ADVERTISEMENT

ಗ್ರಾಮಸಭೆಯಲ್ಲಿ ಖಾಲಿ ಬಿಂದಿಗೆ ಪ್ರದರ್ಶನ

ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 7:05 IST
Last Updated 31 ಜನವರಿ 2017, 7:05 IST
ಗ್ರಾಮಸಭೆಯಲ್ಲಿ ಖಾಲಿ ಬಿಂದಿಗೆ ಪ್ರದರ್ಶನ
ಗ್ರಾಮಸಭೆಯಲ್ಲಿ ಖಾಲಿ ಬಿಂದಿಗೆ ಪ್ರದರ್ಶನ   

ಹಳೇಬೀಡು: ಗ್ರಾಮದ ಕೊಳವೆ ಬಾವಿ ಒಣಗಿರುವುದರಿಂದ ಗ್ರಾಮಸ್ಥರು ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಗ್ರಾಮ ಪಂಚಾಯಿತಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮಕೈಗೊಂಡಿಲ್ಲ ಎಂದು ಕೊಮಾರ್‌್್ನಳ್ಳಿ (ಕಳ್ಳಿಕೊಪ್ಪಲು) ಗ್ರಾಮಸ್ಥರು ಗ್ರಾಮಸಭೆಯ ಮುಂದೆ ಖಾಲಿಕೊಡ ಪ್ರದರ್ಶಿಸಿ ಸೋಮವಾರ ಪ್ರತಿಭಟಿಸಿದರು.

ಸವಾಸಿಹಳ್ಳಿ ಗ್ರಾಮಪಂಚಾಯಿತಿ ಗ್ರಾಮಸಭೆ ವೇಳೆಯೆ ಈ ಪ್ರತಿಭಟನೆ ನಡೆಯಿತು. ಕಿರುನೀರು ಸರಬರಾಜು ಕೊಳವೆಬಾವಿ ಬತ್ತಿ ಒಂದು ತಿಂಗಳು ಕಳೆದರೂ ಗ್ರಾಮಕ್ಕೆ ಬೇರೆ ಯಾವುದೇ ರೂಪದಲ್ಲಿಯೂ ನೀರು ಬಂದಿಲ್ಲ ಎಂದು ಆರೋಪಿಸಿದರು. ಗ್ರಾಮದಲ್ಲಿ ನೀರು ಸೇದುವ ಎರಡೂ ತೆರೆದ ಬಾವಿಯಲ್ಲಿ ಅಲ್ಪಪ್ರಮಾಣದ ನೀರು ಇದೆ. ಗ್ರಾಮ ಪಂಚಾಯಿತಿ ಬಾವಿ ಸ್ವಚ್ಛತೆಯ ಕೆಲಸಕ್ಕೆ ಕೈಹಾಕಿಲ್ಲ ಎಂದು ಗ್ರಾಮದ ಮುಖಂಡ ಕೆ.ಪಿ.ಕುಮಾರ್‌ ಆರೋಪಿಸಿದರು.

ವಸತಿರಹಿತರಿಗೆ ನಿವೇಶನ ಕಲ್ಪಿಸಲು ಆದ್ಯತೆ ನೀಡುತ್ತಿಲ್ಲ ಎಂದು ದೂರಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಸ್‌.ತಮ್ಮಣ್ಣಗೌಡ ಗ್ರಾಮಸ್ಥರಿಗೆ ಸಮಾಧಾನ ಹೇಳಿದರು. ಕೊಮಾರ್‌್ನಳ್ಳಿಗೆ ಶೀಘ್ರದಲ್ಲಿ ಟ್ಯಾಂಕರ್‌ ನೀರು ಪೂರೈಕೆ ಮಾಡಬೇಕು. ಗ್ರಾಮ ಪಂಚಾಯಿತಿ ಶೀಘ್ರವೇ ಕಾರ್ಯಪ್ರವೃತ್ತರಾಗಬೇಕು. ಹೊಸ ಕೊಳವೆಬಾವಿ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಬೇಕು ಎಂದು ತಿಳಿಸಿದರು.

ತಾ.ಪಂ ಸದಸ್ಯ ಎ.ವಿ,ವಿಜಯ್‌ ಕುಮಾರ್‌ ಮಾತನಾಡಿ, ಶಾಸಕರ ಅನುದಾನದಲ್ಲಿ ಕೊಮಾರ್‌ನಹಳ್ಳಿಯಲ್ಲಿ ಕೊಳವೆ ಮಾಡಿಸಲು ಚರ್ಚಿಸುತ್ತೇವೆ ಎಂದರು.  ಬಸವ ವಸತಿಯೋಜನೆ ಅಡಿಯಲ್ಲಿ ಫಲಾನುಭವಿಗಳ ಆಯ್ಕೆ ಮಾಡಲಾಯಿತು. ಉಸ್ತುವಾರಿ ಅಧಿಕಾರಿ ಸಮೂಹ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಎಚ್‌.ಪಿ.ಶಂಕರಪ್ಪ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶಿವಣ್ಣ, ತಾಲ್ಲೂಕು ಪಂಚಾಯಿತಿ ಸದಸ್ಯ ಗಂಗೂರು ರಂಗೇಗೌಡ, ಜೆಡಿಎಸ್‌ ಮುಖಂಡ ದಿಲೀಪ್‌ ಕುಮಾರ್‌ ಮಾತನಾಡಿದರು. ಗ್ರಾ.ಪಂ ಅಧ್ಯಕ್ಷೆ ನಿರ್ಮಲಾ ಅಧ್ಯಕ್ಷತೆವಹಿಸಿದ್ದರು. ಗ್ರಾ.ಪಂ ಉಪಾಧ್ಯಕ್ಷ ವಿ.ಆರ್‌. ಜಗದೀಶ್‌, ಸದಸ್ಯರಾದ ಗಿರೀಶ್‌, ಸುರೇಶ್‌, ಮಂಜುನಾಥ್‌, ಸವಿತಾ, ರಾಜಾಭೋವಿ, ನಾಗಮ್ಮ, ಪುಟ್ಟಲಕ್ಷ್ಮಿ, ಮಹೇಶ್‌, ಜಯಮ್ಮ, ಯಲ್ಲಯ್ಯ, ಮಂಜುಳಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.