ADVERTISEMENT

ಕುರಿ ಸಾಕಣೆಗೆ ವೈಜ್ಞಾನಿಕ, ತಾಂತ್ರಿಕ ನೆರವು

₹ 3 ಕೋಟಿ ವೆಚ್ಚದಲ್ಲಿ ಕುರಿ, ಮೇಕೆ ವೀರ್ಯ ಸಂಕಲನಾ ಕೇಂದ್ರಕ್ಕೆ ಸಚಿವ ಮಂಜು ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 8:25 IST
Last Updated 18 ಫೆಬ್ರುವರಿ 2017, 8:25 IST
ಹಾಸನ: ಲಾಭದಾಯಕ ಕಸುಬಾಗಿ ಹೊರ ಹೊಮ್ಮಿರುವ ಕುರಿ ಸಾಕಣೆಗೆ ವೈಜ್ಞಾನಿಕ ಮತ್ತು ತಾಂತ್ರಿಕ  ನೆರವು ಒದಗಿಸುವ ಮೂಲಕ ಗ್ರಾಮೀಣ ಜನರ ಆರ್ಥಿಕ ಸಬಲೀಕರಣಕ್ಕೆ  ಪ್ರೋತ್ಸಾಹ ನೀಡಲಾಗುತ್ತಿದೆ. ಅದಕ್ಕೆ ಪೂರಕವಾಗಿ  ದೇಸಿ ಕುರಿ ಸಂವರ್ಧನಾ ಕೇಂದ್ರ ಹಾಗೂ ಕುರಿ ಮೇಕೆ ವೀರ್ಯ ಸಂಕಲನಾ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದು  ಸಚಿವ  ಎ.ಮಂಜು ತಿಳಿಸಿದರು.
 
ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಆಶ್ರಯದಲ್ಲಿ ಶುಕ್ರವಾರ ಹಾಸನ ತಾಲ್ಲೂಕಿನ ಅರಸೀಕೆರೆ  ರಸ್ತೆಯಲ್ಲಿರುವ ಕೋರವಂಗಲ ರೇಷ್ಮೆ  ಕೃಷಿ ತರಬೇತಿ ಕೇಂದ್ರದಲ್ಲಿ  ದೇಶಿಯ ಕುರಿ ತಳಿ ಸಂರಕ್ಷಣಾ ಯೋಜನೆಯಡಿ ಹಾಸನ ಕುರಿ ತಳಿ ಸಂವರ್ಧನಾ ಕೇಂದ್ರ ಮತ್ತು  ಕುರಿ, ಮೇಕೆ ವೀರ್ಯ ಸಂಕಲನಾ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ   ಮಾತನಾಡಿದರು.
 
ಕೋರವಂಗಲದಲ್ಲಿ ಒಟ್ಟಾರೆ ₹ 8 ಕೋಟಿ  ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಹಾಸನ ತಳಿಯ ಕುರಿ ಸಂವರ್ಧನೆಯಿಂದ ಸ್ಥಳೀಯ ತಳಿ ಉಳಿಸಿಕೊಳ್ಳುವುದರ ಜೊತೆಗೆ ಅವುಗಳ ಸಾಕಾಣಿಕೆಗೆ ಪ್ರೋತ್ಸಾಹ ನೀಡಲಾಗುವುದು. ₹ 3 ಕೋಟಿ ವೆಚ್ಚದಲ್ಲಿ ರಾಜ್ಯದಲ್ಲಿ ಇದೇ ಮೋದಲ ಬಾರಿಗೆ ಕುರಿ,  ಮೇಕೆ ವೀರ್ಯ ಸಂಕಲನಾ ಕೇಂದ್ರ ತೆರೆಯಲಾಗುತ್ತಿದೆ. ಇದರಿಂದ ಕುರಿ- ಮೇಕೆಗಳ ಉತ್ಪಾದನಾ ಪ್ರಮಾಣವನ್ನು ಅಗತ್ಯಕ್ಕನುಗುಣವಾಗಿ ಹೆಚ್ಚಿಸಿಕೊಳ್ಳಬಹುದು  ಎಂದು ಸಚಿವರು ಹೇಳಿದರು.
 
ಅತೀ ಹೆಚ್ಚು ಕುರಿ ಹೊಂದಿರುವ ದೇಶದ ಮೂರನೇ ರಾಜ್ಯ ಕರ್ನಾಟಕ.    ರಾಜ್ಯದಲ್ಲಿ 5 ಸಾವಿರ ಟನ್ ಗಳಷ್ಟು ಮೇಕೆ ಮತ್ತು ಕುರಿ  ಮಾಂಸ ಉತ್ಪತ್ತಿಯಾಗುತ್ತಿದ್ದು , ಸುಮಾರು ₹ 1,810 ಕೋಟಿ ವಹಿವಾಟು ನಡೆಯುತ್ತಿದೆ. ಭಾರತೀಯ ಆರೋಗ್ಯ ಸಂಶೋಧನಾ ಅನು ಸಂಧಾನವು ಪ್ರತಿ ಮನುಷ್ಯನಿಗೆ ವಾರ್ಷಿಕ 11 ಕಿಲೋ ಮಾಂಸ ಸೇವನೆ ಅಗತ್ಯ ಎಂದು ಶಿಫಾರಸು ಮಾಡಿದೆ. ಆದರೆ ಈಗ ಕೇವಲ 2.5 ಕಿಲೋದಷ್ಟು ಮಾತ್ರ ಲಭ್ಯ ಉತ್ಪಾದನೆ ಇದೆ ಎಂದು ವಿವರಿಸಿದರು.
 
ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ರಾಜ್ಯ ಜಾನುವಾರು ಸಂಸ್ಥೆಯ ಹೆಚ್ಚುವರಿ ನಿರ್ದೇಶಕ ಮತ್ತು ಪ್ರಾಯೋಜನಾ ನಿರ್ದೇಶಕ ಡಾ.ಎಂ.ಟಿ ಮಂಜುನಾಥ್  ಮಾತನಾಡಿದರು. ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಟಿ ಶಿವರಾಮ ಭಟ್ ಅವರು ದನಗಳಂತೆ ಕುರಿ ಮೇಕೆಗಳಿಗೂ  ಕೃತಕ ಗರ್ಭಧಾರಣೆ ಸಾಧ್ಯವಾಗಲಿದೆ ಎಂದರು. 
 
ಜಿ.ಪಂ. ಅಧ್ಯಕ್ಷೆ  ಶ್ವೇತಾ ದೇವರಾಜ್, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ. ಕೃಷ್ಣ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ  ಅಧ್ಯಕ್ಷ ಎಚ್.ಪಿ ಮೋಹನ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೃಷ್ಣಕುಮಾರ್, ಪಶುಪಾಲನಾ ಇಲಾಖೆ ಜಂಟಿ ನಿರ್ದೇಶಕ ಡಾ. ದೇವದಾಸ್, ತಾ.ಪಂ. ಉಪಾಧ್ಯಕ್ಷ ನಾಗರತ್ನ, ಲೋಕೇಶ್, ಜಿಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿಳಿ ಚೌಡಯ್ಯ,  ಮಂಗಳ ವೆಂಕಟೇಶ್, ಉಪಾಧ್ಯಕ್ಷ ಹರೀಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.