ADVERTISEMENT

ಗ್ರಾಹಕರಿಗೆ ಮೋಡಿ ಮಾಡಿದ ‘ಚಿಣ್ಣರ ಸಂತೆ’

ತರಕಾರಿ, ಹಣ್ಣಿನ ವ್ಯಾಪಾರ ಮಾಡಿದ ಮಕ್ಕಳು; ತಂಪು ಪಾನೀಯಗಳಿಗೆ ಬಲು ಬೇಡಿಕೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 8:29 IST
Last Updated 17 ಏಪ್ರಿಲ್ 2017, 8:29 IST
ಹಾಸನ:  ಮಹಾರಾಜ ಪಾರ್ಕ್‌ಗೆ ವಾಯು ವಿಹಾರಕ್ಕೆ ಬಂದವರಿಗೆ ಅಚ್ಚರಿ ಕಾದಿತ್ತು. ಸದಾ ನಿಶ್ಯಬ್ಧವಾಗಿರುತ್ತಿದ್ದ ಉದ್ಯಾನದ ರಸ್ತೆಯಲ್ಲಿ ಕಾಲಿಡಲು ಆಗುತ್ತಿರಲಿಲ್ಲ. ಆಗಲೇ ಗೊತ್ತಾಗಿದ್ದು ಇದು ‘ಮಕ್ಕಳ ಸಂತೆ’ ಎಂದು.
 
‘ಚಿಣ್ಣರ ಚಿನ್ಮೇಳ’ ಬೇಸಿಗೆ ಶಿಬಿರದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಚಿಣ್ಣರ ಸಂತೆ ಅಕ್ಷರಶಃ ಮಾರುಕಟ್ಟೆಯಾಗಿತ್ತು. ತರಕಾರಿ, ತಿಂಡಿ–ತಿನಿಸು, ಆಟಿಕೆ, ಧಾನ್ಯ ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟ ಮಾಡುವಲ್ಲಿ ಮಕ್ಕಳು ವ್ಯಾಪಾರಿಗಳನ್ನು ಮೀರಿಸುವ ಚಾಕಚಕ್ಯತೆ ಮೆರೆದರು.  
ಮಧ್ಯಾಹ್ನ 3 ರಿಂದ 5ರವರೆಗೆ ಸಂತೆ ಜೋರಾಗಿ ನಡೆಯಿತು.
 
ಸಂತೆಯಲ್ಲಿ ವಿವಿಧ ಬಗೆಯ ಸೊಪ್ಪು, ತರಕಾರಿಗಳು, ಸಿಹಿ ತಿನಿಸುಗಳು, ತೆಂಗಿನಕಾಯಿ, ಹಣ್ಣುಗಳು, ಕಾಫಿ, ಟೀ, ಜ್ಯೂಸ್‌, ಐಸ್‌ಕ್ಯಾಂಡಿಗಳನ್ನು ಮಾರಾಟಕ್ಕೆ ತರಲಾಗಿತ್ತು. ಪೋಷಕರು, ಸಾರ್ವಜನಿಕರು ಚಿಣ್ಣರ ಬಳಿ ವಸ್ತುಗಳನ್ನು ಖರೀದಿಸಿ ಉತ್ಸಾಹ ತುಂಬಿದರು. 
 
ಎಲ್ಲಾ ಮಕ್ಕಳು ಮನೆಯಿಂದ ಏನಾದರೂ ಸಾಮಗ್ರಿ ತಂದು ‘ಸಂತೆಯಲ್ಲಿ ವ್ಯಾಪಾರ’  ಮಾಡಬೇಕೆಂದು ಶಿಬಿರದ ಸಂಯೋಜಕರು ಸೂಚನೆ ನೀಡಿದ್ದರು. ಅದರಂತೆ ಮಕ್ಕಳು ತಾವು ತಂದಿದ್ದ ವಸ್ತುಗಳನ್ನು ಉದ್ಯಾನದ ರಸ್ತೆಯ ಎಡ, ಬಲ ಬದಿಯಲ್ಲಿ ತಮಗೆ ಇಷ್ಟವಾದ ಜಾಗ ಕಾಯ್ದಿಟ್ಟುಕೊಂಡು ಎಲ್ಲ ವಸ್ತುಗಳನ್ನು ಜೋಡಿಸಿಕೊಂಡರು.
 
ಮನೆಯಲ್ಲಿ ತಯಾರಿಸಿದ ತಿಂಡಿಗಳು, ಕೈ ತೋಟದಲ್ಲಿ ಬೆಳೆದ ತರಕಾರಿ, ಹಣ್ಣುಗಳನ್ನು ತಂದಿದ್ದರು. ಮಾರುಕಟ್ಟೆಯಲ್ಲಿ ಲಭ್ಯ ಇರುವ ಕರುಕಲು ತಿಂಡಿಯನ್ನು ಮಕ್ಕಳು ಖರೀದಿಸಿ ಸಂತೆಯಲ್ಲಿ ಮಾರಾಟಕ್ಕೆ ತಂದಿದ್ದರು. 
 
ಚುರುಮುರಿ ₹ 5, ಸೌತೆಕಾಯಿ ಎರಡಕ್ಕೆ ₹ 10, ಐಸ್‌ಕ್ಯಾಂಡಿ ₹ 2 ರೂಪಾಯಿ ತಗೊಳ್ಳಿ ಸಾರ್‌, ಅಂಕಲ್‌, ಆಂಟಿ ಎಂದು ಕರೆಯುತ್ತಿದ್ದರು. ರವೆ ಉಂಡೆ, ರಾಗಿ ಹಿಟ್ಟಿನಿಂದ ತಯಾರಿಸಿದ್ದ ಸತ್ವಭರಿತ ಉಂಡೆ ಮತ್ತು ಹಲಸಿನ ಹಣ್ಣುಗಳ ವ್ಯಾಪಾರ ಜೋರಾಗಿ ನಡೆಯಿತು.
 
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದ ಗ್ರಾಹಕರಿಗೆ ಕಲ್ಲಂಗಡಿ, ಅನಾನಸ್‌ ಹಾಗೂ ವಿವಿಧ ಹಣ್ಣುಗಳಿಂದ ಜ್ಯೂಸ್‌ಗಳು ಲಭ್ಯವಿದ್ದವು. ಕೆಲ ಮಕ್ಕಳು ಮಜ್ಜಿಗೆ ಪ್ಯಾಕೆಟ್‌ ಹಿಡಿದು ಮಾರಿದರೆ, ಬಿಸಿಲಿನ ತೀವ್ರತೆಗೆ ದಣಿದವರು ಎಳನೀರನ್ನು ಕುಡಿದರು.
 
ಮಕ್ಕಳ ಸಂತೆ ವ್ಯಾಪಾರ ಕಂಡು ಉದ್ಯಾನಕ್ಕೆ ಬಂದ ಗ್ರಾಹಕರು ಚೌಕಸಿ ಮೂಲಕ ಅಗತ್ಯ ವಸ್ತುಗಳನ್ನು ಖರೀದಿಸಿದರು. ಮನೆಯಲ್ಲಿ ತಯಾರಿಸಿ ತಂದಿದ್ದ ಚಕ್ಕಲಿ, ಸಿಹಿ ತಿನಿಸುಗಳು ಸಂತೆಯಲ್ಲಿ ಖಾಲಿಯಾದವು.  ಸಂತೆ ವ್ಯಾಪಾರದ ಜತೆಗೆ ರಂಗತಂಡದ ತರಬೇತುದಾರರ ತಮಟೆಯ ತಾಳಕ್ಕೆ ಮಕ್ಕಳು ಹೆಜ್ಜೆ ಹಾಕಿ ಸಂಭ್ರಮಿಸಿದರು.
 
‘ಮಕ್ಕಳಲ್ಲಿ ವ್ಯವಹಾರ ಜ್ಞಾನ ಬೆಳೆಸಲು ಮಕ್ಕಳ ಸಂತೆ ಸಹಕಾರಿಯಾಗಲಿದೆ. ಅಗತ್ಯವಸ್ತುಗಳನ್ನು ಮಾರುಕಟ್ಟೆಯಲ್ಲಿ ಹೇಗೆ ಖರೀದಿಸಬೇಕು ಎಂಬುದು ಮಕ್ಕಳಿಗೆ ಅರ್ಥವಾಗುತ್ತದೆ’ ಎಂದು ಶಿಬಿರದ ಸಂಯೋಜಕರು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.