ADVERTISEMENT

ಕಲಾಕ್ಷೇತ್ರ 2 ತಿಂಗಳು ಬಂದ್‌

ನವೀಕರಣ ಕಾಮಗಾರಿಗೆ ₹ 20 ಲಕ್ಷ ಬಿಡುಗಡೆ

ಕೆ.ಎಸ್.ಸುನಿಲ್
Published 29 ಆಗಸ್ಟ್ 2016, 11:18 IST
Last Updated 29 ಆಗಸ್ಟ್ 2016, 11:18 IST
ಹಾಸನ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನವೀಕರಣ ಕಾರ್ಯ ಕೈಗೊಳ್ಳಲಾಗಿದೆ
ಹಾಸನ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನವೀಕರಣ ಕಾರ್ಯ ಕೈಗೊಳ್ಳಲಾಗಿದೆ   

ಹಾಸನ: ರಂಗಭೂಮಿ ವೇದಿಕೆ ಆಗಿರುವ ನಗರದ ಹಾಸನಾಂಬ ಕಲಾಕ್ಷೇತ್ರ ಎರಡು ತಿಂಗಳು ಬಂದ್‌ ಮಾಡಲಾಗಿದೆ. 1998ರಲ್ಲಿ ನಿರ್ಮಾಣಗೊಂಡ ಕಲಾಕ್ಷೇತ್ರದ ನವೀಕರಣ ಕಾಮಗಾರಿ ಕೈಗೊಂಡಿರುವ ಕಾರಣ ಶಾಲಾ–ಕಾಲೇಜು, ಸಂಘ, ಸಂಸ್ಥೆಗಳು ಹಾಗೂ ಕಲಾವಿದರಿಗೆ ಕಾರ್ಯಕ್ರಮ ನಡೆಸಲು ಅನುಮತಿ ನೀಡುತ್ತಿಲ್ಲ. ಆದರೆ, ಪೂರ್ವ ನಿಗದಿ ಸರ್ಕಾರಿ ಕಾರ್ಯಕ್ರಮಗಳಿಗೆ ಮಾತ್ರ ನವೀಕರಣದ ಕೆಲಸ ನಡುವೆಯೂ ವೇದಿಕೆ ಬಳಸಲು ಅನುಮತಿ ನೀಡಲಾಗಿದೆ. 

ಆಗಾಗ್ಗೆ ಕೈ ಕೊಡುವ ವಿದ್ಯುತ್‌, ಮುರಿದ ಆಸನಗಳು, ಕುಡಿಯುವ ನೀರಿಲ್ಲ, ತಾಲೀಮು ಕೊಠಡಿ ಹಾಗೂ ಸುಸಜ್ಜಿತ ಶೌಚಾಲಯ ಇಲ್ಲ. ಅಲ್ಲದೇ ಕಲಾಕ್ಷೇತ್ರದ ಸುತ್ತಲಿನ ಪ್ರದೇಶದಲ್ಲಿ ಗಿಡ, ಗಂಟಿ ಬೆಳೆದು ಕ್ರಿಮಿಕೀಟಗಳ ಆಶ್ರಯತಾಣವಾಗಿದೆ ಎಂದು ಕಲಾವಿದರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಗಮನಕ್ಕೆ ತಂದಿದ್ದರು.

ಈ ಸಂಬಂಧ ಕನ್ನಡ, ಸಂಸ್ಕೃತಿ ಇಲಾಖೆಯು ನವೀಕರಣ ಕಾಮಗಾರಿಗಾಗಿ ₹ 70 ಲಕ್ಷ ಪ್ರಸ್ತಾವ ಸಲ್ಲಿಸಿತ್ತು. ಮೊದಲ ಹಂತದಲ್ಲಿ ₹ 20 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ಬಟನ್‌ ವ್ಯವಸ್ಥೆ ಹೊಂದಿರುವ ಬೃಹತ್‌ ಪರದೆ ಅಳವಡಿಕೆ, ಕಲಾ ಗ್ಯಾಲರಿ, ಧ್ವನಿ ಮತ್ತು ಬೆಳಕಿನ ಕಾಮಗಾರಿ ಕೈಗೊಳ್ಳಲಾಗಿದೆ.

ಅಲ್ಲದೇ ಕಲಾಕ್ಷೇತ್ರದ ಆದಾಯವೂ ವರ್ಷದಿಂದ ವಷಕ್ಕೆ ಕಡಿಮೆ ಆಗುತ್ತಿದೆ. ಇಲಾಖೆ ಅಂಕಿ ಅಂಶ ಪ್ರಕಾರ, 2013–14ರಲ್ಲಿ ₹ 6,63,350 ಲಕ್ಷ ಸಂಗ್ರಹವಾಗಿದ್ದರೆ, 2014–15ನೇ ಸಾಲಿನಲ್ಲಿ ₹ 6,22,800 ಸಂಗ್ರಹವಾಗಿದೆ.

