ADVERTISEMENT

ಕೆರೆಯಲ್ಲಿ ಹೂಳು ತೆಗೆದರೆ ಅಂತರ್ಜಲ ವೃದ್ಧಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2017, 5:57 IST
Last Updated 12 ಜೂನ್ 2017, 5:57 IST

ಚನ್ನರಾಯಪಟ್ಟಣ: ಕಲ್ಯಾಣಿ, ಕೆರೆ, ಕಟ್ಟೆಗಳಲ್ಲಿ ಹೂಳು ಎತ್ತುವ ಮೂಲಕ ಅಂತರ್ಜಲ ವೃದ್ಧಿಸುವುದು ಹಸಿರು ಭೂಮಿ ಪ್ರತಿಷ್ಠಾಪನಾ ಸಂಸ್ಥೆಯ ಉದ್ದೇಶ ಎಂದು ಉಪವಿಭಾಗಾಧಿಕಾರಿ ಡಾ. ಎಚ್.ಎಲ್‌. ನಾಗರಾಜು ಹೇಳಿದರು. ಪಟ್ಟಣದಲ್ಲಿ ಹಸಿರುಭೂಮಿ ಪ್ರತಿಷ್ಠಾಪನಾ ಸಂಸ್ಥೆ, ಭೂಮಿ ಉಳಿಸಿ ಆಂದೋಲನಾ ಸಮಿತಿಯ ಸಹಯೋಗ
ದಲ್ಲಿ ಭಾನುವಾರ ಜಲಸಂವರ್ಧನೆ ಕುರಿತು ಏರ್ಪಡಿಸಿದ್ದ ತರಬೇತಿಯಲ್ಲಿ ಅವರು ಮಾತನಾಡಿದರು.

ಪ್ರತಿಯೊಂದು ಹಳ್ಳಿಯಲ್ಲಿ ಜನತೆ ಸ್ವಯಂ ಸ್ಪೂರ್ತಿಯಿಂದ ಕಲ್ಯಾಣಿ,ಕೆರೆ, ಕಟ್ಟೆಯಲ್ಲಿ ಹೂಳು ಎತ್ತಲು ಮುಂದೆ ಬರಬೇಕು. ಪ್ರತಿ ಭಾನುವಾರ ಇಂಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.  ಒಂದುವರ್ಷದಲ್ಲಿ 100 ಕೆರೆ, ಕಟ್ಟೆಗಳ ಹೂಳು ಎತ್ತುವ ಮೂಲಕ ಜಲಕ್ಷಾಮ ನಿವಾರಣೆ ಮಾಡಬಹುದು. ಜಲಸಂರಕ್ಷಣೆಗೆ ಪೂರಕವಾಗಿ  ಅರಣ್ಯವನ್ನು ಸಂರಕ್ಷಿಸಬೇಕು ಎಂದರು.

ಗುಂಡುತೋಪು, ಸ್ಮಶಾನ, ಕೆರೆಗಳ ಒತ್ತುವರಿ ತೆರವುಗೊಳಿಸಿ ಇವುಗಳ ಸುತ್ತ ಟ್ರಂಚ್‌ ನಿರ್ಮಿಸಲಾಗುವುದು ಎಂದರು. ಹಾಸನ ಸುತ್ತಮುತ್ತ ಇರುವ ಕೆರೆ, ಕಟ್ಟೆ, ಕಲ್ಯಾಣಿಗಳನ್ನು ಗುರುತಿಸಿ ದಾಖಲು ಮಾಡಲಾಗಿದೆ. ಅದೇರೀತಿ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಎಷ್ಟು ಕಲ್ಯಾಣಿಗಳು, ಕೆರೆ, ಕಟ್ಟೆಗಳಿವೆ ಎಂಬು ದನ್ನು ಗುರುತಿಸಿ ದಾಖಲಿಸಲಾಗು ವುದು ಎಂದರು. ಎಷ್ಟು ಪ್ರಮಾಣದಲ್ಲಿ ಕೆರೆ, ಕಟ್ಟೆಗಳಿವೆ ಎಂಬ ಚಿತ್ರಣ ದೊರಕಲಿದೆ ಎಂದು ಹೇಳಿದರು.

ADVERTISEMENT

ಸರ್ಕಾರಿ ಕಚೇರಿಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸ ಬೇಕಿದೆ. ಇದರಿಂದ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದರು. ತಾಲ್ಲೂಕು ರೈತಸಂಘದ ಮುಖಂಡ ಎ.ಎನ್‌.ಮಂಜೇಗೌಡ, ನೀರಾವರಿ ಸವಲತ್ತು, ಸಮರ್ಪಕ ವಿದ್ಯುತ್‌ ಸರಬರಾಜು, ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಗೆ ಆಗ್ರಹಿಸಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಎಚ್‌.ಎನ್‌. ಲೋಕೇಶ್‌ ಮಾತನಾಡಿ, ಸಂಘ, ಸಂಸ್ಥೆಗಳು ರಚನಾತ್ಮಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಹಾಸನ ಮಲೆನಾಡು ಎಂಜಿನಿಯರಿಂಗ್‌ ಕಾಲೇಜು ಪ್ರಾಧ್ಯಾಪಕ ರಮೇಶ್‌, ಹಸಿರುಭೂಮಿ ಪ್ರತಿಷ್ಠಾಪನಾ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಎಚ್‌.ಎನ್‌.ಪ್ರಸನ್ನಕುಮಾರ್‌, ರೈತಸಂಘದ ಮುಖಂಡ ದೊಡ್ಡೇರಿ ಶ್ರೀಕಂಠ ಮಾತನಾಡಿದರು.

ತಾಲ್ಲೂಕು ಕಸಾಪ ಅಧ್ಯಕ್ಷ ಬಿ. ಪ್ರಕಾಶ್‌ಜೈನ್‌ ಇದ್ದರು. ಹಸಿರು ಭೂಮಿ ಪ್ರತಿಷ್ಠಾಪನಾ ಸಂಸ್ಥೆ ಸಂಚಾಲಕ ಸಿ.ಎನ್‌. ಅಶೋಕ್‌ ಸ್ವಾಗತಿಸಿದರೆ, ಜಿ.ಎಸ್‌. ರಾಜ್‌ಕುಮಾರ್‌ ವಂದಿಸಿದರು. ರಾಜಕಾರಣಿಗಳಿಂದ ಶಿಫಾರಸು ಪತ್ರ ತರದಿದ್ದರೆ ಅಧಿಕಾರಿಗಳು ಸವಲತ್ತು ನೀಡುವುದಿಲ್ಲ ಎಂದು ರೈತಸಂಘದ ಮುಖಂಡ ಎ.ಎನ್‌. ಮಂಜೇಗೌಡ ಪ್ರಶ್ನಿಸಿದರು. ಅಂಥ ಅಧಿಕಾರಿಗಳ ಕುರಿತು  ಗಮನಕ್ಕೆ ತಂದರೆ ಅಂಥ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಪ ವಿಭಾಗಾಧಿಕಾರಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.