ADVERTISEMENT

ಕೃಷಿ ಸಮುದಾಯಕ್ಕೆ ಸಕಾಲದಲ್ಲಿ ಮಾಹಿತಿ ಒದಗಿಸಿ

ಜಿಲ್ಲಾ ಪಂಚಾಯಿತಿ: ಅಭಿವೃದ್ಧಿ, ಸಮನ್ವಯ ಸಮಿತಿ ಸಭೆಯಲ್ಲಿ ಸಂಸದ ದೇವೇಗೌಡ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 10:13 IST
Last Updated 13 ಜುಲೈ 2017, 10:13 IST

ಹಾಸನ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಜಾರಿಗೊಳ್ಳುತ್ತಿರುವ ಪ್ರಧಾನ ಮಂತ್ರಿ  ಫಸಲ್ ಬಿಮಾ ಯೋಜನೆಯಿಂದ ರೈತರಿಗೆ ಅನುಕೂಲವಾಗಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳ ವಿಮಾ ಕಂಪೆನಿ, ಜಿಲ್ಲಾಡಳಿತ ಕೃಷಿಕ ಸಮುದಾಯಕ್ಕೆ ಸಕಾಲದಲ್ಲಿ  ಮಾಹಿತಿ ಒದಗಿಸಿ ಪೂರಕ ನೆರವು ನೀಡಬೇಕು ಎಂದು  ಸಂಸದ ಎಚ್‌.ಡಿ.  ದೇವೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆಗಾಗಿ ನಡೆದ ಜಿಲ್ಲಾ ಅಭಿವೃದ್ಧಿ, ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆ ಆಶ್ರಿತ ಕೆಲವು ಬೆಳೆಗಳಿಗೆ ವಿಮಾ ಕಂತು ಪಾವತಿಸಲು ಜುಲೈ 15 ರ ಗಡುವು ನಿಗದಿ ಪಡಿಸಲಾಗಿದೆ.

ಕಾಲಾವಕಾಶ ಕಡಿಮೆ ಇರುವುದರಿಂದ ರೈತರಿಗೆ ಅರಿವಿನ ಕೊರತೆ, ದಾಖಲಾತಿ ಹೊಂದಿಸುವ ಸಮಸ್ಯೆ ಇದೆ. ಬೆಳೆಯನ್ನು ನಮೂದಿಸಿರುವ ಗಣಕೀಕೃತ ಆರ್.ಟಿ.ಸಿಗಳನ್ನು ಪಡೆಯಲು ರೈತರು ಮಧ್ಯರಾತ್ರಿ 3 ಗಂಟೆಯವರೆಗೂ ಕಾಯುವಂತಾಗಿದೆ. ಹಾಗಾಗಿ ಈ ಅವಧಿ ವಿಸ್ತರಿಸಬೇಕು ಮತ್ತು ಆರ್‌ಟಿಸಿ ನೀಡಲು ಇರುವ ಮೂಲ ಸೌಕರ್ಯ  ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಎಚ್.ಡಿ. ರೇವಣ್ಣ, ಎಚ್.ಎಸ್.ಪ್ರಕಾಶ್, ಎಚ್.ಕೆ. ಕುಮಾರಸ್ವಾಮಿ, ಸಿ.ಎನ್. ಬಾಲಕೃಷ್ಣ ಅವರು ಫಸಲ್ ಭೀಮಾ ಯೋಜನೆ ಜಾರಿಯಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಂಸದರ ಗಮನ ಸೆಳೆದು ವಿಸ್ತೃತ ಚರ್ಚೆಯಲ್ಲಿ ಪಾಲ್ಗೊಂಡರು.

ದೇವೇಗೌಡರು ಮಾತನಾಡಿ, ‘ಈ ಸಂಬಂಧ ಸರ್ಕಾರದ ಮಟ್ಟದಲ್ಲಿ ತೀರ್ಮಾನ ಆಗಬೇಕು. ಇದಕ್ಕೆ ಜಿಲ್ಲಾಡಳಿತ ಈಗಾಗಲೇ ಪ್ರಸ್ತಾವ ಸಲ್ಲಿಸಿದೆ. ವಿಮಾ ಕಂಪೆನಿ, ಬ್ಯಾಂಕ್‌ಗಳು ರೈತರಿಗೆ ನೆರವಾಗಬೇಕು. ಆರ್‌ಟಿಸಿ ವಿತರಣೆ ವಿಳಂಬದಲ್ಲಿ ಆಗುತ್ತಿರುವ ತೊಡಕನ್ನು ಕಂದಾಯ ಇಲಾಖೆ ಸರಿಪಡಿಸಬೇಕು ಎಂದರು. ಜಿಲ್ಲಾಧಿಕಾರಿ ವಿ.ಚೈತ್ರ ಅವರು ಯೋಜನೆ ಅನುಷ್ಠಾನಕ್ಕೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.

ಜಿಲ್ಲೆಯಲ್ಲಿ ಬಾಕಿ ಉಳಿದಿರುವ ರೈಲ್ವೆ ಯೋಜನೆಗಳ ಅನುಷ್ಟಾನಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಬೇಗ ಮುಗಿಸಿ ಎಂದು ವಿಶೇಷ ಭೂಸ್ವಾಧೀನ ಅಧಿಕಾರಿಗಳಿಗೆ ಸೂಚನೆ ನೀಡಿದ ಗೌಡರು,  ರೈಲ್ವೆ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಬೇಕು. ನನೆಗುದಿಗೆ ಬಿದ್ದಿರುವ ಮೇಲ್ಸೇತುವೆ, ಅಂಡರ್ ಪಾಸ್ ನಿರ್ಮಾಣವನ್ನು ಬೇಗನೆ ಮುಕ್ತಾಯ ಮಾಡಿ ಎಂದರು.

ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಒತ್ತಾಯಿಸಿದ ರೇವಣ್ಣ,   ಬೆಳ್ಳೂರು ಕ್ರಾಸ್‌ನಿಂದ ಸಕಲೇಶಪುರದ ವರೆಗೆ ನಡೆಯಲಿರುವ ಹಾಗೂ ಪ್ರಗತಿಯಲ್ಲಿರುವ ವಿವಿಧ ರಸ್ತೆ ಕಾಮಗಾರಿ ಬಗ್ಗೆ ಸಭೆ ಗಮನಕ್ಕೆ ತಂದರು. ಸಭೆಯಲ್ಲಿ ಜಿಲ್ಲೆಯಲ್ಲಿ ಮುಂದುವರೆದಿರುವ ಬರ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.

ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಎಚ್.ಎಸ್. ಪ್ರಕಾಶ್, ಅರಸೀಕೆರೆ ತಾಲ್ಲೂಕಿನಲ್ಲಿ 90 ದಿನಗಳ ನಂತರವೂ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿರುವ ಪ್ರಕ್ರಿಯೆಯಿಂದ ಸಮಸ್ಯೆ ಆಗುತ್ತಿದೆ. ಬಿಲ್ ಪಾವತಿ ವಿಳಂಬದಿಂದ ನೀರು ಸರಬರಾಜುದಾರರು ಹಿಂದೇಟು ಹಾಕುತ್ತಿದಾರೆ ಎಂದು  ಅಳಲು ತೋಡಿಕೊಂಡರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್ ಕುಮಾರ್ ಅವರು ಗ್ರಾಮೀಣ ಕುಡಿಯುವ ನೀರು ಕಾಮಗಾರಿಗಳು, ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡಿರುವ ಕ್ರಮಗಳ ಬಗ್ಗೆ ಸಭೆಯ ಗಮನಕ್ಕೆ ತಂದರು.

***

ರಸ್ತೆ ಕಾಮಗಾರಿ ಪೂರ್ಣಗೊಳಿಸಿ

ಹಾಸನ: ಶ್ರವಣಬೆಳಗೊಳದಲ್ಲಿ 2018 ರ ಫೆಬ್ರವರಿಯಲ್ಲಿ ಮಹಾಮಸ್ತಕಾಭಿಷೇಕ ನಡೆಯುವುದರಿಂದ ಅಷ್ಟರೊಳಗಾಗಿ ಬಾಕಿ ಉಳಿದಿರುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ನವೀಕರಣ, ಸಂಪರ್ಕ ರಸ್ತೆಗಳ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಶಾಸಕ  ಸಿ.ಎನ್. ಬಾಲಕೃಷ್ಣ ಒತ್ತಾಯಿಸಿದರು.

***

15 ಲಕ್ಷ ತೆಂಗಿನ ಮರ ನಾಶ

ಹಾಸನ: ಅರಸೀಕೆರೆ ತಾಲ್ಲೂಕಿನಲ್ಲಿ ಸುಮಾರು 15 ಲಕ್ಷ ತೆಂಗಿನ ಮರಗಳು ನಾಶವಾಗಿವೆ.  ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಬರ ಪರಿಹಾರ ನೀಡುವ ಸಂದರ್ಭ ಅತಿ ಹೆಚ್ಚು ಸಂಕಷ್ಟ ಎದುರಿಸುತ್ತಿರುವ ಅರಸೀಕೆರೆ ತಾಲ್ಲೂಕನ್ನು ಪ್ರತ್ಯೇಕವಾಗಿ ಪರಿಗಣಿಸಿ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಮನವಿ ಮಾಡಿದರು.

***

ದನ ಕಾಯೋಕೆ ಕೆಡಿಪಿ ಮೀಟಿಂಗ್ ಮಾಡಬೇಕಾ?

ಹಾಸನ: ‘ಯಾವನಾದ್ರೂ ಮಂತ್ರಿ ಅಂತಾನ... ದನ ಕಾಯೋಕೆ ಕೆಡಿಪಿ ಮೀಟಿಂಗ್ ಮಾಡಬೇಕಾ..? ಕುಡಿಯುವ ನೀರು ಸರಬರಾಜಿನಲ್ಲಿನ ತಾರತಮ್ಯ ಕುರಿತು ಜೆಡಿಎಸ್‌ ಶಾಸಕರು ಸಭೆಯಲ್ಲಿ ಗೌಡರ ಗಮನಕ್ಕೆ ತಂದಾಗ ಮೇಲಿನಂತೆ ಆಕ್ರೋಶ ವ್ಯಕ್ತಪಡಿಸಿದರು.

‘ಸಭೆಯಲ್ಲಿ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸಬೇಕು. ಸಿದ್ದರಾಮಯ್ಯ ಕಾವೇರಿ ಉಳಿಸೋಕೆ ನಮ್ಮ ಮನೆ ಬಾಗಿಲಿಗೆ ಬಂದಿದ್ದರು. ಸಿ.ಎಂ ಹೊಗಳೋಕೆ ಅವರ ಮನೆ ಬಾಗಿಲಿಗೆ ನಾನು ಹೋಗಿರಲಿಲ್ಲ. ಆಮರಾಣಾಂತ ಉಪವಾಸ ಮಾಡಲು ಅವರ ಮನೆ ಮುಂದೆ ಹೋಗಿದ್ದೆ’ ಎಂದು ದೇವೇಗೌಡರು, ಸಚಿವ ಎ.ಮಂಜು ಮತ್ತು ಮುಖ್ಯಮಂತ್ರಿ ವಿರುದ್ಧ ಗರಂ ಆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.