ನಾಟಕ, ಕವಿಗೋಷ್ಠಿ, ಶಾಲಾ ವಾರ್ಷಿಕೋತ್ಸವ, ಧಾರ್ಮಿಕ ಕಾರ್ಯಕ್ರಮ, ಸಮ್ಮೇಳನಗಳಿಗೆ ಪ್ರತ್ಯೇಕ ಶುಲ್ಕ ನಿಗದಿ ಪಡಿಸಲಾಗಿದೆ. ಆದರೆ ಇಲಾಖೆ ಜಯಂತಿಗಳು, ನಗರಸಭೆ ಕಾರ್ಯಕ್ರಮ, ಚುನಾವಣೆ, ಜಿಲ್ಲಾಧಿಕಾರಿ ಕಚೇರಿ ಹಾಗೂ ಕೋರ್ಟ್‌ ಕಾರ್ಯಕ್ರಮಗಳಿಗೆ ಉಚಿತವಾಗಿ ಭವನ ನೀಡಲಾಗುತ್ತಿದೆ.

‘ವೇದಿಕೆಯ ಪರದೆ ಹಾಗೂ ಇತರೆ ಸಾಮಗ್ರಿಗಳು ಹಾಳಾಗಿದ್ದು, ಹೊಸದಾಗಿ ಖರೀದಿಸಬೇಕು. ಮುರಿದ ಆಸನಗಳ ದುರಸ್ತಿಯಾಗಬೇಕು. ಸರಿಯಾದ ಧ್ವನಿ ಮತ್ತು ಬೆಳಕು ವ್ಯವಸ್ಥೆ ಹೊಂದಿರಬೇಕು ಹಾಗೂ ಮೂರು ತಾಲೀಮು ಕೊಠಡಿ ನಿರ್ಮಿಸಬೇಕು’ ಎಂದು ಕಲಾವಿದ ಗ್ಯಾರಂಟಿ ರಾಮಣ್ಣ ಆಗ್ರಹಿಸಿದರು.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ.ಮೂರ್ತ್ಯಪ್ಪ, ‘ಕಲಾಕ್ಷೇತ್ರ ನವೀಕರಣಕ್ಕಾಗಿ ಸದ್ಯ ₹ 20 ಲಕ್ಷ ಅನುದಾನ ಬಿಡುಗಡೆ ಆಗಿದೆ. ಕೆಲಸ ಕೈಗೊಂಡಿ ರುವುದರಿಂದ ಎರಡು ತಿಂಗಳು ಕಲಾಕ್ಷೇತ್ರ ಬಂದ್‌ ಮಾಡಲಾಗಿದೆ. ಆದರೆ ಪೂರ್ವನಿಗದಿತ ಸರ್ಕಾರಿ ಕಾರ್ಯಕ್ರಮಗಳಿಗೆ ತಾತ್ಕಲಿಕವಾಗಿ ಬೃಹತ್‌ ಪರದೆ ನಿರ್ಮಿಸಿ ಅನುಮತಿ ನೀಡಲಾಗಿದೆ. ಇತರೆ ಸಂಘ, ಸಂಸ್ಥೆಗಳು, ಕಲಾವಿದರಿಗೆ ಕೆಲಸ ಮುಗಿಯವವರೆಗೂ ಅವಕಾಶ ನೀಡುವುದಿಲ್ಲ’ ಎಂದು ತಿಳಿಸಿದರು.

‘ಕಲಾಕ್ಷೇತ್ರಕ್ಕೆ ಸೌಲಭ್ಯ ಕಲ್ಪಿಸುವಂತೆ ಕಲಾವಿದರು ಒತ್ತಾಯಿಸಿದ್ದಾರೆ. ವರ್ಷದ ಹಿಂದೆಯೇ  ಅನುದಾನ ಬಿಡುಗಡೆ ಮಾಡುವಂತೆ ಪ್ರಸ್ತಾವ ಸಲ್ಲಿಸಲಾಗಿತ್ತು. ಹಂತ ಹಂತವಾಗಿ ಸೌಲಭ್ಯ ಕಲ್ಪಿಸಲಾಗುವುದು. ಇಲಾಖೆ ನಿಗದಿ ಪಡಿಸಿರುವ ಹಳೆಯ ಬಾಡಿಗೆ ಶುಲ್ಕವನ್ನೇ ಈಗಲೂ ಮುಂದುವರಿಸಿಕೊಂಡು ಬಂದಿರುವ ಕಾರಣ ಆದಾಯದಲ್ಲಿ ಕುಸಿತವಾಗಿದೆ.ದರ ಪರಿಷ್ಕರಣೆ ಆಗಬೇಕು’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.