ADVERTISEMENT

ಕ್ಷಯ ರೋಗಿಗಳ ಸಂಖ್ಯೆ ಹೆಚ್ಚಳ

ವಿಶ್ವ ಕ್ಷಯ ದಿನದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ವೆಂಕಟೇಶ್‌ ಆತಂಕ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2017, 9:41 IST
Last Updated 25 ಮಾರ್ಚ್ 2017, 9:41 IST
ಹಾಸನದಲ್ಲಿ ಶುಕ್ರವಾರ ವಿಶ್ವ ಕ್ಷಯ ದಿನದ ಅಂಗವಾಗಿ ನರ್ಸಿಂಗ್‌ ವಿದ್ಯಾರ್ಥಿಗಳು ಜಾಥಾ ನಡೆಸಿದರು.
ಹಾಸನದಲ್ಲಿ ಶುಕ್ರವಾರ ವಿಶ್ವ ಕ್ಷಯ ದಿನದ ಅಂಗವಾಗಿ ನರ್ಸಿಂಗ್‌ ವಿದ್ಯಾರ್ಥಿಗಳು ಜಾಥಾ ನಡೆಸಿದರು.   

ಹಾಸನ: ಕ್ಷಯ ರೋಗ ನಿಯಂತ್ರಣಕ್ಕೆ ಸರ್ಕಾರ ಹಲವು ಕಾರ್ಯಕ್ರಮ ಜಾರಿಗೆ ತಂದಿದ್ದರೂ ಸಹ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಮಹಾ ವಿದ್ಯಾಲಯ, ಜಿಲ್ಲಾ ಕ್ಷಯ ನಿಯಂತ್ರಣ ಘಟಕ ಹಾಗೂ ಇತರೆ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ವಿಶ್ವ ಕ್ಷಯ ದಿನ’ ಉದ್ಘಾಟಿಸಿ ಅವರು ಮಾತನಾಡಿದರು.

ಈ ವರ್ಷದ ಪ್ರಮುಖ ಘೋಷ ವಾಕ್ಯ ‘ಎಲ್ಲರೂ ಒಟ್ಟಾಗಿ ಕ್ಷಯ ರೋಗವನ್ನು ಕೊನೆಗಾಣಿಸಿ’ ಎಂಬಂತೆ ಇದರ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು.
ಕ್ಷಯ ರೋಗಿಗಳಿಗೆ ಇಲಾಖೆಯಿಂದ ನಿರಂತರ ಪರೀಕ್ಷೆ, ಚಿಕಿತ್ಸೆ ಹಾಗೂ ಸಲಹೆ ನೀಡಲಾಗುತ್ತಿದೆ. 

ಹೊಸ ರೋಗಿಗಳನ್ನು ಆದಷ್ಟು ಬೇಗ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಅವಶ್ಯಕತೆ ಇದೆ. ಆದ್ದರಿಂದ ಸಾರ್ವಜನಿಕರು ಕ್ಷಯ ರೋಗದ ಬಗ್ಗೆ ಸೂಕ್ತ ಮಾಹಿತಿ ಪಡೆಯಬೇಕು. ನಿಗದಿತ ಸಮಯದಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಕ್ಷಯ ಮತ್ತು ಏಡ್ಸ್ ನಿಯಂತ್ರಣಾಧಿಕಾರಿ ಡಾ.ನಾಗೇಶ್ ಆರಾಧ್ಯ ಮಾತನಾಡಿ, ಸಾರ್ವಜನಿಕರಲ್ಲಿ ಕಾಯಿಲೆ ಬಗ್ಗೆ ಇರುವ ತಪ್ಪು ಕಲ್ಪನೆಗಳ ಬಗ್ಗೆ ಮಾಹಿತಿ ಮತ್ತು ಜಾಗೃತಿ ಮೂಡಿಸಲು ಜಾಥಾ, ವಿಶೇಷ ಉಪನ್ಯಾಸ, ಬೀದಿ ನಾಟಕ, ಶಾಲಾ ಕಾಲೇಜುಗಳಲ್ಲಿ ಚರ್ಚಾ ಸ್ಪರ್ಧೆ, ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಸಂಪೂರ್ಣ ಕ್ಷಯ ನಿರ್ಮೂಲನೆಗೆ ಸರ್ಕಾರಿ ಆಸ್ಪತ್ರೆಗಳಿಂದ ಮಾತ್ರ ಸಾಧ್ಯವಿಲ್ಲ. ಎಲ್ಲಾ ಖಾಸಗಿ ಹಾಗೂ ಸಾರ್ವಜನಿಕರು ಕೈಜೋಡಿಸಬೇಕು ಎಂದು ತಿಳಿಸಿದರು.

ವೈದ್ಯಕೀಯ ಕಾಲೇಜಿನ ಮುಖ್ಯಸ್ಥ ಡಾ.ಸುಂದರ್, ಸಹ ಪ್ರಾಧ್ಯಾಪಕಿ ಡಾ.ಶ್ರೀಲತಾ ಮಾತನಾಡಿ, ಕ್ಷಯ ರೋಗದ ನಿಯಂತ್ರಣಕ್ಕೆ ಈವರೆಗೆ ಡಾಟ್ಸ್ ಚಾಲ್ತಿಯಲ್ಲಿತ್ತು. ಇದರ ಮುಂದು ವರಿದ ಭಾಗವಾಗಿ ಇಂದು ಪ್ರತಿದಿನ ತೆಗೆದುಕೊಳ್ಳುವ ಚಿಕಿತ್ಸೆಯಾಗಿದೆ. ನಿರಂತ ರ ಹಾಗೂ ಕಡ್ಡಾಯವಾಗಿ ಚಿಕಿತ್ಸೆ ಪಡೆ ಯುವು ದರಿಂದ ಕ್ಷಯರೋಗವನ್ನು ಸಂಪೂರ್ಣ ಗುಣಪಡಿಸಬಹುದು ಎಂದು ಅವರು ಹೇಳಿದರು. 

ವೈದ್ಯಕೀಯ ಮಹಾವಿದ್ಯಾಲಯದ ಹೆಚ್ಚುವರಿ ಪ್ರಾಂಶುಪಾಲರಾದ ಡಾ. ಸುಧಾ ಮಾತನಾಡಿ, ಕ್ಷಯ ರೋಗದ ಬಗ್ಗೆ ಜನರಿಗೆ ಸೂಕ್ತ ತಿಳಿವಳಿಕೆ ನೀಡಲು ಹೆಚ್ಚು ಪ್ರಚಾರ ಕಾರ್ಯಕ್ರಮ ಹಮ್ಮಿ ಕೊಳ್ಳಬೇಕು ಎಂದರು.

ಕಾರ್ಯಕ್ರಮದ ಪ್ರಯುಕ್ತ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಆಡಳಿತಾಧಿಕಾರಿ ಚಿದಾನಂದ, ನಾಗರಾಜು, ಕ್ಷಯ ನಿಯಂತ್ರಣ ಮುಖ್ಯಸ್ಥ ಡಾ.ಚನ್ನವೀರಪ್ಪ ಇದ್ದರು.

*
ಕ್ಷಯ ನಿಯಂತ್ರಣಕ್ಕಾಗಿ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಕ್ಷಯ ರೋಗ ಮುಕ್ತ ಜಿಲ್ಲೆಯಾಗಿ ಮಾಡಲಾಗುವುದು.
-ಡಾ.ನಾಗೇಶ್ ಆರಾಧ್ಯ, ಜಿಲ್ಲಾ ಕ್ಷಯ ರೋಗ ಮತ್ತು ಏಡ್ಸ್ ನಿಯಂತ್ರಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT