ADVERTISEMENT

ಕುಡಿಯುವ ನೀರಿಗೆ ಮೊದಲ ಆದ್ಯತೆ

ಬರ ಪರಿಸ್ಥಿತಿ ಸಮರ್ಪಕ ನಿರ್ವಹಣೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 9:20 IST
Last Updated 16 ಫೆಬ್ರುವರಿ 2017, 9:20 IST
ಹಾಸನ: ಜಿಲ್ಲೆಯಲ್ಲಿ ಬರ ಮುಂದುವರಿದಿದ್ದು ಕುಡಿಯುವ ನೀರು, ದನಕರುಗಳಿಗೆ ಮೇವು ಪೂರೈಕೆಗೆ ಆದ್ಯತೆ ಮೇರೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
 
ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಈಗಾಗಲೇ ಆರ್ಥಿಕ ವರ್ಷ ಮುಕ್ತಾಯವಾಗುತ್ತಿದ್ದು, ಸಂಪೂರ್ಣ ಅನುದಾನ ಬಳಸಿಕೊಳ್ಳಲು ಗಮನಹರಿಸಬೇಕು ಎಂದು ಸೂಚಿಸಿದರು. ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಸದಸ್ಯರೆಲ್ಲ ಒಕ್ಕೊರಲಿನಿಂದ ಒತ್ತಾಯಿಸಿದರು.
 
ಸಿಇಒ ವೆಂಕಟೇಶ್‌ಕುಮಾರ್‌ ಮಾತನಾಡಿ, ಆಯಾಯ ಭಾಗದ ಎಂಜಿನಿಯರ್‌ಗಳು ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಆದ್ಯತೆಯ ಮೇಲೆ ಕೆಲಸ ನಿರ್ವಹಿಸಬೇಕು. ಹಳ್ಳಿಗಳಲ್ಲಿರುವ ಜನಸಂಖ್ಯೆ, ಜಾನುವಾರು ಸಂಖ್ಯೆ, ಕೊಳವೆ ಬಾವಿಗಳ ಸಂಖ್ಯೆ ಅವುಗಳ ಸ್ಥ್ಿತಿಗತಿ, ಅಗತ್ಯ ನೀರಿನ ಪ್ರಮಾಣ ಕುರಿತು 3 ದಿನಗಳೊಳಗೆ ವರದಿ ನೀಡಬೇಕು ಎಂದು ತಿಳಿಸಿದರು. 
 
14ನೇ ಹಣಕಾಸಿನಲ್ಲಿ ಕುಡಿಯುವ ನೀರಿನ ಪೂರೈಕೆಗೆ ಗ್ರಾಮ ಪಂಚಾಯಿತಿಗಳಲ್ಲಿ ಸಾಕಷ್ಟು ಅನುದಾನ ಲಭ್ಯವಿದೆ ಹಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು. ಶಾಸಕರ ನೇತೃತ್ವದ ವಿಶೇಷ ಕಾರ್ಯಪಡೆಗೆ ಜಿಲ್ಲಾ ಪಂಚಾಯಿತಿ ಸದಸ್ಯರನ್ನು ಸೇರ್ಪಡೆಗೊಳಿಸಬೇಕು ಎಂದು ಉಪಾಧ್ಯಕ್ಷ ಶ್ರೀನಿವಾಸ್ ಒತ್ತಾಯಿಸಿದರು.
 
ಇದಕ್ಕೆ ಶ್ವೇತಾ ಪ್ರತಿಕ್ರಿಯಿಸಿ, ಶಿಷ್ಟಾಚಾರ ಉಲ್ಲಂಘನೆ ಒಂದು ಗಂಭೀರ ಲೋಪ. ಈಗಾಗಲೇ ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದರೂ ಇದನ್ನು ಪಾಲಿಸದಿದ್ದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. 
 
