ADVERTISEMENT

ಐದು ವರ್ಷದಲ್ಲಿ 600 ಮಕ್ಕಳು ನಾಪತ್ತೆ

ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ ಮಕ್ಕಳ ಹಕ್ಕುಗಳ ಸಂರಕ್ಷಣೆ ತರಬೇತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 9:56 IST
Last Updated 20 ಜುಲೈ 2017, 9:56 IST
ಹಾಸನದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ  ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಟಿ.ಪಾಪಾಬೋವಿ ಉದ್ಘಾಟಿಸಿದರು
ಹಾಸನದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಟಿ.ಪಾಪಾಬೋವಿ ಉದ್ಘಾಟಿಸಿದರು   

ಹಾಸನ: ‘ಭಾರತದಂತ ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಸಾವಿರಾರು ಮಹಿಳೆಯರು ಹಾಗೂ ಮಕ್ಕಳನ್ನು ವಿವಿಧ ಉದ್ದೇಶಗಳಿಗೆ ಕಳ್ಳ ಸಾಗಣೆ ಮಾಡಲಾಗುತ್ತಿದೆ’ ಎಂದು  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರ ಉಪ ನಿರ್ದೇಶಕ ಟಿ.ಪಾಪಾಬೋವಿ ಅಭಿಪ್ರಾಯಪಟ್ಟರು. 

ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಶಿಕ್ಷಣ ಇಲಾಖೆಯ ಹಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ ಮಕ್ಕಳ ಹಕ್ಕುಗಳ ಸಂರಕ್ಷಣೆ, ಬಾಲನ್ಯಾಯ ವ್ಯವಸ್ಥೆ ಹಾಗೂ ಪೋಕ್ಸೊ ಕಾಯ್ದೆ ಕುರಿತು ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಅನಾಥ, ವಲಸೆ ಕುಟುಂಬ, ಬಡತನದ ಬೇಗೆಯಿಂದ ನರಳುತ್ತಿರು ವವರು, ಒಂಟಿ ಮಹಿಳೆಯರು, ವಿಧವೆಯರು ಹಾಗೂ  ಸಂಕಷ್ಟದಲ್ಲಿರು ವವರು ಸಾಗಾಣಿಕೆ ಜಾಲಕ್ಕೆ ಸುಲಭವಾಗಿ ತುತ್ತಾಗುತ್ತಿದ್ದಾರೆ.  ಇದು ಅಂತರ ರಾಷ್ಟ್ರೀಯ ಸಮಸ್ಯೆಯಾಗಿದ್ದು, ಇದ ರಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಇದಕ್ಕೆ ಹಾಸನ ಜಿಲ್ಲೆಯೂ ಹೊರತಾಗಿಲ್ಲ. ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ 18 ವರ್ಷದೊಳಗಿನ 600ಕ್ಕೂ ಹೆಚ್ಚು ಮಕ್ಕಳು ಕಾಣೆಯಾಗಿದ್ದಾರೆ. ಅವರಲ್ಲಿ 72 ಕ್ಕೂ ಹೆಚ್ಚು ಮಕ್ಕಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಇನ್ನೂ ಕೆಲವು ಮಕ್ಕಳು ಹದಿಹರೆಯದಲ್ಲಿ ಪ್ರೀತಿ ಪ್ರೇಮಕ್ಕೆ ಒಳಗಾಗಿ ಕಾಣೆ ಆಗುತ್ತಿದ್ದಾರೆ. ಕೆಲವು ಮಕ್ಕಳು ಉದ್ಯೋಗ ಹರಸಿ ಶಿಕ್ಷಣದಿಂದ ವಿಮುಖರಾಗಿ ಮನೆಬಿಟ್ಟು ತೆರಳುತಿದ್ದಾರೆ. ಇವರೆಲ್ಲರೂ ಸುರಕ್ಷಿತವಾಗಿ ತಮ್ಮ ಕುಟುಂಬಗಳಿಗೆ ವಾಪಾಸ್ಸಾಗುತ್ತಾರೆ ಎಂಬ ನಂಬಿಕೆ ಇಲ್ಲ. ಕೆಲ ಸಂದರ್ಭಗಳಲ್ಲಿ ಸಾಗಾಣಿಕೆದಾರರ ಜಾಲಕ್ಕೆ ಬಲಿಯಾಗುವ ಅಪಾಯವಿದೆ. ಆದ ಕಾರಣ ಆ ಕುಟುಂಬಗಳ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆ ಕುಂಠಿತವಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಜಿಲ್ಲಾ ಸಮಗ್ರ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ(ಅಸಾಂಸ್ಥಿಕ) ಕಾಂತರಾಜು, ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಕ್ಕಳು ಮೊಬೈಲ್‌ಗಳಿಗೆ ದಾಸರಾಗುವುದು, ಅಂತರ್ಜಾಲ ತಾಣಗಳ ದುರ್ಬಳಕೆ ಮಾಡಿಕೊಂಡು ಅಶ್ಲೀಲ ಚಿತ್ರ ವೀಕ್ಷಿಸುವುದು, ಅಪ್ರಾಪ್ತ ವಯಸ್ಸಿನಲ್ಲಿಯೇ ಪ್ರೀತಿ-ಪ್ರೇಮ ಪ್ರಕರಣದಲ್ಲಿ ಸಿಲುಕಿ ತಮ್ಮ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಮಕ್ಕಳನ್ನು ಹೊರತರುವ ಮಹತ್ತರ ಹೊಣೆಗಾರಿಕೆ ಶಿಕ್ಷಕರಿಗೆ ಸೇರಿದೆ ಎಂದು ಸಲಹೆ ನೀಡಿದರು.

