯ ಒದಗಿಸಬೇಕು ಎಂದು ಹೇಳಿದರು. ಬಾಕಿ ಉಳಿದಿರುವ ಪ್ರಕರಣಗಳನ್ನು ಬೇಗ ವಿಲೇವಾರಿ ಮಾಡಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾತನಾಡಿ, ‘ಪ್ರತಿ ವರ್ಷ ವಿದ್ಯಾರ್ಥಿನಿ ನಿಲಯಕ್ಕೆ ದಾಖಲಾತಿಗಳು ಹೆಚ್ಚುತ್ತಿವೆ. ವಿದ್ಯಾರ್ಥಿನಿ ನಿಲಯಗಳ ಕೊರತೆ ಇರುವುದರಿಂದ ಅದಷ್ಟು ಬೇಗ ಸರ್ಕಾರ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತರಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.