ADVERTISEMENT

ಓದುವ ಹವ್ಯಾಸ ರೂಢಿಸಿಕೊಳ್ಳಿ

ವಿದ್ಯಾರ್ಥಿಗಳಿಗೆ ಶಂಭುನಾಥ ಸ್ವಾಮೀಜಿ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 8:21 IST
Last Updated 24 ಮಾರ್ಚ್ 2017, 8:21 IST

ಹಾಸನ: ವಿದ್ಯಾರ್ಥಿಗಳು ಓದುವ ಹವ್ಯಾಸ ರೂಢಿಸಿಕೊಂಡಾಗ ಮಾತ್ರ ಉತ್ತಮ ಜ್ಞಾನ ಸಂಪಾದಿಸಲು ಸಾಧ್ಯ ಎಂದು ಆದಿಚುಂಚನಗಿರಿ ಮಠದ ಶಂಭುನಾಥ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕಟ್ಟಾಯ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಸರಸ್ವತಿ ವಿಗ್ರಹ ಪ್ರತಿಷ್ಠಾಪನೆ, ಸರಸ್ವತಿ ಪೂಜಾ ಕಾರ್ಯಕ್ರಮ ಮತ್ತು ಗೌರವ ಸಮರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಜ್ಞಾನ ಪಡೆದಾಗ ಏನಾದರೂ ಸಾಧಿಸಬಹುದು. ಮನಸ್ಸನ್ನು ಕೇಂದ್ರೀಕರಿಸಿಕೊಂಡು, ಓದಿದ್ದನ್ನು ಅರ್ಥಮಾಡಿಕೊಳ್ಳುವ ಕಡೆಗೆ ವಿದ್ಯಾರ್ಥಿಗಳು ಗಮನ ನೀಡಬೇಕು. ಶಿಕ್ಷಕರು ಪಾಠ ಮಾಡುವ ಸಂದರ್ಭದಲ್ಲಿ ಮನಸ್ಸನ್ನು ವಿಚಲಿತಗೊಳಿಸದೆ ವಿಷಯವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ತಿಳಿಸಿದರು.

ಪರೀಕ್ಷೆಗಳಿಗೆ ಹೆದರದೆ, ಸವಾಲಾಗಿ ಸ್ವೀಕರಿಸಿ ಉತ್ತಮ ಅಂಕ ಗಳಿಸಬೇಕು.  ಶಾಲೆಗೆ ಹಾಗೂ ಪೋಷಕರಿಗೆ ಗೌರವ ತರುವ ಮೂಲಕ ಸನ್ಮಾರ್ಗದತ್ತ ನಡೆಯಬೇಕು ಎಂದರು.

ನಿವೃತ್ತ ಕೇಂದ್ರ ಸ್ಥಾನಿಕ ಅಧಿಕಾರಿ ಸುಬ್ಬರಾಯ ಕಾಮತ್ ಮಾತನಾಡಿ, ಜೀವನದಲ್ಲಿ ಏನಾದರೂ ಸಾಧಿಸ ಬೇಕೆಂಬ ಛಲವಿರಬೇಕು. ಗುರಿ ಮುಟ್ಟುವ ಕಡೆಗೆ ಶ್ರದ್ಧೆ ಹಾಗೂ ಶ್ರಮ ಹಾಕಬೇಕು. ಕೇವಲ ವಿದ್ಯೆ ಕಲಿತರೆ ಸಾಲದು, ಸಾಮಾಜಿಕ ಗುಣಗಳನ್ನು ಸಹ ಅಳವಡಿಸಿಕೊಳ್ಳಬೇಕು ಎಂದರು.

ಶಾಲೆಗೆ ಸರಸ್ವತಿ ವಿಗ್ರಹವನ್ನು ಕೊಡುಗೆ ನೀಡಿದ ನಿವೃತ್ತ ಕಂದಾಯ ಅಧಿಕಾರಿ ಬೈರೋಜಿ ರಾವ್, ಎಸ್.ಆರ್.ಎಸ್.ರಾಜಣ್ಣ, ಜಿ.ಪಂ ಮಾಜಿ ಸದಸ್ಯ ಎನ್.ಸಿ. ನಾರಾಯಣಗೌಡ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ಕೆ.ಚಂದ್ರಶೇಖರ್ ವಹಿಸಿದ್ದರು. ಶಾಲಾ ಮುಖ್ಯಶಿಕ್ಷಕ ವಿಶ್ವನಾಥರಾವ್, ಗುರುರಾಜ್‌ ಹೆಬ್ಬಾರ್, ನಾಗಮ್ಮ ನಾರಾಯಣಗೌಡ, ಕಟ್ಟಾಯ ಶಿವಕುಮಾರ್, ಕೆ.ಮಂಜೇಗೌಡ, ಕೆ.ಎಲ್.ಗಣೇಶ್, ಕೆ.ಶ್ರೀಧರ್, ಜಿ.ಕೆ.ಕುಮಾರ್‌ ಸ್ವಾಮಿ, ಡಿ.ಮಲ್ಲೇಶ್, ಶಿಕ್ಷಕ ಡಿ.ಎಸ್.ಬಸವರಾಜಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.