ADVERTISEMENT

ಎಳನೀರಿನ ಕಲ್ಪಾಮೃತ ಮಳಿಗೆ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 10:10 IST
Last Updated 17 ನವೆಂಬರ್ 2017, 10:10 IST

ಶ್ರವಣಬೆಳಗೊಳ: ತೆಂಗಿನ ಬೆಳೆಗೆ ಉತ್ತಮ ಬೆಲೆಯಿದ್ದರೂ ಮಧ್ಯವರ್ತಿಗಳ ಹಾವಳಿ, ಮಾರುಕಟ್ಟೆ ಅಭಾವದಿಂದ ಉತ್ತಮ ಬೆಲೆ ಸಿಗುತ್ತಿಲ್ಲ. ಆದ್ದರಿಂದ ಕಲ್ಪಾಮೃತ ಮಳಿಗೆ ಮೂಲಕ ರೈತರ ಬೆಳೆಗೆ ಮಾರುಕಟ್ಟೆ ಕಲ್ಪಿಸಿ ಲಾಭ ಪಡೆಯಬಹುದು ಎಂದು ನಿರಂತರ ವೈಜ್ಞಾನಿಕ ಪರಿಹಾರ ಸಂಸ್ಥೆ ಸ್ಥಾಪಕ ಸಂದೇಶ್‌ ಹೇಳಿದರು

ರೈತ ಸಂಘ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ರಾಚೇನಹಳ್ಳಿ ಬಳಿಯ ಅತಿಥಿ ಗೃಹದಲ್ಲಿ ಏರ್ಪಡಿಸಿದ್ದ ರೈತರ ತರಬೇತಿ ಸಭೆಯಲ್ಲಿ ಮಾತನಾಡಿದರು.

ಮಹಾಮಜ್ಜನ ಸಮಯದಲ್ಲಿ ಶ್ರೀ ಕ್ಷೇತ್ರದಲ್ಲಿ ಕಲ್ಪಾಮೃತ ಮಳಿಗೆಗಳನ್ನು ತೆರೆದು, ಎಳನೀರಿನಿಂದ ವಿವಿಧ ರೀತಿಯ ಮೌಲ್ಯವರ್ಧಿತ ಪಾನೀಯಗಳನ್ನು ತಯಾರಿಸಿ ಗ್ರಾಹಕರಿಗೆ ನೀಡುವ ಮೂಲಕ ಲಾಭ ಗಳಿಸಬಹದು ಎಂದರು.

ADVERTISEMENT

ರೈತರು ಬೆಳೆದ ಎಳನೀರಿನಲ್ಲಿ ಹಲವು ಉಪಯೋಗಗಳಿದ್ದು, ಆರೋಗ್ಯ, ಸೌಂದರ್ಯ ವರ್ಧಕ ಗುಣಗಳನ್ನು ಹೊಂದಿದೆ. ಇನ್ನು ಮುಂದೆ ಪ್ರತಿ ಸಮಾರಂಭಗಳಲ್ಲೂ ಎಳನೀರು ಬಳಸುವಂತೆ ಸಲಹೆ ನೀಡಿದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎ.ಬಿ.ಸಂಜಯ್‌ ಮಾತನಾಡಿ, ಮಳೆಗಾಲದಲ್ಲಿ ಎಳನೀರಿಗೆ ಬೇಡಿಕೆ ಕಡಿಮೆ. ಎಳನೀರಿನಿಂದ ವಿವಿಧ ಉತ್ಪನ್ನ ತಯಾರಿಸಬಹುದು.ಮಹೋತ್ಸವದ ಸಂದರ್ಭದಲ್ಲಿ ಸರ್ಕಾರದ ಸಹಯೋಗದಲ್ಲಿ ಕಲ್ಪಾಮೃತ ಮಳಿಗೆ ತೆರೆದು ಬೇಡಿಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ರೈತರ ಮೂಲ ಬಂಡವಾಳದ ಜೊತೆಗೆ ಸರ್ಕಾರ ಅಗತ್ಯ ಯಂತ್ರೋಪಕರಣಗಳ ಖರೀದಿಗೆ ಸಹಾಯ ಧನ ನೀಡುವ ಉದ್ದೇಶ ಹೊಂದಿದೆ ಎಂದರು.

ಮನುಷ್ಯನ ಆರೋಗ್ಯ ಕಾಪಾಡಿಕೊಳ್ಳಲು ಎಳನೀರು ಉತ್ತಮ ಪಾನೀಯವಾಗಿದ್ದು, ಅದನ್ನು ಸಂಸ್ಕರಿಸಿ ಶುಚಿ, ರುಚಿಯಾಗಿ ಉತ್ತಮ ವಾತಾವರಣದಲ್ಲಿಟ್ಟು ಗ್ರಾಹಕರನ್ನು ಆಕರ್ಷಿಸಿದರೆ ರೈತನ ಬದುಕಿಗೆ ನೆರವಾಗಲಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.

ಕೆಎಂಎಫ್‌ ಮಾದರಿಯಲ್ಲಿ ಸರ್ಕಾರ ತೆಂಗು ಒಕ್ಕೂಟ ಸ್ಥಾಪಿಸಿ, ತೆಂಗಿನ ಉತ್ಪನ್ನಗಳನ್ನೇ ಮಾರಾಟ ಮಾಡಬೇಕು. ತೆಂಗಿನ ಮರದಿಂದ ರೈತ ₹ 10,000 ಲಾಭ ಗಳಿಸಲು ಸಾಧ್ಯವಾಗುತ್ತದೆ ಎಂದು ಪ್ರಗತಿ ಪರ ರೈತ ಬೆಕ್ಕದ ರಾಘವೇಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.