ADVERTISEMENT

ಕೆರೆ ಒತ್ತುವರಿ ತೆರವು ಶೀಘ್ರ

​ಪ್ರಜಾವಾಣಿ ವಾರ್ತೆ
Published 16 ಜೂನ್ 2017, 6:13 IST
Last Updated 16 ಜೂನ್ 2017, 6:13 IST

ಹೊಳೆನರಸೀಪುರ: ‘ತಾಲ್ಲೂಕಿನ ಉದ್ದೂರು ಹೊಸಹಳ್ಳಿಯ ಬೆಳ್ಳೆಕೆರೆಯನ್ನು ಸುಮಾರು 35 ಮಂದಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಇದನ್ನು ಆಧರಿಸಿ, ಶೀಘ್ರದಲ್ಲೇ ಒತ್ತುವರಿ ತೆರವು ಮಾಡಲಾಗುವುದು’ ಎಂದು ತಹಶೀಲ್ದಾರ್‌ ವೈ.ಎಂ.ರೇಣುಕುಮಾರ್ ತಿಳಿಸಿದ್ದಾರೆ.

ಒತ್ತುವರಿ ಬಗ್ಗೆ 2015ರಲ್ಲೇ ಇಲ್ಲಿನ ತಾಲ್ಲೂಕು ಕಚೇರಿಗೆ ದೂರು ನೀಡಲಾಗಿತ್ತು. ಆದರೆ, ಯಾರೂ ಕ್ರಮ ತೆಗೆದುಕೊಂಡಿರಲಿಲ್ಲ. ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದ ನಂತರ ಈ ಕೆರೆ ಉಳಿಸುವ ಹೋರಾಟಕ್ಕೆ ಚಾಲನೆ ದೊರೆತಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ತಹಶೀಲ್ದಾರರು, ತಾಲ್ಲೂಕು ಕಚೇರಿ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಕೆರೆ ಸರ್ವೆ ಮಾಡಿದ್ದಾರೆ. ಸದ್ಯದಲ್ಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ADVERTISEMENT

ಈ ಕೆರೆಯ ಒಟ್ಟು ವಿಸ್ತೀರ್ಣ 105.29 ಎಕರೆ ಇದೆ. ಅದರಲ್ಲಿ ಶೇ 70 ಭಾಗ ಒತ್ತುವರಿ ಆಗಿದೆ. ನಿರಂತರ ಒತ್ತುವರಿ ನಡದೇ ಇದೆ. ಅನೇಕ ವರ್ಷಗಳಿಂದ ಕೆರೆ ತುಂಬಿಲ್ಲ. ಪ್ರಾರಂಭದಲ್ಲಿ ಪಕ್ಕ ಜಮೀನು ಇರುವವರು ಕೆರೆಯನ್ನೂ ಉತ್ತಿ–ಬಿತ್ತಿ ತಮ್ಮ ಜಮೀನಿಗೆ ಸೇರಿಸಿಕೊಂಡರು. ನಂತರ ಜಮೀನು ಇಲ್ಲದವರೂ ಕೆರೆಯಲ್ಲಿ ಬೇಸಾಯ ಮಾಡಲು ಪ್ರಾರಂಭಿಸಿದರು ಎಂದು ಗ್ರಾಮದ ಅನೇಕರು ದೂರಿದ್ದಾರೆ.

‘ಕೆರೆಯಲ್ಲಿ ಉಳುಮೆ ಮಾಡುವುದು ಬೇಡ. ಗ್ರಾಮದ ದನಕರುಗಳಿಗೆ ನೀರಿಲ್ಲದಂತಾಗುತ್ತದೆ. ಅಂತರ್ಜಲ ಬತ್ತಿಹೋಗುತ್ತದೆ ಎಂದು ನಿರ್ಧಾರ ಮಾಡಿದ್ದರು. ಆದರೆ, ಒತ್ತುವರಿ ಮಾಡಿಕೊಂಡವರು ಇದಕ್ಕೆ ಕಿವಿಗೊಡಲಿಲ್ಲ. ಹೀಗಾಗಿ, ಹೋರಾಟ ಅನಿವಾರ್ಯವಾಯಿತು’ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ರಾಜು, ಮೋಹನ್‌ಕುಮಾರ್‌, ಮುಖಂಡರಾದ ರಾಜಶೇಖರ್‌, ಗಂಗಾಧರ್‌, ಎಚ್.ಎಸ್ ಕುಮಾರ್‌, ರಾಜೇಗೌಡ, ಕವಿತಾ, ಸಣ್ಣಮ್ಮ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.