ADVERTISEMENT

ಕೂಪನ್‌್ ವ್ಯವಸ್ಥೆಯ ಪಡಿತರ ಬೇಡ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 6:44 IST
Last Updated 12 ಜನವರಿ 2017, 6:44 IST

ಹಾಸನ: ಪಡಿತರ ವಿತರಣೆಯಲ್ಲಿ ಆಗುವ ಭ್ರಷ್ಟಾಚಾರ ನಿಯಂತ್ರಿಸಲು ಜಾರಿಗೊಳಿಸಿ ರುವ ಕೂಪನ್ ವ್ಯವಸ್ಥೆ ಅತಾರ್ಕಿಕವಾ ಗಿದ್ದು, ರಾಜ್ಯ ಸರ್ಕಾರ ಕೂಡಲೇ ಯೋಜನೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯ ಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕೂಪನ್ ವ್ಯವಸ್ಥೆ ಯಾವುದೇ ದೂರದೃಷ್ಟಿ ಹೊಂದಿಲ್ಲ. ಕೇವಲ ಪ್ರಚಾರಕ್ಕಾಗಿ ಮರುಳಾಗಿರುವ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಭ್ರಷ್ಟರ ಮೂಲ ಹುಡುಕಿ ಆ ಕ್ಷೇತ್ರದಲ್ಲಿ ಬದಲಾವಣೆಗೆ ಪ್ರಯತ್ನಿಸಬೇಕು. ಇಂಥ ಅಸಂಬದ್ಧ ವ್ಯವಸ್ಥೆಯಿಂದ ಬಡಜನರಿಗೆ ತೊಂದರೆ ನೀಡುವುದು ಬೇಡ. ಇದರಿಂದ ಫಲಾನುಭವಿಗಳಿಗೆ ತೊಂದರೆಯಾ ಗುತ್ತಿದೆ. ಪ್ರಾರಂಭಿಕವಾಗಿ ಮೂರು ಜಿಲ್ಲೆಗಳಲ್ಲಿ ಈ ಯೋಜನೆ ಚಾಲ್ತಿಯಲ್ಲಿದೆ. ಇದರಿಂದ ಆಗುತ್ತಿರುವ ತೊಂದರೆ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಅನ್ನಭಾಗ್ಯದ ಹೆಸರಿನಲ್ಲಿ ಉಚಿತ ಅಕ್ಕಿ ನೀಡುವುದಾಗಿ ಹೇಳಿಕೊಂಡು ಮತ್ತೊಂದು ಬದಿಯಿಂದ ಬಡವರ ಹೊಟ್ಟೆ ಮೇಲೆ ಹೊಡೆಯು ತ್ತಿದೆ. ರಾಜ್ಯದ ಬಹುಪಾಲು ಅನಕ್ಷರಸ್ಥ ನಾಗರಿಕರು ತತ್ತರಿಸಿದ್ದಾರೆ. ಆಹಾರ ಇಲಾಖೆ ಯಾವುದೇ ಹೊಸ ನಿಯಮ ಜಾರಿಗೊಳಿಸಿದರೂ ವಿಫಲವಾಗುತ್ತಿವೆ. ಬಯೋಮೆಟ್ರಿಕ್ ವ್ಯವಸ್ಥೆಯಿಂದ ಸಾಕಷ್ಟು ಜನರ ಹೆಬ್ಬೆರಳು ಗುರುತು ಉಜ್ಜಿರುವುದರಿಂದ ಬಯೋಮೆಟ್ರಿಕ್ ಯಂತ್ರ ಅದನ್ನು ತಿರಸ್ಕರಿಸುತ್ತದೆ. ಇದರಿಂದ ಪಡಿತರ ಇಲ್ಲದೆ ಉಪವಾಸ ಬದುಕಬೇಕಾದ ಹೀನಾಯ ಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.

ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಯು.ಟಿ.ಖಾದರ್ ಅವರು ಯಾವುದೇ ಯೋಜನೆ ಘೋಷಿಸುವ ಮೊದಲು ಅದರ ಕುರಿತು ಪರಾಮರ್ಶೆ ನಡೆಸಬೇಕು. ಅರ್ಥಹೀನ ಯೋಜನೆಗಳ ಮೂಲಕ ಜನರ ದಿಕ್ಕು ತಪ್ಪಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ದಲಿತ ವಿಮೋಚನಾ ಹಾಗೂ ಮಾನವ ಹಕ್ಕುಗಳ ವೇದಿಕೆ ಸಂಚಾಲಕ ಮರಿ ಜೋಸೆಫ್, ಸಮೀರ್ ಅಹ್ಮದ್, ಯಾಸೀನ್ ಷರೀಪ್, ಎಸ್. ಮಲ್ಲಿಕ್, ಎ.ಪಿ. ಅಹ್ಮದ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.