ಮಗುವಿನ ಪ್ರಗತಿಯಲ್ಲಿ ಪೋಷಕರ ಪಾತ್ರ ಮುಖ್ಯ. ಆದರೆ, ಎಲ್ಲಾ ಜವಾಬ್ದಾರಿಯನ್ನು ಶಿಕ್ಷಕರ ಮೇಲೆ ಏರಿ ಅವರು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮಾಡುತ್ತಿಲ್ಲ. ಆದ್ದರಿಂದಲೇ ಕೆಲವು ಮಕ್ಕಳು ಪರಿಸ್ಥಿತಿಯ ಲಾಭ ಪಡೆದು ಶಿಕ್ಷಣದಿಂದ ವಿಮುಖರಾಗುತ್ತಿದ್ದಾರೆ  ಎಂದರು.

ಶಿಕ್ಷಣ ಇಲಾಖೆ ಅಧಿಕಾರಿ ಶೇಖರ್ ಮಾತನಾಡಿ,  ಪ್ರತಿ 4 ನಿಮಿಷಕ್ಕೊಂದು ಅತ್ಯಾಚಾರ  ವರದಿಯಾಗುತ್ತಿವೆ. ಲೈಂಗಿಕ ದೌರ್ಜನ್ಯ, ಕಿರುಕುಳಗಳು ನಡೆಯುತ್ತಿವೆ. ಶೇ 90 ಪ್ರಕರಣಗಳು ಸಂಬಂಧಿಕ ರಿಂದಲೇ ನಡೆಯುತ್ತಿವೆ. ಆದ್ದರಿಂದ ಮಕ್ಕಳ ಸಂರಕ್ಷಣೆಗೆ ಸೂಕ್ತ ತರಬೇತಿ ಮತ್ತು ಕೌಶಲ ಕಲಿಸಿಕೊಡುವುದು ಅನಿವಾರ್ಯ ಎಂದು ನುಡಿದರು.

ಶಿವಣ್ಣ  ಸ್ವಾಗತಿಸಿದರು. ಸವಿತಾ ವಂದಿಸಿದರು. ಕಾರ್ಯಕ್ರಮದಲ್ಲಿ ಶೇಖರ್, ಶಿವಣ್ಣ, ಸವಿತಾ, ಜಿಲ್ಲಾ ಸಮಗ್ರ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಇದ್ದರು.

**

ಕೆಲವು ಮಕ್ಕಳು ಹದಿಹರೆ ಯದಲ್ಲಿ ಪ್ರೀತಿ, ಪ್ರೇಮಕ್ಕೆ ಒಳ ಗಾಗಿ ಕಾಣೆ ಆಗುತ್ತಿದ್ದಾರೆ.  ಇವರೆಲ್ಲರೂ ಸುರಕ್ಷಿತವಾಗಿ ತಮ್ಮ ಕುಟುಂಬಗಳಿಗೆ ವಾಪಾಸ್ಸಾಗುತ್ತಾರೆ ಎಂಬ ನಂಬಿಕೆ ಇಲ್ಲ
-ಟಿ.ಪಾಪಾಬೋವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರ ಉಪ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.