ಸ್ಥಳೀಯವಾಗಿ ನಡೆಯುವ ಕಾರ್ಯಕ್ರಮಗಳಿಗೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರನ್ನು ಆಹ್ವಾನಿಸಬೇಕು. ಈ ಬಗ್ಗೆ ಎಲ್ಲ ಅಧಿಕಾರಿಗಳು ಸುತ್ತೋಲೆ ಪ್ರತಿಯನ್ನು ರವಾನಿಸಬೇಕು. ಅಲ್ಲದೆ , ಸಭೆಗೆ ಪೂರ್ವಾನುಮತಿ ಇಲ್ಲದೆ ಗೈರು ಹಾಜರಾಗಿರುವ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಉತ್ತರ ಪಡೆಯುವಂತೆ ಸೂಚಿಸಿದರು.
 
ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೌಲಭ್ಯಗಳು ಸಿಗುತ್ತಿಲ್ಲ. ವೈದ್ಯರ ಕೊರತೆ, ಸಾಧನ ಸಲಕರಣೆ ಕೊರತೆ ಕಾಡುತ್ತಿದೆ ಎಂದು ಉಪಾಧ್ಯಕ್ಷ ಶ್ರೀನಿವಾಸ್ ಸಭೆ ಗಮನಕ್ಕೆ ತಂದರು. ಶ್ವೇತಾ ದೇವರಾಜ್ ಪ್ರತಿಕ್ರಿಯಿಸಿ, ಅಧಿಕಾರಿಗಳು ಸಭೆಗೆ ನಿಖರ ಮಾಹಿತಿ ನೀಡುವಂತೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. 
 
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್ ಮಾತನಾಡಿ, ಅಗತ್ಯವಿರುವ ಹೋಬಳಿ ಮಟ್ಟದ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಎಕ್ಸ್‌ರೇ ಯಂತ್ರಗಳನ್ನು ಒದಗಿಸಲಾಗುವುದು. ಖಾಲಿ ಇರುವ ವೈದ್ಯರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು. 
 
ಶಾಸಕ ವೈ.ಎನ್.ರುದ್ರೇಶಗೌಡ ಮಾತನಾಡಿ, ಶಾಸಕರ ನಿಧಿಯಿಂದ ಶಾಲಾ ಶೌಚಾಲಯಗಳ ಸುಧಾರಣೆಗೆ ₹ 40 ಲಕ್ಷ ನೀಡಲಾಗಿದೆ ಎಂದರು. ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುಪ್ರದೀಪ್, ಸದಸ್ಯರಾದ  ಪಟೇಲ್ ಶಿವಪ್ಪ, ರೇವಣ್ಣ, ಹನುಮೇಗೌಡ, ಸಿ.ಮಂಜೇಗೌಡ, ಲೋಕೇಶ್, ಲತಾ ದಿಲೀಪ್ ಕುಮಾರ್, ಸೈಯದ್ ತೌಫಿಕ್, ಬಿ.ಎಂ.ರವಿ ಇದ್ದರು. 
 
ತರಬೇತಿ ಅಗತ್ಯ
ಹಾಸನ:
ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಸಾಧನೆ ಆಗಬೇಕು. ಕಟ್ಟಡಗಳ ದುರಸ್ತಿ, ಶೌಚಾಲಯ ನಿರ್ಮಾಣ, ನಿರ್ವಹಣೆ ಬಗ್ಗೆಯೂ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕು. ಶಿಕ್ಷಕರಲ್ಲಿ ಅರ್ಪಣಾ ಮನೋಭಾವ ಬರಬೇಕು. ಆ ಬಗ್ಗೆ ಸೂಕ್ತ ನಿರ್ದೇಶನ ಹಾಗೂ ತರಬೇತಿ ನೀಡುವ ಅಗತ್ಯವಿದೆ ಎಂದು ಜಿ.ಪಂ. ಸಿಇಒ ವೆಂಕಟೇಶ್ ಕುಮಾರ್ ಹೇಳಿದರು
 
* ನೀರುಗಂಟಿಗಳ ಬಾಕಿ ವೇತನವನ್ನು ಸರ್ಕಾರದ ಅನುದಾನ, ತೆರಿಗೆ ಸಂಗ್ರಹಣೆ ಮತ್ತು  ಆದಾಯ ಮೂಲಗಳಿಂದ ಗ್ರಾಮ ಪಂಚಾಯಿತಿಗಳು ಪೂರೈಸಬೇಕು
ವೆಂಕಟೇಶ್‌ಕುಮಾರ್, ಸಿಇಒ, ಜಿಲ್ಲಾ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.