ADVERTISEMENT

ಆಶ್ರಯ ಮನೆ ಮಂಜೂರು ಮಾಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2017, 5:27 IST
Last Updated 16 ಮಾರ್ಚ್ 2017, 5:27 IST
ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಹಾಸನ ಜಿಲ್ಲಾ ಮಾಜಿ ಸೈನಿಕರ ಸಂಘ ಬುಧವಾರ ಪ್ರತಿಭಟನೆ ನಡೆಸಿತು.
ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಹಾಸನ ಜಿಲ್ಲಾ ಮಾಜಿ ಸೈನಿಕರ ಸಂಘ ಬುಧವಾರ ಪ್ರತಿಭಟನೆ ನಡೆಸಿತು.   

ಹಾಸನ: ಆಶ್ರಯ ಯೋಜನೆಯಡಿ ಮನೆ ಮಂಜೂರು ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಮಾಜಿ ಸೈನಿಕ ಸಂಘದವರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಹೇಮಾವತಿ ಪ್ರತಿಮೆಯಿಂದ ಎನ್ಆರ್ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರ ವಣಿಗೆಯಲ್ಲಿ ಬಂದು ಜಿಲ್ಲಾಧಿಕಾರಿ ವಿ.ಚೈತ್ರಾ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಮಾಜಿ ಸೈನಿಕರ ಮಕ್ಕಳ ಪ್ರವೇಶಕ್ಕೆ ವಿನಾಯಿತಿ ನೀಡಬೇಕು. ವಾಹನ ಸುಂಕ ವಸೂಲಾತಿ ಕೇಂದ್ರದಲ್ಲಿ ಸುಂಕರಹಿತ ಪ್ರಯಾಣಿಸಲು ಅನುಮತಿ ಕೊಡಬೇಕು, ಪುನರ್ವಸತಿಗಾಗಿ ವಿಶೇಷ ಸೌಲಭ್ಯ ಕಲ್ಪಿಸಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ ಅವರು,  ವಾರ್ಷಿಕ ಆದಾಯ ಮಿತಿಯನ್ನು ₹ 2 ಲಕ್ಷದಿಂದ ₹ 5 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಹಲವು ಇಲಾಖೆಗಳಲ್ಲಿ ‘ಎ’ ಶ್ರೇಣಿಯ ಅಧಿಕಾರಿಗಳ ಹುದ್ದೆಗಳಲ್ಲಿ ಮೀಸಲಾತಿ ನೀಡಲಾಗಿದೆ. ಆದರೆ, ಅರ್ಹತೆ ಇಲ್ಲದವರಿಗೆ ಬ್ಯಾಕ್‌ಲಾಕ್‌ ಹುದ್ದೆ ನೀಡಲಾಗುತ್ತಿದೆ. ಈ ಹುದ್ದೆಗಳನ್ನು ಅರ್ಹ ಮಾಜಿ ಸೈನಿಕರಿಗೆ ಅಥವಾ ಅವಲಂಬಿತರಿಗೆ ಮೀಸಲಿಡಬೇಕು. ಶೇ 50ರಷ್ಟು ಮನೆ ತೆರಿಗೆ ವಿನಾಯಿತಿ ಸೌಲಭ್ಯ ಕೇವಲ ನಗರ ವ್ಯಾಪ್ತಿಯ ನಿವಾಸಿಗಳಿಗೆ ದೊರಕುತ್ತಿದೆ. ಇದನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಗೂ ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ಹಲವೆಡೆ ಮಾಜಿ ಸೈನಿಕರಿಗೆ ಮೀಸಲಿಟ್ಟ ಜಮೀನು ಒತ್ತುವರಿಯಾಗಿದೆ. ಅರ್ಜಿ ಸಲ್ಲಿಸಿರುವ ಸೈನಿಕರ ಹೆಸರಿಗೆ ಜಮೀನು ಮಂಜೂರು ಮಾಡಬೇಕು.  ಹಲವು ಕಾರಣಗಳಿಂದ 35ರಿಂದ 40 ವರ್ಷದ ವಯೋಮಿತಿಯ ಸೈನಿಕರು ಸೇನೆಯಿಂದ ನಿವೃತಿ ಹೊಂದುತ್ತಾರೆ. ಹೀಗೆ ನಿವೃತ್ತಿ ಹೊಂದುವವರು ಸೇನೆಗೆ ಸೇರುವಾಗ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರು ವುದರಿಂದ ಇತರೆ ಉದ್ಯೋಗ ಸಿಗುವುದು ಕಷ್ಟ ಎಂದು ಪ್ರತಿ ಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. 

ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಸಣ್ಣ ಕೈಗಾರಿಕೆ ತರಬೇತಿಗೆ ಶೇ 25ರಿಂದ 30ರಷ್ಟು ಸಹಾಯಧನ ಮಂಜೂರು ಮಾಡಬೇಕು. ಸಾಲ, ಸೌಲಭ್ಯ ಪಡೆಯಲು ಸರಳ ನೀತಿ ಅನುಸರಿಸಬೇಕು. ಆಶ್ರಯ ಮನೆ ಯೋಜನೆಯಡಿ ಶೇ 1ರಷ್ಟು ಮಂಜೂರಾತಿ ಇದ್ದು, ನಿವೇಶನ ಮಂಜೂರಾತಿಗೆ ಮಾಜಿ ಸೈನಿಕರು ಮತ್ತು ವಿಧವೆಯರಿಗೆ ಪಿಂಚಣಿ ಹೊರತುಪಡಿಸಬೇಕು. ಇತರೆ ಆದಾಯದ ಮೂಲ ಹೊಂದಿಲ್ಲದವರಿಗೆ ಆದ್ಯತೆ ಮೇರೆಗೆ ಮಂಜೂರಾತಿ ನೀಡಬೇಕು ಎಂದು ಮನವಿ ಮಾಡಿದರು.

ಸಂಘದ ಜಿಲ್ಲಾ ಅಧ್ಯಕ್ಷ ಸಿ.ಟಿ. ಪ್ರಭಾಕರ್, ಗೌರವಾಧ್ಯಕ್ಷ ಕರ್ನಲ್ ನಟೇಶ್, ಉಪಾಧ್ಯಕ್ಷ ಜಿ.ಕೆ.ಪುಟ್ಟರಾಜು, ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಪಿ.ಎನ್.ವೆಂಕಟೇಶ್, ಸಹ ಕಾರ್ಯದರ್ಶಿ ಎನ್.ಶ್ರೀನಿವಾಸ್, ಖಜಾಂಚಿ ಆರ್.ಎಲ್.ಕೃಷ್ಣ ಇದ್ದರು.

**

ವೇತನ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

ಚನ್ನರಾಯಪಟ್ಟಣ: ಹೊರಗುತ್ತಿಗೆ ಆಧಾರದಲ್ಲಿ ಪುರಸಭೆಯಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಿಗೆ ಎರಡು ತಿಂಗಳ ವೇತನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಪೌರಕಾರ್ಮಿಕರು ಬುಧವಾರ ಪ್ರತಿಭಟನೆ ನಡೆಸಿದರು.ಪಟ್ಟ

ಣದಲ್ಲಿರುವ ಪುರಸಭೆಯ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಪೌರಕಾರ್ಮಿಕರು, ಜನವರಿ, ಫೆಬ್ರುವರಿ ತಿಂಗಳ ವೇತನ ಬಿಡುಗಡೆ ಮಾಡಿಲ್ಲ. ಇದನ್ನು ನಂಬಿ ಕೆಲಸ ಮಾಡುತ್ತಿರುವ 65 ಕಾರ್ಮಿಕರಿಗೆ ತುಂಬ ತೊಂದರೆಯಾಗಿದೆ. ಪಿಎಫ್‌, ಇಎಸ್‌ಐ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.

ಆರ್ಥಿಕ ತೊಂದರೆ ಎದುರಿಸುತ್ತಿರುವ ಪೌರ ಕಾರ್ಮಿಕರಿಗೆ ಕೂಡಲೇ ವೇತನ ಬಿಡುಗಡೆ ಮಾಡಬೇಕು. ಅಲ್ಲಿಯವರೆಗೆ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು  ಪ್ರತಿಭಟನಾಕಾರರು ಎಚ್ಚರಿಸಿದರು.

ಪೌರಕಾರ್ಮಿಕರಾದ ಸಿ.ಜಿ.ವೆಂಕಟರಾಮು, ರಾಮು, ಸುಮಾ ನರಸಿಂಹ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಗುತ್ತಿಗೆದಾರರ ಜತೆ ಚರ್ಚಿಸಿ ಪೌರಕಾರ್ಮಿಕರ ಸಮಸ್ಯೆ ನಿವಾರಿಸಲಾಗುವುದು ಎಂದು ಪುರಸಭೆಯ ಮುಖ್ಯಾಧಿಕಾರಿ ಸಿ.ಎಸ್‌.ಬಸವರಾಜು ಪತ್ರಿಕೆಗೆ ತಿಳಿಸಿದರು.

**

ಜಿಲ್ಲೆಯಲ್ಲಿ ಮಾಜಿ ಸೈನಿಕರಿಗೆ ಮೀಸಲಿಟ್ಟ 8567 ಎಕರೆ ಜಮೀನು ಪೈಕಿ ಕೇವಲ 450 ಎಕರೆ ಮಾತ್ರ ನೀಡಲಾಗಿದೆ.
-ಸಿ.ಟಿ.ಪ್ರಭಾಕರ್,
ಮಾಜಿ ಸೈನಿಕರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.